ADVERTISEMENT

ಹಿರಿಯ ನಾಯಕರು ದೂರವಾದರೆ ಪಕ್ಷದ ಮೇಲೆ ಪರಿಣಾಮ: ಸದಾನಂದಗೌಡ

ಚಿರತೆ ಓಡಿಸಿಕೊಂಡಿರು ಎಂದರೂ ಮಾಡುವೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
<div class="paragraphs"><p>ಸದಾನಂದಗೌಡ&nbsp;&nbsp;</p></div>

ಸದಾನಂದಗೌಡ  

   

ಮಂಡ್ಯ: ‘ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರವಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಪಕ್ಷದ ರಾಷ್ಟ್ರೀಯ ಮುಖಂಡರು ಆಲೋಚನೆ ಮಾಡಬೇಕು’ ಎಂದು ಸಂಸದ ಡಿ.ಬಿ.ಸದಾನಂದಗೌಡ ಗುರುವಾರ ಹೇಳಿದರು.

ಬರ ಪರಿಸ್ಥಿತಿ ಅಧ್ಯಯನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಿರಿಯ ನಾಯಕರಿಗೆ ಹೆಚ್ಚು ಅನುಭವವಿರುತ್ತದೆ. ಅವರಿಗೆ ಹಿಂಬಾಲಕರ ಪಡೆಯೇ ಇರುತ್ತದೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ವರಿಷ್ಠರು ಚಿಂತನೆ ಮಾಡಬೇಕು. ನನ್ನನ್ನು ಉಪಯೋಗಿಸಿಕೊಂಡರೆ ಪಕ್ಷಕ್ಕಾಗಿ ದುಡಿಯುತ್ತೇನೆ. ಇಲ್ಲದಿದ್ದರೆ ಸುಖ ಜೀವನದಲ್ಲಿ ಇರುತ್ತೇನೆ’ ಎಂದರು.

ADVERTISEMENT

‘ಸತ್ತಾಗ ನನ್ನ ಶವದ ಮೇಲೆ ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ನನ್ನದಲ್ಲ. ಚುನಾವಣೆಗೆ 6 ತಿಂಗಳ ಮೊದಲೇ ನಿರ್ಧಾರ ತಿಳಿಸಿದ್ದೇನೆ. ಇದರಿಂದ ಹೊಸ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗುತ್ತದೆ. ನನ್ನ ಕ್ಷೇತ್ರದಲ್ಲಿ ಸುಮಲತಾ ಅವರು ಸ್ಪರ್ಧಿಸುವ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ. ಪಕ್ಷ ನನಗೆ ಚಿರತೆ ಓಡಿಸಿಕೊಂಡಿರು ಎಂದರೂ ಮಾಡುತ್ತೇನೆ’ ಎಂದರು.

‘ಚುನಾವಣಾ ರಾಜಕೀಯದಿಂದ ದೂರ ಉಳಿಯುವ ಮಾತನಾಡಿದ ನಂತರ ನನಗೆ ಸಾವಿರ ಫೋನ್‌ ಕರೆಗಳು ಬಂದಿವೆ. ಕೆಲವರು ತಾವು ಕೂಡ ಮೌನವಾಗಿರುವುದಾಗಿ ತಿಳಿಸಿದ್ದಾರೆ. ಹಾಗೆ ಮಾಡದಂತೆ, ರಾಜಕಾರಣದಲ್ಲಿ ಮುಂದುವರಿಯುವಂತೆ ತಿಳಿಸಿದ್ದೇನೆ. 25 ವರ್ಷದ ಚಟುವಟಿಕೆ ನಂತರ ಚುನಾವಣಾ ರಾಜಕಾರಣದಿಂದ ದೂರ ಉಳಿಯಬೇಕು ಎಂದು ತೀರ್ಮಾನಿಸಿದ್ದೆ. ಅದರಂತೆ ನಿರ್ಧಾರ ಪ್ರಕಟಿಸಿದ್ದೇನೆ. ಆ ತೀರ್ಮಾನದ ಹಿಂದೆ ಯಾರ ಒತ್ತಡವೂ ಇಲ್ಲ’ ಎಂದರು.

‘ಬಿಜೆಪಿಗೆ ಹಿನ್ನಡೆಯಾದಾಗ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ. ನಾನು ಯಾರ ಹಿಂದೆಯೂ ಚೀಲ ಹಿಡಿದುಕೊಂಡು ಹೋಗಿಲ್ಲ. ಯಾರಿಗೂ ಬೆಣ್ಣೆ ಹಚ್ಚಿಲ್ಲ, ಗುಂಪುಗಾರಿಕೆ ಮಾಡಿಲ್ಲ. ಕಳೆದ ಚುನಾವಣೆ ಅವಧಿಯಲ್ಲೇ ನಿವೃತ್ತಿಯ ತೀರ್ಮಾನ ಮಾಡಿದ್ದೆ. ಪಕ್ಷದ ಒತ್ತಡದಿಂದ ಸ್ಪರ್ಧೆ ಮಾಡಿದ್ದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.