ADVERTISEMENT

HSV Profile: ವೆಂಕಟೇಶಮೂರ್ತಿ ಬಾಲ್ಯ, ಬರೆದ ಕೃತಿಗಳು, ಪಡೆದ ಪ್ರಶಸ್ತಿಗಳು...

​ಪ್ರಜಾವಾಣಿ ವಾರ್ತೆ
Published 30 ಮೇ 2025, 3:17 IST
Last Updated 30 ಮೇ 2025, 3:17 IST
ಎಚ್‌.ಎಸ್‌. ವೆಂಕಟೇಶಮೂರ್ತಿ
ಎಚ್‌.ಎಸ್‌. ವೆಂಕಟೇಶಮೂರ್ತಿ   

ಬೆಂಗಳೂರು: ಕಾವ್ಯವನ್ನೇ ಜೀವಿಸುತ್ತಿದ್ದ ಖ್ಯಾತ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಶುಕ್ರವಾರ ನಿಧನರಾಗಿದ್ದಾರೆ.

‘ಎಚ್ಚೆಸ್ವಿ’ ಎಂದೇ ಖ್ಯಾತರಾದ ಎಚ್.ಎಸ್.ವೆಂಕಟೇಶಮೂರ್ತಿ ಸುಮಾರು ಆರು ದಶಕಗಳಿಂದ ನಿರಂತರವಾಗಿ ಸಾಹಿತ್ಯ ಕೃಷಿಯಲ್ಲಿ ಹಾಗೂ ಅಧ್ಯಯನ, ಅಧ್ಯಾಪನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾಹಿತ್ಯ ಮಾತ್ರವಲ್ಲದೇ ಸುಗಮ ಸಂಗೀತ, ಕಿರುತೆರೆ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದರು.

ಎಚ್ಚೆಸ್ವಿ ಅವರ ಕಿರು ಪರಿಚಯ ಇಲ್ಲಿದೆ...

ADVERTISEMENT

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ ಗ್ರಾಮದಲ್ಲಿ 1944ರ ಜೂನ್‌ 23ರಂದು ಜನಿಸಿದರು. ತಂದೆ ನಾರಾಯಣ ಭಟ್ಟರು, ತಾಯಿ ನಾಗರತ್ನಮ್ಮ.

ಪ್ರಾಥಮಿಕ ಶಿಕ್ಷಣ ಹೋದಿಗೆರೆ, ಹೊಳಲ್ಕೆರೆಗಳಲ್ಲಿ ಮುಗಿಸಿ ಕಾಲೇಜಿನ ವಿದ್ಯಾಭ್ಯಾಸ ಚಿತ್ರದುರ್ಗದಲ್ಲಿ ಮಾಡಿದರು. ಭದ್ರಾವತಿಯಲ್ಲಿ ಡಿಪ್ಲೊಮ ಪಡೆದು ಮಲ್ಲಾಡಿ ಹಳ್ಳಿಯ ಪ್ರೌಢಶಾಲೆಯ ಕ್ರಾಫ್ಟ್ ಟೀಚರ್‌ ಆಗಿ ಉದ್ಯೋಗ ಆರಂಭಿಸಿದರು.

ನಂತರ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಕನ್ನಡದಲ್ಲಿ ಕಥನ ಕವನಗಳು’ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ ಪದವಿ ಗಳಿಸಿದರು.

ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 

ಎಚ್ಚೆಸ್ವಿ ರಚಿಸಿದ ಮುಖ್ಯ ಕಾವ್ಯ ಕೃತಿಗಳು: ಸಿಂದಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಗಿದ ಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕದಲ್ಲಿ ಬಿಲ್ಲುಹಬ್ಬ, ವಿಮುಕ್ತಿ, ಭೂಮಿಯೂ ಒಂದು ಆಕಾಶ, ನದೀತೀರದಲ್ಲಿ, ಮೂವತ್ತು ಮಳೆಗಾಲ (ಸಮಗ್ರ ಕಾವ್ಯ).

ಮಹಾಕಾವ್ಯ: ಬುದ್ಧ ಚರಣ

ನಾಟಕಗಳು: ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ (ಏಕಾಂಕ), ಚಿತ್ರಪಟ-ಅಗ್ನಿವರ್ಣ- ಉರಿಯ ಉಯ್ಯಾಲೆ, ಕಂಸಾಯಣ-ಊರ್ಮಿಳಾ-ಮಂಥರಾ, ಮೇಘಮಾನಸ (ಗೀತರೂಪಕ).

ಮಕ್ಕಳ ಸಾಹಿತ್ಯಕ್ಕೆ ಕೊಡುಗೆ: ಹಕ್ಕಿಸಾಲು, ಹೂವಿನಶಾಲೆ, ಸೋನಿ ಪದ್ಯಗಳು (ಕವಿತೆಗಳು) ಅಳಿಲು ರಾಮಾಯಣ ಮತ್ತು ಸುಣ್ಣದ ಸುತ್ತು, ಹೂವಿ ಮತ್ತು ಸಂಧಾನ, ಮುದಿದೊರೆ ಮತ್ತು ಮೂವರು ಮಕ್ಕಳು (ನಾಟಕಗಳು).

ಕಾದಂಬರಿ: ತಾಪಿ, ಕಥಾಸಂಕಲನ-ಬಾನಸವಾಡಿಯ ಬೆಂಕಿ, ಪುಟ್ಟಾಚಾರಿಯ ಮತಾಂತರ ಮತ್ತು ಇತರ ಕಥೆಗಳು. ವಿಮರ್ಶಾ ಸಂಪುಟ-ಆಕಾಶದ ಹಕ್ಕು.

ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಕಿರುತೆರೆ–ಚಲನಚಿತ್ರ: ಚಿನ್ನಾರಿಮುತ್ತ, ಕೊಟ್ರೇಶಿಯ ಕನಸು, ಕ್ರೌರ್ಯ, ಮತದಾನ ಚಲನಚಿತ್ರಗಳಿಗೆ ಗೀತಸಾಹಿತ್ಯ, ಕೆಲವಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಧಾರಾವಾಹಿಗಳಾದ ಯಾವ ಜನ್ಮದ ಮೈತ್ರಿ, ಸವಿಗಾನ, ಮುಕ್ತಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.‌‌ ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. 

ಪ್ರಶಸ್ತಿಗಳು: 5 ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಮೈಸೂರು ಅನಂತಸ್ವಾಮಿ ಪ್ರಶಸ್ತಿಗಳು ಸೇರಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.