
ಎಚ್.ವೈ. ಮೇಟಿ
ಬಾಗಲಕೋಟೆ: ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆ ಹಾಗೂ ಇತರ ವಯೋಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.
ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದರು. 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ ವಿಧಾನಸೌಧ ಪ್ರವೇಶಿಸಿದ್ದರು.
1994ರಲ್ಲಿಯೂ ಆಯ್ಕೆಯಾಗಿದ್ದ ಅವರು, ಅರಣ್ಯ ಇಲಾಖೆ ಸಚಿವರಾಗಿದ್ದರು. 1996 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಕ್ಷೇತ್ರ ವಿಂಗಡಣೆ ಸಂದರ್ಭದಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರ ರದ್ದಾಗಿದ್ದರಿಂದ 2008ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಬಾಗಲಕೋಟೆ ವಿಧಸನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು.
2013ರಲ್ಲಿ ಗೆಲುವು ಸಾಧಿಸಿ, ಅಬಕಾರಿ ಸಚಿವರಾಗಿದ್ದರು. 2018ರಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
2023ರ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆದ್ದು ಶಾಸಕರಾದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಮೃತರಿಗೆ ಇಬ್ಬರು ಪುತ್ರತು, ಇಬ್ಬರು ಪುತ್ರಿಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.