ADVERTISEMENT

ಜನರ ಜೀವ ಉಳಿಸಲು ವಿಫಲ: ರಾಜ್ಯ ಸರ್ಕಾರದ ವಿರುದ್ಧ ಮನೆಗಳಲ್ಲೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮೇ 2021, 19:45 IST
Last Updated 15 ಮೇ 2021, 19:45 IST
ಪ್ರತಿಭಟನಾನಿರತ ಮಹಿಳಾ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು
ಪ್ರತಿಭಟನಾನಿರತ ಮಹಿಳಾ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು   

ಬೆಂಗಳೂರು: ‘ಕೋವಿಡ್‌ ಸಂದರ್ಭದಲ್ಲಿ ಜನರ ಜೀವ, ಜೀವನ ಉಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಶನಿವಾರ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಸರ್ಕಾರದ ಧೋರಣೆಯನ್ನು ಖಂಡಿಸಿದರು.

ಲಾಕ್‌ಡೌನ್‌ ಕಾರಣ ಬಹುತೇಕರು ತಮ್ಮ ಮನೆಗಳು, ಹಾಗೂ ಮನೆ ಸಮೀಪದ ವೃತ್ತಗಳಲ್ಲಿ ಸೇರಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು. ಸರ್ಕಾರದ ವಿರುದ್ಧ ಘೋಷಣೆಯುಳ್ಳ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಜನಾಗ್ರಹ ಆಂದೋಲನದ ಕರೆಯಂತೆ ನಡೆದ ಈ ಪತ್ರಿಭಟನೆಯಲ್ಲಿ ಪೌರಕಾರ್ಮಿಕರು, ರೇಸ್‌ಕೋರ್ಸ್‌ ಕಾರ್ಮಿಕರು, ಒಳಚರಂಡಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿ ಹಲವರು ಪಾಲ್ಗೊಂಡಿದ್ದರು.

ADVERTISEMENT

‘ಸರ್ಕಾರದ ಧೋರಣೆಯಿಂದಾಗಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಈ ಬಿಕ್ಕಟ್ಟಿನ ಬಗ್ಗೆ 400ಕ್ಕೂ ಹೆಚ್ಚು ಮುಖಂಡರು, ಮುಖ್ಯಮಂತ್ರಿ ಅವರಿಗೆ ಮನವಿ ನೀಡಿದ್ದೆವು. ಅದನ್ನು ಪರಿಗಣಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.

‘ಸೋಂಕಿತರ ಚಿಕಿತ್ಸೆಗೆ ಸಣ್ಣ ಮಟ್ಟದಲ್ಲಿ ಹಾಸಿಗೆಗಳ ಸಂಖ್ಯೆ ಏರಿಸಿದ್ದು ಬಿಟ್ಟರೆ, ಜನರಿಗೆ ನೆರವಾಗುವ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ’ ಎಂದೂ ವಿಷಾದಿಸಿದ್ದಾರೆ.

‘ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ, ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದೇವನೂರ ಮಹಾದೇವ, ಡಾ. ಕೆ.ಮರುಳಸಿದ್ದಪ್ಪ, ಬಿ.ಟಿ. ಲಲಿತಾ ನಾಯ್ಕ್, ಶಶಿಕಾಂತ್ ಸೆಂಥಿಲ್, ಮಾವಳ್ಳಿ ಶಂಕರ್, ಯಾಸಿನ್ ಮಲ್ಪೆ, ಸಿ.ಎಸ್. ದ್ವಾರಕಾನಾಥ್, ಬಡಗಲಪುರ ನಾಗೇಂದ್ರ, ಎಚ್. ಆರ್. ಬಸವರಾಜಪ್ಪ, ಎಸ್. ಬಾಲನ್, ಎನ್. ವೆಂಕಟೇಶ್, ಕೆ.ಎಲ್. ಅಶೋಕ್ ಹಾಗೂ ಇತರರು ಪ್ರತಿಭಟನೆಗೆ ಬೆಂಬಲ ನೀಡಿದ್ದರು.

ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆ
'ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ’ ನೇತೃತ್ವದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ತಮ್ಮ ಮನೆಗಳಲ್ಲಿ ಪ್ರತಿಭಟನೆ ನಡೆಸಿದರು.

‘ಕೋವಿಡ್ ಪರಿಹಾರವಾಗಿ ತಲಾ ₹10,000 ಪಾವತಿಸಬೇಕು, ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು, ಉಚಿತವಾಗಿ ಲಸಿಕೆ ಹಾಕಬೇಕು, ಕಟ್ಟಡ ನಿರ್ಮಾಣ ಹಾಗೂ ವಲಸೆ ಕಾರ್ಮಿಕರಿಗೆ ರೇಷನ್ ಕಿಟ್ ನೀಡಬೇಕು’ ಎಂದು ಒತ್ತಾಯಿಸಿದರು.

*
ರಾಜ್ಯದಲ್ಲಿ ಆಗುತ್ತಿರುವ ಸಾವುಗಳಿಗೆ ಸರ್ಕಾರವೇ ಕಾರಣ. ಲಾಕ್‌ಡೌನ್‌ನಿಂದ ಜನಸಾಮಾನ್ಯರ ಹೊಟ್ಟೆಪಾಡಿಗೆ ಪೆಟ್ಟು ಬಿದ್ದಿದೆ.
-ಎಸ್. ಬಾಲನ್, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.