ADVERTISEMENT

ಹಿಂದೂ ಅನುಸಾರ ಮದುವೆಯಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ: ವೈವಾಹಿಕ ಹಕ್ಕಿಗೆ ಸಂಚಕಾರ

ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯ‍

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 15:55 IST
Last Updated 6 ನವೆಂಬರ್ 2023, 15:55 IST
ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌   

ಬೆಂಗಳೂರು: ‘ಹಿಂದೂ ಧರ್ಮದ ಅನುಸಾರ ಮದುವೆಯಾಗಿ ನಂತರ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ ಪತಿಯ ಜೊತೆಗಿನ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ’ ಎಂದು ಕರ್ನಾಟಕ ಹೈಕೋರ್ಟ್‌ ಅಭಿಪ್ರಾಯ‍ಪಟ್ಟಿದೆ.

ಪ್ರಕರಣವೊಂದರಲ್ಲಿ, ಕೌಟುಂಬಿಕ ದೌರ್ಜನ್ಯ ಆರೋಪದಡಿ ಪತ್ನಿಗೆ ₹4 ಲಕ್ಷ ಪರಿಹಾರ ನೀಡುವಂತೆ ಪತಿಗೆ ನಿರ್ದೇಶಿಸಿದ್ದ ಬೆಂಗಳೂರಿನ 67ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿದೆ.

‘ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಕಾರಣ ಮದುವೆಯೇ ಅಸಿಂಧುಗೊಂಡಿದೆ. ಆದ್ದರಿಂದ, ಸೆಷನ್ಸ್‌ ನ್ಯಾಯಾಲಯ ಪತ್ನಿಗೆ ₹4 ಲಕ್ಷ ಪರಿಹಾರ ಘೋಷಿಸುವ ಮೂಲಕ ತಪ್ಪೆಸಗಿದೆ. ಇಲ್ಲಿ ನ್ಯಾಯದಾನದ ಹಾದಿತಪ್ಪಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಪತಿ ದೌರ್ಜನ್ಯ ಎಸಗಿರುವುದು ಸಾಬೀತಾಗದ ಹೊರತು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ–2005ರ ಅಡಿಯಲ್ಲಿ ಪತ್ನಿಗೆ ಪರಿಹಾರ ನೀಡಲು ಅವಕಾಶವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ADVERTISEMENT

‘ಮದುವೆ ಅಸ್ವಿತ್ವದಲ್ಲಿದೆ ಮತ್ತು ಜೀವನ ನಿರ್ವಹಣೆ ಮಾಡಲು ಪತ್ನಿ ಅಸಮರ್ಥರಾಗಿದ್ದಾರೆ ಎಂಬ ಏಕೈಕ ಆಧಾರದ ಮೇಲೆ ಜೀವನಾಂಶ ಪಾವತಿಸಲು ಪತಿಗೆ ಸೆಷನ್ಸ್‌ ನ್ಯಾಯಾಲಯ ನಿರ್ದೇಶಿಸಿದೆ. ಆದರೆ, ಪತ್ನಿಯು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ವಿವಾಹ ವಿಚ್ಛೇದನ ಮಂಜೂರಾಗದೇ ಇದ್ದರೂ ಆಕೆ  ಪತಿಯೊಂದಿಗೆ ಹೊಂದಿದ್ದ ಎಲ್ಲ ವೈವಾಹಿಕ ಹಕ್ಕುಗಳನ್ನು ಕಳೆದುಕೊಂಡಂತಾಗುತ್ತದೆ’ ಎಂದು ಹೇಳಿದೆ.

‘ಕೌಟುಂಬಿಕ ದೌರ್ಜನ್ಯ ಕೃತ್ಯ ಸಾಬೀತಾದರೆ ಮಾತ್ರ ಕಾಯ್ದೆಯ ಕಲಂ 12ರ ಅಡಿಯಲ್ಲಿ ನೊಂದ ವ್ಯಕ್ತಿಗಳು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪರಿಹಾರ ಮಂಜೂರು ಮಾಡಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಎರಡೂ ಪತ್ನಿಯ ಮೇಲೆ ಪತಿ ಕೌಟುಂಬಿಕ ದೌರ್ಜನ್ಯ ಎಸಗಿಲ್ಲ ಎಂದು ತೀರ್ಮಾನಿಸಿವೆ. ಇಂತಹ ಸನ್ನಿವೇಶದಲ್ಲಿ ಪರಿಹಾರ ಘೋಷಿಸಲು ಅವಕಾಶವಿಲ್ಲ’ ಎಂದು ನ್ಯಾಯಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.