
ಪ್ರಜ್ವಲ್ ರಿತ್ತಿ, ಸಚಿವ ಎಚ್.ಕೆ. ಪಾಟೀಲ ಅವರು ಪ್ರಜ್ವಲ್ ರಿತ್ತಿ ಸನ್ಮಾನಿಸಿದ ಸಂದರ್ಭ
ಪ್ರಜಾವಾಣಿ ಚಿತ್ರ
ಲಕ್ಕುಂಡಿಯ ಇತಿಹಾಸ ಬಹಳ ಇದೆ. ಆದರೆ, ಇದುವರೆಗೆ ಅದು ಮರೆಮಾಚಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಂಪಿ, ವಿಜಯಪುರ, ಬಾದಾಮಿಯಂತಹ ತಾಣಗಳಷ್ಟೇ ಜನಪ್ರಿಯ ಆಗಿದ್ದವು. ಈಗ 14 ವರ್ಷದ ಬಾಲಕ ಪ್ರಜ್ವಲ್ ರಿತ್ತಿಯಿಂದಾಗಿ ಲಕ್ಕುಂಡಿಯ ಖ್ಯಾತಿ ರಾಜ್ಯಕ್ಕೆ ಗೊತ್ತಾಗಿದೆ. ಖರೇನೇ ಲಕ್ಕುಂಡಿ ಹೀರೋ ಅವ...
ಮನೆ ಕಟ್ಟಿಸಲು ಪಾಯ ತೆಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ ಕುರಿತಾಗಿ ಊರಿನ ಹಿರಿಯರು, ಅವನಿಗೆ ಪಾಠ ಹೇಳುವ ಶಿಕ್ಷಕರು, ಸಹಪಾಠಿಗಳು ಅಭಿಮಾನದಿಂದ ಹೇಳುವ ಮಾತುಗಳಿವು. ರಿತ್ತಿ ಈಗ, ‘ಹಾನೆಸ್ಟ್ ಬಾಯ್ ಆಫ್ ಕರ್ನಾಟಕ’ ಎಂಬ ಮಾತನ್ನು ಅವರು ಅಭಿಮಾನದಿಂದ ಹೇಳುತ್ತಾರೆ.
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಪ್ರಜ್ವಲ್ ರಿತ್ತಿ ಬಡ ಕುಟುಂಬದ ಹುಡುಗ.
ಆತ ತನ್ನ ಅಪ್ಪನನ್ನು ಕಳೆದುಕೊಂಡು ನಾಲ್ಕು ವರ್ಷಗಳಾಗಿವೆ. ಪ್ರಜ್ವಲ್ ಮತ್ತು ಅಮ್ಮ ಗಂಗವ್ವಳಿಗೆ ಈಗ ಅಜ್ಜಿ, ಮಾವನೇ ಆಸರೆ. ಆದರೆ, ಅವರ ಇಡೀ ಪರಿವಾರ ಪ್ರಾಮಾಣಿಕತೆಯ ಗೆರೆಯ ಮೇಲೆಯೇ ಜೀವನ ನಡೆಸುತ್ತಿದೆ. ಲಕ್ಷಾಂತರ ಮೌಲ್ಯದ ಚಿನ್ನ ಸಿಕ್ಕರೂ ಅದನ್ನು ಮುಚ್ಚಿಟ್ಟುಕೊಳ್ಳಬೇಕು ಎಂಬ ಆಸೆ ತೋರಿಸದೇ, ಪ್ರಾಮಾಣಿಕತೆಯ ಗೆರೆ ಆಚೀಚೆ ಸರಿಯದಂತೆ ಬದುಕು ಸಾಗಿಸುತ್ತಿದೆ ಎಂದು ಇಡೀ ಊರಿಗೇ ಊರೇ ಮೆಚ್ಚುಗೆಯ ಮಾತುಗಳನ್ನು ಆಡುತ್ತದೆ.
ಹೀಗೆ ಅಪ್ರತಿಮ ಪ್ರಾಮಾಣಿಕತೆ ಮೆರೆದು ರಾಜ್ಯದ ಕಣ್ಮಣಿಯಾಗಿರುವ ಪ್ರಜ್ವಲ್ ಭೇಟಿಯಾಗಲು ಆತನ ಮನೆಗೆ ಹೋದಾಗ, ‘ಅವ ಸಾಲಿಗೆ ಹೋಗ್ಯಾನ್ರೀ’ ಅಂದರು ರಿತ್ತಿಯ ಅಜ್ಜಿ ಗಿರಿಜಮ್ಮ.
ಅಲ್ಲಿಂದ ಪ್ರಜ್ವಲ್ ಓದುತ್ತಿರುವ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್.ಪಾಟೀಲ ಪ್ರೌಢಶಾಲೆಗೆ ಹೋದಾಗ ಊಟದ ಸಮಯ ಹತ್ತಿರವಾಗಿತ್ತು. ಶಿಕ್ಷಕರ ಅನುಮತಿ ಪಡೆದು, ಎಂಟನೇ ತರಗತಿ ಕ್ಲಾಸ್‌ರೂಂ ಬಳಿ ತಲುಪಿದಾಗ ಕೊಠಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಹತ್ತಿಪ್ಪತ್ತು ಸೆಕೆಂಡ್‌ನಲ್ಲಿ ದೃಷ್ಟಿ ಆಚೀಚೆ ಸರಿಸುವ ವೇಳೆಗೆ ರಿತ್ತಿ ಕಣ್ಣಿಗೆ ಬಿದ್ದ.
‘ಏನಪ್ಪಾ, ಹೇಗಿದ್ದೀಯಾ’ ಎಂಬ ಪ್ರಶ್ನೆಗೆ ‘ಆರಾಮಾಗಿದ್ದೀನ್ರೀ’ ಎಂಬುದು ರಿತ್ತಿ ಉತ್ತರವಾಗಿತ್ತು.
ಆತನಿಗೆ ಉಚ್ಛಾರ ದೋಷವಿದ್ದು, ಮಾತನಾಡುವಾಗ ಶಬ್ದಗಳು ಸ್ಪಷ್ಟವಾಗಿ ಹೊರಹೊಮ್ಮುವುದಿಲ್ಲ. ತಾಯಿ ಗಂಗವ್ವಳಿಗೂ ಇದೇ ಸಮಸ್ಯೆ ಇದೆ ಎಂದು ಶಾಲೆಯ ಮುಖ್ಯಶಿಕ್ಷಕ ಅನಿಲ್ ಕುಮಾರ್ ಪೂಜಾರ ಹೇಳಿದರು.
‘ಚಿನ್ನ ಎಲ್ಲಿ ಸಿಕ್ಕಿತು, ಅಷ್ಟೊಂದು ಚಿನ್ನ ನೋಡಿದಾಗ ನಾನೇ ಇಟ್ಟುಕೊಳ್ಳಬೇಕು ಅಂತ ಅನ್ನಿಸಲಿಲ್ಲವೇ’ ಎಂಬ ಪ್ರಶ್ನೆಗೆ ರಿತ್ತಿ ಉತ್ತರ ಹೀಗಿತ್ತು...
‘ಲಕ್ಕುಂಡಿ ಗ್ರಾಮದ ನಾಲ್ಕನೇ ವಾರ್ಡ್‌ನಲ್ಲಿರುವ ನಿವೇಶನದಲ್ಲಿ ನಾನು ಮತ್ತು ಮಾವ ತಳಪಾಯ ತೆಗೆಯುವಾಗ ಟಣ್ ಅಂತ ಶಬ್ದ ಬಂತು. ಏನು ಅಂತ ನೋಡಿದ್ರೆ, ಪುಟ್ಟದೊಂದು ತಾಮ್ರದ ಬಿಂದಿಗೆ ಕಾಣಿಸ್ತು. ಅದರಲ್ಲಿ ಚಿನ್ನವಿತ್ತು. ಅದನ್ನು ಎತ್ತಿಕೊಂಡು ತಕ್ಷಣವೇ ಪಂಚಾಯಿತಿ ಸದಸ್ಯರ ಬಳಿಗೆ ಓಡಿ ಹೋದೆ. ಅವರಿಗೆ ತೋರಿಸಿ, ಊರಿನ ಹಿರಿಯರಿಗೆ ವಿಷಯ ತಿಳಿಸಿದೆ’ ಎಂದ.
‘ಚಿನ್ನ ನೋಡಿದಾಗ, ಇದು ನನಿಗೆ ಬ್ಯಾಡೇ ಬ್ಯಾಡ ಅಂತ ಅನುಸ್ತು. ಹಿಂದೆ ಅನೇಕರು ಸತ್ತು ಹೋಗ್ಯಾರ. ಚಿನ್ನದ ನಿಧಿ ತಿಂದವರ ಮನೆ ಉದ್ಧಾರ ಆಗಿಲ್ಲ. ಚಿನ್ನ ನನಗೆ ಬ್ಯಾಡೇ ಬ್ಯಾಡ ಅನುಸ್ತು’ ಅಂತ ಮತ್ತೆ ಒತ್ತಿ ಹೇಳಿದ.
‘ಚಿನ್ನವನ್ನು ವಾಪಸ್ ಕೊಟ್ಟಿದ್ದಕ್ಕೆ ಗೆಳೆಯರು ಹೇಗೆ ಪ್ರತಿಕ್ರಿಯಿಸಿದರು’ ಅಂದೆ. ‘ನೀನು ಚಿನ್ನ ವಾಪಸ್ ಕೊಟ್ಟು ಭೇಷ್ ಕೆಲ್ಸ ಮಾಡ್ಡೆ ಬಿಡ್ಲೇ’ ಅಂದರು ಎಂದ ಪ್ರಜ್ವಲ್.
ಆ ವೇಳೆಗೆ ಊಟದ ಗಂಟೆ ಬಾರಿಸಿತು. ‘ಬರ್ತಿನ್ರೀ...’ ಅಂತ ಹೇಳಿ, ಊಟದ ತಟ್ಟೆ ಎತ್ತಿಕೊಂಡು ಮಧ್ಯಾಹ್ನದ ಬಿಸಿಯೂಟ ಸವಿಯಲು ಸ್ನೇಹಿತರ ಜತೆಗೆ ತೆರಳಿದ.
‘ಪ್ರಜ್ವಲ್‌ನ ಪ್ರಾಮಾಣಿಕತೆ ಮೆಚ್ಚುವಂತಹದ್ದು. ಆತ ನಮ್ಮ ಶಾಲೆಯಲ್ಲಿ ಓದುತ್ತಿರುವುದು ಹೆಮ್ಮೆ ತರಿಸಿದೆ. ಪ್ರಜ್ವಲ್‌ಗೆ ನಾಯಕತ್ವ ಗುಣ ಇದೆ. ಅಕ್ಕಪಕ್ಕದ ವಿದ್ಯಾರ್ಥಿಗಳು ತಪ್ಪು ಮಾಡುವುದನ್ನೇ ಕಾಯುತ್ತಿರುತ್ತಾನೆ. ಯಾರಾದರೂ ತಪ್ಪು ಮಾಡಿದ್ದು ಕಂಡುಬಂದರೆ ಥಟ್ ಅಂತ ಶಿಕ್ಷಕರ ಬಳಿಗೆ ಹಿಡಿದು ತರುತ್ತಾನೆ. ‘ಪ್ರಾಮಾಣಿಕರಿಗೆ ಭಯ ಇರುವುದಿಲ್ಲ’ ಎಂಬ ಮಾತಿನಂತೆ ಆತ ಶಾಲೆಯಲ್ಲಿ ಯಾರಿಗೂ ಹೆದರುವುದಿಲ್ಲ. ಆತ ನೇರ ಮಾತಿನ ಹುಡುಗ’ ಎಂದು ಮುಖ್ಯಶಿಕ್ಷಕ ಅನಿಲ್ ಕುಮಾರ್ ಪೂಜಾರ ಮೆಚ್ಚುಗೆಯ ಮಾತುಗಳನ್ನಾಡಿದರು.
‘ಶಾಲೆಗೆ ಸಮಯಕ್ಕೆ ಸರಿಯಾಗಿ ಬರುತ್ತಾನೆ. ಅಗ್ದಿ ಟಾಪ್ ಅಲ್ಲದಿದ್ದರೂ; ತಕ್ಕಮಟ್ಟಿಗೆ ಚೆನ್ನಾಗಿ ಓದುತ್ತಾನೆ. ತನ್ನ ಕೆಲಸದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತಾರೆ. ಎಷ್ಟೇ ಅಡಚಣೆಗಳು ಬಂದರೂ ಏಕಾಗ್ರತೆ ಕಳೆದುಕೊಳ್ಳುವುದಿಲ್ಲ. ತನಗೆ ಸರಿ ಅನಿಸಿದ್ದನ್ನು ಹೇಳಲು ಹಿಂದೆ ಮುಂದೆ ನೋಡುವುದಿಲ್ಲ. ತನ್ನ ನಿರ್ಧಾರವೇ ಸರಿ ಎಂಬ ಆತ್ಮವಿಶ್ವಾಸ ಜಾಸ್ತಿ ಇದೆ’ ಎಂದರು.
‘ಚಿನ್ನದ ನಿಧಿ ಸಿಕ್ಕ ನಂತರ ಲಕ್ಕುಂಡಿಯಲ್ಲಿ ಇಷ್ಟೆಲ್ಲಾ ಗೌಜುಗದ್ದಲ ನಡೆಯುತ್ತಿದ್ದರೂ ಶಾಲೆಗೆ ಮಾತ್ರ ಒಂದು ದಿನವೂ ತಪ್ಪಿಸಿಲ್ಲ. ಸ್ನೇಹಿತರ ಜತೆಗೆ ಚೆನ್ನಾಗಿ ಬೆರೆಯುತ್ತಾನೆ. ಯಾವುದೇ ವಿಷಯಕ್ಕೂ ಯಾರ ಜತೆಗೂ ಕಾಂಪ್ರಮೈಸ್ ಆಗುವುದಿಲ್ಲ. ತನಗೆ ಸರಿ ಅನಿಸಿದ್ದನ್ನು ಯಾರಿಗೇ ಆದರೂ ನೇರವಾಗಿ ಹೇಳುತ್ತಾನೆ. ಆತನ ಪ್ರಾಮಾಣಿಕತೆ ಮೆಚ್ಚಿ ನಮ್ಮ ಶಾಲೆಯ ಉಪಾಧ್ಯಕ್ಷ ಸಿದ್ದು ಪಾಟೀಲ ಅವರು ರಿತ್ತಿಗೆ ಪಿಯುಸಿವರೆಗೆ ಉಚಿತ ವ್ಯಾಸಂಗಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದರು.
ಶಾಲೆ ಹಾಗೂ ಗ್ರಾಮಸ್ಥರ ವತಿಯಿಂದ ಪ್ರಜ್ವಲ್ ರಿತ್ತಿಗೆ ಸನ್ಮಾನ
‘ಚಿನ್ನದ ನಿಧಿ ಹಿಂದಿರುಗಿಸಿದ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆ ಎಲ್ಲರಿಗೂ ಮಾದರಿ. ಹೀಗಾಗಿ ಅವನ ಪ್ರಾಮಾಣಿಕತೆ ಕುರಿತಾಗಿ ಒಂದು ಪುಟ್ಟ ಬರಹ ಬರೆಯಿಸಿ, ಆತನ ಚಿತ್ರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಅಳವಡಿಸುವ ಯೋಚನೆ ಇದೆ. ಇತರೆ ವಿದ್ಯಾರ್ಥಿಗಳಿಗೂ ಇದು ಸ್ಫೂರ್ತಿಯಾಗಲಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ತಿಳಿಸಿದ್ದು, ವಿದ್ಯಾರ್ಥಿ ವಲಯದಲ್ಲಿ ಸಂತಸ ತರಿಸಿದೆ. ಈ ಕೆಲಸ ಬೇಗ ಆಗಲಿ ಎಂದು ಆಗ್ರಹಿಸಿದ್ದಾರೆ.
ಪ್ರತಿದಿನ ಬೆಳಿಗ್ಗೆ 5ಕ್ಕೆ ಏಳುವ ಅಭ್ಯಾಸ ರೂಢಿಸಿಕೊಂಡಿರುವ ಪ್ರಜ್ವಲ್, ಬೆಳಿಗ್ಗೆ ಒಂದು ತಾಸು ಅಭ್ಯಾಸ ಮಾಡುತ್ತಾನೆ. ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷ್ ಅಧ್ಯಾಪಕ ಅವನಿಗೆ ಅಚ್ಚುಮೆಚ್ಚು. ಶಾಲೆ ಇಲ್ಲದ ದಿನಗಳಂದು ಎತ್ತು ಮೇಯಿಸಲು ಹೊಲಕ್ಕೆ ಹೋಗುತ್ತಾನೆ. ಮನೆಗೆಲಸಕ್ಕೆ ನೆರವಾಗುತ್ತಾನೆ. ಇದು ಅವನ ನಿತ್ಯದ ದಿನಚರಿಯಾಗಿದ್ದು, ಚೆನ್ನಾಗಿ ಓದಿ ಮುಂದೆ ಪೊಲೀಸ್ ಆಗುವ ಆಸೆ ಹೊಂದಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.