ADVERTISEMENT

ಬಿಜೆಪಿಯಲ್ಲಿ ಸಿಎಂ ಬದಲಾವಣೆ ಬಗ್ಗೆ I am very confident: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ನವೆಂಬರ್ 2020, 16:04 IST
Last Updated 4 ನವೆಂಬರ್ 2020, 16:04 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ದೆಹಲಿಯಿಂದ ನನಗೆ ದೊರೆತಿರುವ ಮಾಹಿತಿ ಪ್ರಕಾರ ಉಪಚುನಾವಣೆ ನಂತರ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡ್ತಾರೆ. I am very confident ಯಡಿಯೂರಪ್ಪ ಬದಲಾಗ್ತಾರೆ. ನಾನು ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದು ಒಂದು ಕಾರಣ, ಇದರ ಜೊತೆಗೆ ಬೇರೆ ಹಲವು ಕಾರಣಗಳೂ ಇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸಂಪೂರ್ಣ ಕೊರೊನಾ ಮುಕ್ತವಾಗುವವರೆಗೆ ಶಾಲೆ ಆರಂಭಿಸುವುದು ಬೇಡ. ಈ ವರ್ಷ ಎಲ್ಲಾ ತರಗತಿಗಳಿಗೆ ಆನ್‌ಲೈನ್ ಮೂಲಕ ಪಾಠ ಮಾಡಿ, ಎಲ್ಲರನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಿ. ಸರ್ಕಾರ ಶಾಲೆ ತೆರೆಯುವ ದುಸ್ಸಾಹಸ ಮಾಡುವುದು ಬೇಡ ಎಂದಿದ್ದಾರೆ.

ಶಿರಾ ಹಾಗೂ ಆರ್.ಆರ್ ನಗರ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ಕಾನೂನುಗಳಿಂದ ಜನ ಬೇಸತ್ತಿದ್ದಾರೆ. ಅವೆಲ್ಲಾ ಕಾಂಗ್ರೆಸ್ ಮತಗಳಾಗಿ ಪರಿವರ್ತನೆಯಾಗಿವೆ ಎಂದು ಹೇಳಿದರು.

ADVERTISEMENT

ಮತ್ತೆ ಟ್ವೀಟ್ ಮಾಡಿರುವ ಅವರು, ರೈತರಿಂದ ಕೃಷಿಭೂಮಿಯನ್ನು ಕಿತ್ತುಕೊಳ್ಳಲೇಬೇಕೆಂಬ ಹಟಕ್ಕೆ ಬಿದ್ದಿರುವ ಬಿಜೆಪಿ ಸರ್ಕಾರವು ಎರಡನೇ ಬಾರಿ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಲು ಹೊರಟಿದೆ. ರೈತ‌ಸಮುದಾಯ ಈ ದ್ರೋಹವನ್ನು ಎಂದೆಂದಿಗೂ ಕ್ಷಮಿಸದು ಎಂದು ತಿಳಿಸಿದ್ದಾರೆ.

ಒಂದೆಡೆ ಕೊರೊನಾ ಸೋಂಕು, ಇನ್ನೊಂದೆಡೆ ಅತೀವೃಷ್ಟಿಯಿಂದಾಗಿ ನೆಲ ಹಿಡಿದಿರುವ ರೈತ ಸಮುದಾಯಕ್ಕೆ ನೆರವಾಗಲು ಆದ್ಯತೆ ನೀಡಬೇಕಾಗಿದ್ದ ಮುಖ್ಯಮಂತ್ರಿಯವರು, ಅವರಿಂದ ಭೂಮಿ ಕಿತ್ತುಕೊಳ್ಳುವ ತರಾತುರಿಯಲ್ಲಿರುವುದು ಅವರ ಅಸಲಿ ರೈತ ವಿರೋಧಿ ಮುಖವನ್ನು ಅನಾವರಣಗೊಳಿಸಿದೆ ಎಂದು ದೂರಿದ್ದಾರೆ.

ರಾಜ್ಯಾದ್ಯಂತ ರೈತರು‌ ಕೊರೊನಾ ಸೋಂಕನ್ನು ಲೆಕ್ಕಿಸದೆ ಪ್ರಾಣವನ್ನು ಒತ್ತೆ ಇಟ್ಟು ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದರು. ಈ ರೈತರ ಶಾಪ ಬಿಜೆಪಿ ಸರ್ಕಾರಕ್ಕೆ ತಟ್ಟದೆ ಇರದು. ರೈತ ವಿರೋಧಿ ತಿದ್ದುಪಡಿಗೆ ಕಾಂಗ್ರೆಸ್‌ನ ಪ್ರತಿರೋಧ ಸದನದ ಒಳಗೆ ಮತ್ತು ಹೊರಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.