ADVERTISEMENT

ಚಿಲಿ – ಕರ್ನಾಟಕ ನಾವೀನ್ಯತೆ, ತಂತ್ರಜ್ಞಾನ ಸಹಕಾರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 14:55 IST
Last Updated 5 ಏಪ್ರಿಲ್ 2025, 14:55 IST
ಚಿಲಿ ಗಣರಾಜ್ಯದ ಅಧ್ಯಕ್ಷ ಗೇಬ್ರಿಯಲ್‌ ಬೋರಿಕ್‌ ಫಾಂಟ್‌ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು
ಚಿಲಿ ಗಣರಾಜ್ಯದ ಅಧ್ಯಕ್ಷ ಗೇಬ್ರಿಯಲ್‌ ಬೋರಿಕ್‌ ಫಾಂಟ್‌ ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು   

ಬೆಂಗಳೂರು: ನಾವೀನ್ಯತೆ ಮತ್ತು ತಂತ್ರಜ್ಞಾನ ಸಹಕಾರ ಉತ್ತೇಜನ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಚಿಲಿ ಸರ್ಕಾರವು ಉದ್ದೇಶ ಪತ್ರಕ್ಕೆ ಸಹಿ ಹಾಕಿವೆ.

ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ನಾವೀನ್ಯತಾ ಶೃಂಗ’ದಲ್ಲಿ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್‌ ಫಾಂಟ್ ನೇತೃತ್ವದ ನಿಯೋಗವು ಭಾಗಿಯಾಗಿತ್ತು. ಈ ವೇಳೆ, ಸಹಕಾರ ಒಪ್ಪಂದ ಪತ್ರಕ್ಕೆ ಚಿಲಿ ಮತ್ತು ಕರ್ನಾಟಕ ಸರ್ಕಾರದ ಪ್ರತಿನಿಧಿಗಳು ಸಹಿ ಮಾಡಿದರು.

ರಾಜ್ಯ ಸರ್ಕಾರದ ‘ಜಾಗತಿಕ ನಾವೀನ್ಯತಾ ಮೈತ್ರಿ–ಜಿಐಐ’ಯ ಭಾಗವಾಗಿ ಈ ಪತ್ರಕ್ಕೆ ಸಹಿ ಮಾಡಲಾಗಿದೆ. ಚಿಲಿ ಮತ್ತು ಕರ್ನಾಟಕವು ನಾವೀನ್ಯತೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹಾಗೂ ನವೋದ್ಯಮ ಸ್ಥಾಪನೆಗೆ ಪರಸ್ಪರರ ನೆಲದಲ್ಲಿ ಅವಕಾಶ, ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಪಾಲುದಾರಿಕೆ ಉತ್ತೇಜನದ ಅಂಶಗಳನ್ನು ಉದ್ದೇಶ ಪತ್ರ ಹೊಂದಿದೆ.

ADVERTISEMENT

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ‘ಜಿಐಐ ಭಾಗವಾಗಿ ಕರ್ನಾಟಕವು ಲ್ಯಾಟಿನ್‌ ಅಮೆರಿಕದ ದೇಶವೊಂದರ ಜತೆಗೆ ಸಹಕಾರಕ್ಕೆ ಸಹಿ ಹಾಕಿದ್ದು ಇದೇ ಮೊದಲು. ಎರಡೂ ಕಡೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಸಹಕಾರಕ್ಕೆ ವಿಪುಲ ಅವಕಾಶಗಳಿವೆ. ಅವನ್ನು ಬಳಸಿಕೊಳ್ಳಬೇಕು’ ಎಂದರು.

ಬೋರಿಕ್‌ ಫಾಂಟ್‌, ‘ಚಿಲಿಯಲ್ಲಿ ಹೂಡಿಕೆಗೆ ಪೂರಕವಾದ ವಾತಾವರಣ ಮತ್ತು ಅವಕಾಶಗಳು ಇವೆ. ಅಲ್ಲಿ ಹೂಡಿಕೆ ಮಾಡಿದರೆ ಅಗತ್ಯ ಸಹಕಾರ ನೀಡುತ್ತೇವೆ’ ಎಂದರು. 

ರಾಜ್ಯಪಾಲರ ಭೇಟಿ: ಚಿಲಿ ಅಧ್ಯಕ್ಷ ಗೇಬ್ರಿಯಲ್‌ ಬೋರಿಕ್‌ ಫಾಂಟ್‌ ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರನ್ನು ಶನಿವಾರ ಭೇಟಿ ಮಾಡಿದರು. ಈ ವೇಳೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು ರಾಜ್ಯದ ಅಧಿಕಾರಿಗಳ ಜತೆಗೆ ಚಿಲಿ ನಿಯೋಗವು ಮಾತುಕತೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.