ADVERTISEMENT

ಅಕ್ರಮ ಬಿಪಿಎಲ್‌ ಕಾರ್ಡ್‌ ಎಪಿಎಲ್‌ಗೆ ಪರಿವರ್ತನೆ: ಕೆ.ಎಚ್‌. ಮುನಿಯಪ್ಪ

ಮೂರು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 14:57 IST
Last Updated 9 ಡಿಸೆಂಬರ್ 2024, 14:57 IST
ಕೆ.ಎಚ್‌. ಮುನಿಯಪ್ಪ
ಕೆ.ಎಚ್‌. ಮುನಿಯಪ್ಪ   

ಸುವರ್ಣ ವಿಧಾನಸೌಧ (ಬೆಳಗಾವಿ): ಆರ್ಥಿಕ ಸ್ಥಿತಿವಂತರು ಹೊಂದಿರುವ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆಹಚ್ಚಿ, ಅವುಗಳನ್ನು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತಿಸಲಾಗುವುದು. ಅರ್ಹರಿಗೆ ತೊಂದರೆಯಾಗದಂತೆ ಮೂರು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಟಿ.ಎನ್‌. ಜವರಾಯಿಗೌಡ, ಟಿ.ಎ. ಶರವಣ, ಬಿಜೆಪಿಯ ಸಿ.ಟಿ. ರವಿ, ಹಣಮಂತ ನಿರಾಣಿ, ಕಾಂಗ್ರೆಸ್‌ನ ಐವನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 1.28 ಕೋಟಿ ಕುಟುಂಬಗಳು ಅಂತ್ಯೋದಯ ಹಾಗೂ ಆದ್ಯತಾ ವಲಯದ ಪಡಿತರ ಕಾರ್ಡ್‌ಗಳನ್ನು ಹೊಂದಿದ್ದಾರೆ. ಮೇ 23ರವರೆಗೆ 3.35 ಲಕ್ಷ ಅನರ್ಹ ಪಡಿತರ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ₹13.51 ಕೋಟಿ ದಂಡ ವಸೂಲಿ ಮಾಡಲಾಗಿದೆ. ಇನ್ನೂ ಶೇ 20ರಷ್ಟು ಅನರ್ಹ ಬಿಪಿಎಲ್‌ ಕಾರ್ಡ್‌ ಇರುವ ಮಾಹಿತಿ ಇದೆ. ಇಂತಹ ಎಲ್ಲ ಕಾರ್ಡ್‌ಗಳನ್ನೂ ಎಪಿಎಲ್‌ಗೆ ಪರಿವರ್ತಿಸುತ್ತೇವೆ’ ಎಂದರು.

ಬಿಪಿಎಲ್‌ ಕಾರ್ಡ್‌ ನೀಡಲು ಹೊಸದಾಗಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದವು. 1.69 ಲಕ್ಷ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. 59,528 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ₹1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹಾಗೂ ನಿಯಮದಂತೆ ಇತರೆ ಸೌಲಭ್ಯ ಹೊಂದಿರುವ ಎಲ್ಲರ ಬಿಪಿಎಲ್‌ ರದ್ದು ಮಾಡಿ, ಎಪಿಎಲ್‌ ಕಾರ್ಡ್ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಬಿಪಿಎಲ್‌ ಕುಟುಂಬಗಳ ಸಂಖ್ಯೆ ಅಲ್ಲಿನ ಜನಸಂಖ್ಯೆಯ ಶೇ 50 ಮೀರಿಲ್ಲ. ರಾಜ್ಯದಲ್ಲಿ ಮಾತ್ರ ಈ ಪ್ರಮಾಣ ಶೇ 65ರಿಂದ 70ರಷ್ಟು ಇದೆ. ಗ್ರಾಮ ಹಾಗೂ ಗ್ರಾಮವಾರು ಪರಿಶೀಲನೆ ನಡೆಸಲಾಗುವುದು. ಇಂತಹ ಅಕ್ರಮ ತಡೆಗೆ ವಿರೋಧ ಪಕ್ಷಗಳು ಸಹಕಾರ ನೀಡಬೇಕು. ರಾಜಕೀಯ ಮಾಡಬಾರದು ಎಂದು ಕೋರಿದರು.

‘ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದವರಿಗೂ ರಾಜ್ಯ ಸರ್ಕಾರ ಬಿಪಿಎಲ್‌ ಕಾರ್ಡ್‌ ನೀಡುತ್ತಿದೆ’ ಎಂಬ ಸಿ.ಟಿ. ರವಿ ಆರೋಪ ವಾಗ್ವಾದಕ್ಕೆ ಕಾರಣವಾಯಿತು. ‘ಅಕ್ರಮವಾಗಿ ಅವರನ್ನು ಬಿಟ್ಟುಕೊಂಡವರೇ ನೀವು. ಈಗ ಆರೋಪ ಮಾಡುತ್ತಿದ್ದೀರಿ’ ಎಂದು ಸಚಿವ ಪ್ರಿಯಾಂಕ ಖರ್ಗೆ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.