ಎ.ಐ ಚಿತ್ರ
ಬೆಂಗಳೂರು: ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದ ಗಳಿಸಿದ ಸ್ವತ್ತು ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ. ಕೃಷ್ಣ ರಾವು ಅವರನ್ನು ವಸೂಲಾತಿ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾವು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿಕೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ರಾಜ್ಯದಲ್ಲಿ ಲೆಕ್ಕಕ್ಕೇ ಸಿಗದಷ್ಟು ಗುತ್ತಿಗೆದಾರರು, ಸಾಗಣೆದಾರರು, ರಫ್ತುದಾರರು, ದಾಸ್ತಾನುದಾರರು, ಖರೀದಿದಾರರು ಮತ್ತು ಇತರ ಮಧ್ಯವರ್ತಿಗಳು ಅಕ್ರಮ ಗಣಿಗಾರಿಕೆ ಚಟುವಟಿಕೆ, ಸಂಘಟಿತ ಅಪರಾಧ, ವ್ಯವಸ್ಥಿತ ಒಳಸಂಚಿನ ಮೂಲಕ ಅಕ್ರಮವಾಗಿ ಸ್ವತ್ತು ಗಳಿಸಿದ್ದಾರೆ.
ಹೀಗೆ ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನು ವಶಪಡಿಸಿಕೊಳ್ಳಲು ವಸೂಲಾತಿ ಆಯುಕ್ತರನ್ನು ನೇಮಿಸಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದರಂತೆ ರೂಪಿಸಿದ್ದ ಕಾಯ್ದೆಗೆ ಅನುಗುಣವಾಗಿ ಈ ನೇಮಕಾತಿ ಮಾಡಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಕೃಷ್ಣ ರಾವು ಅವರಿಗೆ ಮೂಲ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಸೇರಿ ಮಾಸಿಕ ಒಟ್ಟು ₹ 2,95,256 ವೇತನ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.