ವಿಧಾನಸಭೆ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ವಿಧಾನಸಭೆಯಲ್ಲಿ ಹನಿ ಟ್ರ್ಯಾಪ್ ವಿಚಾರದ ಕುರಿತು ಗದ್ದಲ ಉಂಟಾಗಿದೆ. ಬಜೆಟ್ ಮೇಲಿನ ಚರ್ಚೆ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹನಿ ಟ್ರ್ಯಾಪ್ ವಿಷಯವನ್ನು ಪ್ರಸ್ತಾಪಿಸಿದರು.
‘ಸಹಕಾರ ಸಚಿವರ ಮೇಲೆ ಹನಿ ಟ್ರ್ಯಾಪ್ ಆಗಿದೆ. ಜನಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುವುದು ಕೆಟ್ಟ ಸಂಸ್ಕೃತಿ. ಕೆಲ ರಾಜಕೀಯ ಪಕ್ಷದಲ್ಲಿ ಇರುವವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯಕ್ಕಾಗಿಯೋ, ಸಿಎಂ ಆಗಬೇಕೆಂಬ ಕಾರಣಕ್ಕೋ ಹೀಗೆಲ್ಲ ಮಾಡುವುದು ಸರಿಯಲ್ಲ’ ಎಂದು ಯತ್ನಾಳ ಹೇಳಿದರು.
ಹನಿ ಟ್ರ್ಯಾಪ್ ವಿಚಾರದಲ್ಲಿ ಲಿಖಿತ ದೂರು ಕೊಡುತ್ತೇನೆ, ತನಿಖೆ ನಡೆಸಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಗ್ರಹಿಸಿದರು.
‘ನಾನೊಬ್ಬನೇ ಅಲ್ಲ. ರಾಜ್ಯ ಮಾತ್ರವಲ್ಲದೆ, ರಾಷ್ಟ್ರ ಮಟ್ಟದ 48 ಮಂದಿಯ ಸಿಡಿ, ಪೆನ್‌ಡ್ರೈವ್‌ಗಳು ಇವೆ. ಇದರಲ್ಲಿ ಜಡ್ಜ್‌ಗಳದ್ದೂ ಇದೆ. ತನಿಖೆಗೆ ಕೊಡಿ’ ಎಂದು ರಾಜಣ್ಣ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ.ಪರಮೇಶ್ವರ, ‘ರಾಜಣ್ಣ ಅವರು ದೂರು ಕೊಡಲಿ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ವಹಿಸುತ್ತೇನೆ. ಇದಕ್ಕೆಲ್ಲ ಇತಿಶ್ರೀ ಹಾಡಲೇಬೇಕು. ಸತ್ಯಾಸತ್ಯತೆ ತಿಳಿಯಬೇಕು’ ಎಂದು ಹೇಳಿದರು.
48 ಮಂದಿ ಯಾರು? ಹನಿ ಟ್ರ್ಯಾಪ್ ಮಾಡಿಸಿದ್ಯಾರು? ಬಹಿರಂಗಪಡಿಸಿ ಎಂದು ವಿಪಕ್ಷ ಸದಸ್ಯರು ಪಟ್ಟು ಹಿಡಿದರು.
ನನ್ನ ವಿರುದ್ಧದ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಭಾವನಾತ್ಮಕವಾಗಿ ಮಾತನಾಡಿದ ಮುನಿರತ್ನ, ಶನಿ ದೇವರು, ಪ್ರತ್ಯಂಗಿರಾ ದೇವಿ, ಅಜ್ಜಯ್ಯನ ಭಾವಚಿತ್ರ ತೋರಿಸಿ, ನಾನು ಅತ್ಯಾಚಾರ ಮಾಡಿಲ್ಲ ಎಂದು ಆಣೆ ಮಾಡುತ್ತೇನೆ ಎಂದು ಹೇಳಿದರು. ಸುಳ್ಳು ದೂರು ಕೊಡಿಸಿದವರು ಪ್ರಮಾಣ ಮಾಡುತ್ತಾರಾ?, ನಾನು ತಪ್ಪು ಮಾಡಿದ್ರೆ ಗಲ್ಲಿಗೆ ಹಾಕಿ. ಹೀಗೆಲ್ಲ ಜೀವನ ಹಾಳು ಮಾಡಬೇಕಾ? ರೇವಣ್ಣ, ಜಾರಕಿಹೊಳಿ ಮತ್ತು ನನ್ನ ಮನೆ ಹಾಳು ಮಾಡಿದ್ದೀರಿ. ಇವ್ರಿಗೆ ಮಕ್ಕಳು, ಮರಿ ಇಲ್ವಾ?, ಅವರ ವಂಶ ಹಾಳಾಗಲ್ವಾ?, ಅವರು ಹುಳ ಬಿದ್ದು ಸಾಯಬೇಕು ಎಂದೆಲ್ಲ ಮುನಿರತ್ನ ಭಾವೋದ್ವೇಗದಿಂದ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.