ADVERTISEMENT

ಮನೆಯಲ್ಲಿನ ಅಸಂಖ್ಯಾತ ದೇವರನ್ನು ಹೊರಹಾಕಿ: ಸಾಹಿತಿ ಕುಂ. ವೀರಭದ್ರಪ್ಪ

ಸಾಹಿತಿ ಕುಂ. ವೀರಭದ್ರಪ್ಪ ಹೇಳಿಕೆ * ಹುಲಿಕಲ್ ನಟರಾಜ್ ಅಭಿನಂದನಾ ಗ್ರಂಥ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 14:38 IST
Last Updated 4 ಜನವರಿ 2023, 14:38 IST
ಹುಲಿಕಲ್ ನಟರಾಜ್‌ (ಎಡದಿಂದ ಆರನೆಯವರು) ಅವರ ಅಭಿನಂದನಾ ಗ್ರಂಥ ‘ಹುಲಿ ಹೆಜ್ಜೆ’ಯನ್ನು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ (ಎಡದಿಂದ ನಾಲ್ಕನೆಯವರು) ಬಿಡುಗಡೆ ಮಾಡಿದರು. (ಎಡದಿಂದ) ‌ಕುಂ. ವೀರಭದ್ರಪ್ಪ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಎ.ಎಸ್. ಕಿರಣ್‌ ಕುಮಾರ್, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ, ಹುಲಿಕಲ್ ನಟರಾಜ್‌ ಅವರ ಮೊಮ್ಮಗ ಉದಾತ್ ಮತ್ತು ಪತ್ನಿ ದೇವಿಕಾ ಇದ್ದಾರೆ. -ಪ್ರಜಾವಾಣಿ ಚಿತ್ರ
ಹುಲಿಕಲ್ ನಟರಾಜ್‌ (ಎಡದಿಂದ ಆರನೆಯವರು) ಅವರ ಅಭಿನಂದನಾ ಗ್ರಂಥ ‘ಹುಲಿ ಹೆಜ್ಜೆ’ಯನ್ನು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ (ಎಡದಿಂದ ನಾಲ್ಕನೆಯವರು) ಬಿಡುಗಡೆ ಮಾಡಿದರು. (ಎಡದಿಂದ) ‌ಕುಂ. ವೀರಭದ್ರಪ್ಪ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ಎ.ಎಸ್. ಕಿರಣ್‌ ಕುಮಾರ್, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ, ಹುಲಿಕಲ್ ನಟರಾಜ್‌ ಅವರ ಮೊಮ್ಮಗ ಉದಾತ್ ಮತ್ತು ಪತ್ನಿ ದೇವಿಕಾ ಇದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದಕ್ಷಿಣ ಭಾರತದ ನಾವು ದ್ರಾವಿಡರೆ ಹೊರತು, ಹಿಂದೂಗಳಲ್ಲ. ನಮ್ಮ ಮನೆಯಲ್ಲಿನ ಅಸಂಖ್ಯಾತ ದೇವರು, ಮೂಢನಂಬಿಕೆಗಳನ್ನು ಹೊರಗಡೆ ಕಳುಹಿಸಬೇಕು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದರು.

ರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಟ್ರಸ್ಟ್‌ ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್‌ ಅವರ ಅಭಿನಂದನಾ ಗ್ರಂಥ ‘ಹುಲಿ ಹೆಜ್ಜೆ’ ಬಿಡುಗಡೆಯಾಯಿತು. ‘ಸ್ವಾಮಿ ಹರ್ಷಾನಂದ ಅವರು ತಮ್ಮ ಕೃತಿಯಲ್ಲಿ ‘ಹಿಂದೂ’ ಪದದ ಬಗ್ಗೆ ವ್ಯಾಖ್ಯಾನಿಸಿದ್ದು, ಈ ಪದ ‘ಅಪಾಯಕಾರಿ’ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ ನಾವು ಹಿಂದೂ ಅಲ್ಲ ಎನ್ನುವುದನ್ನು ಒಕ್ಕೊರಲಿನಿಂದ ಹೇಳಬೇಕು. ಬಸವಣ್ಣ, ಬುದ್ದ, ಅಂಬೇಡ್ಕರ್ ನಮಗೆ ಮಾದರಿಯಾಗಬೇಕು’ ಎಂದು ಹೇಳಿದರು.

‘ರಸ್ತೆಯ ಅಕ್ಕಪಕ್ಕದಲ್ಲಿರುವ ದೇವಾಲಯ, ಮಸೀದಿ ಸೇರಿ ಎಲ್ಲ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ರಸ್ತೆ ಅಪಘಾತಗಳು ಹೆಚ್ಚಳವಾಗುತ್ತವೆ. ವಾಹನ ಚಾಲಕರು ದೇವರಿಗೆ ಕೈಮುಗಿಯಲು ಹೋಗಿ ಅಪಘಾತಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಸೂಕ್ತ ನಿರ್ದೇಶನ ನೀಡಬೇಕು. ಕರ್ನಾಟಕವು ಮೂಢನಂಬಿಕೆಗಳ ಹುಟ್ಟುವಳಿ ಹಾಗೂ ವಿತರಣೆಗಳ ಸಂಸ್ಥೆಯಾಗಿದೆ. ವಿಧಾನಸೌಧದಲ್ಲಿಯೆ ಅತಿ ಹೆಚ್ಚು ಮೂಢನಂಬಿಕೆಗಳಿದ್ದು, ದೇವರಿಗೆ ಸಮಾನವಾಗಿರುವ ಈ ಕಟ್ಟಡದಲ್ಲಿ ಗೌರವಾನ್ವಿತ ಮುಟ್ಠಾಳರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಜ್ಞಾನದ ಮಾಹಿತಿ ಬಳಸಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಎ.ಎಸ್. ಕಿರಣ್‌ ಕುಮಾರ್, ‘ಮನುಷ್ಯನಿಗೆ ಜ್ಞಾನ ಬೆಳೆದಂತೆ ಆತನ ಧೋರಣೆಯಲ್ಲಿಯೂ ಬದಲಾವಣೆಯಾಗುತ್ತದೆ. ಜ್ಞಾನದ ನೆರವಿನಿಂದ ದೊರೆಯುವ ಮಾಹಿತಿಗಳನ್ನು ಸಮಾಜದ ಒಳಿತಿಗೆ ಬಳಸಬೇಕು. ಆದರೆ, ಕೆಲವರು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ. ಸಂಪರ್ಕ ಸಾಧನಗಳ ಕೊರತೆಯಿಂದ ಈ ಹಿಂದೆ ಜನರ ಶೋಷಣೆ ನಡೆಯುತ್ತಿತ್ತು. ಮುಂದೆ ಇರುವ ಸವಾಲುಗಳನ್ನು ಎದುರಿಸಲು ಸತ್ಯದ ಮಾಹಿತಿ ರವಾನೆಯಾಗಬೇಕು’ ಎಂದು ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್, ‘ನಮ್ಮ ಬದುಕಿನ ಪಯಣದಲ್ಲಿ ನಂಬಿಕೆಯನ್ನು ಮೂಢನಂಬಿಕೆಯಾಗಿ ಪರಿವರ್ತಿಸಿಕೊಳ್ಳುತ್ತೇವೆ. ಜನರನ್ನು ತಪ್ಪು ದಾರಿಗೆ ತಳ್ಳುವವರಿಗೆ ರಾಜಕಾರಣಿಗಳು ನಮಸ್ಕಾರ ಹಾಕುತ್ತಾರೆ. ಪ್ರಪಂಚವನ್ನು ವೈಜ್ಞಾನಿಕ ನೆಲೆಯಲ್ಲಿ ಕೊಂಡೊಯ್ಯಬೇಕಾದವರು ಮೂಢನಂಬಿಕೆಗೆ ಸಿಲುಕಿದ್ದಾರೆ. ಪವಾಡ ಎಂದರೆ ನಿಜ ಅರ್ಥದಲ್ಲಿ ಮಾನವ ಸೇವೆ. ಸ್ವಾಮೀಜಿಗಳು ಧರ್ಮ ಹಾಗೂ ವೈಚಾರಿಕತೆಯನ್ನು ಪ್ರಸಾರ ಮಾಡಬೇಕು’ ಎಂದು ತಿಳಿಸಿದರು.

‘ಕೂದಲನ್ನು ಮಾತ್ರ ಏಕೆ ಕೊಡುವಿರಿ?’

‘ಮೂಢನಂಬಿಕೆಗಳೇ ಕರ್ನಾಟಕದ ದೊಡ್ಡ ‘ಸಾಯಿಬಾಬಾ’. ಈ ಹಿಂದೆ ದೇವಮಾನವರು ಇಲ್ಲದೇ ಇರುವಂತಹ ಜಾಗವೇ ಕರ್ನಾಟಕದಲ್ಲಿ ಇರಲಿಲ್ಲ. ಈಗಲೂ ಮೂಢನಂಬಿಕೆ ಜೀವಂತವಾಗಿದೆ. ನಮ್ಮ ವಿಜ್ಞಾನಿಗಳು ಪೂಜೆ ಮಾಡಿ, ರಾಕೆಟ್ ಉಡಾಯಿಸುತ್ತಾರೆ. ಗ್ರಹಣದ ಅವಧಿಯಲ್ಲಿ ನೀರನ್ನು ಚೆಲ್ಲಲಾಗುತ್ತದೆ. ಅದೇ ರೀತಿ, ಹಾಲು, ತುಪ್ಪವನ್ನು ಏಕೆ ಚೆಲ್ಲುವುದಿಲ್ಲ? ತಿರುಪತಿ ತಿಮ್ಮಪ್ಪನಿಗೆ ಕೂದಲು ಮಾತ್ರ ನೀಡಲಾಗುತ್ತದೆ. ಮೂಗು, ಕಣ್ಣು, ಕೈ ಸೇರಿ ವಿವಿಧ ಅಂಗಾಂಗಳನ್ನೂ ಏಕೆ ನೀಡುವುದಿಲ್ಲ? ಅವೈಚಾರಿಕ ಯುಗದಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ಕುಂ. ವೀರಭದ್ರಪ್ಪ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.