
ಬೆಂಗಳೂರು: ಬಿಜೆಪಿ ಕಾರ್ಯಕರ್ತೆ ಸುಜಾತ ಅವರನ್ನು ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಹಲ್ಲೆಗೊಳಗಾದ ಮಹಿಳೆ ದಲಿತ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್ ಪುಢಾರಿಗಳ ಮಾತುಗಳನ್ನು ಕೇಳಿಕೊಂಡು ಪೊಲೀಸರು ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿದ್ದಾರೆ ಎಂದು ದೂರಿದರು.
‘ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆ ಇದಾಗಿದೆ. ಎಸ್ಐಆರ್ ಮ್ಯಾಪಿಂಗ್ ಮಾಡುವಾಗ ಅಧಿಕಾರಿಗಳ ಜತೆ ಸುಜಾತ ಅವರು ಹೋಗುತ್ತಿದ್ದರು. ಆಗ, ಕಾಂಗ್ರೆಸ್‌ನ ಕಾರ್ಪೊರೇಟರ್ ಸುನಂದಾ ಅವರೇ ಸುಜಾತ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಸುಜಾತ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಲ್ಲದೇ, ಮನೆಗೆ ನುಗ್ಗಿ ಅವರನ್ನು ಮತ್ತು ಅವರ ಕುಟುಂಬದವರನ್ನು ಬಂಧಿಸಿ ಕರೆದೊಯ್ದಿದ್ದಾರೆ’ ಎಂದರು.
‘ಕರ್ನಾಟಕ ಪೊಲೀಸ್ ಅಧಿಕಾರಿಗಳು ಅಪ್ಪಟ ಕಾಂಗ್ರೆಸ್ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಮತ್ತೊಂದು ಕಡೆ 140 ಶಾಸಕರು ಇದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಅಹಂಕಾರ ಮೇರೆ ಮೀರಿದೆ. ಬಳ್ಳಾರಿ, ಹುಬ್ಬಳ್ಳಿ, ಬೀದರ್ ಘಟನೆಗಳನ್ನು ಗಮನಿಸಿದರೆ ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ಜನ ಹಿಡಿಶಾಪ ಹಾಕುತ್ತಿದ್ದಾರೆ. ಸೂಕ್ತ ಸಮಯದಲ್ಲಿ ತಕ್ಕ ಉತ್ತರ ಕೊಡುತ್ತಾರೆ’ ಎಂದು ವಿಜಯೇಂದ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.