ADVERTISEMENT

ಕಳೆ ಕಾಟ: ರಾಜ್ಯದ ಅರಣ್ಯ ಸ್ವರೂಪ ಬದಲು

ಸ್ಥಳೀಯ ಸಸ್ಯ ಪ್ರಭೇದಗಳ ಕತ್ತು ಹಿಸುಕುತ್ತಿರುವ ಲಂಟಾನಾ, ಅಕೇಶಿಯಾ

ಜಯಸಿಂಹ ಆರ್.
Published 29 ಡಿಸೆಂಬರ್ 2024, 23:30 IST
Last Updated 29 ಡಿಸೆಂಬರ್ 2024, 23:30 IST
ಅರಣ್ಯ ಪ್ರದೇಶ
ಅರಣ್ಯ ಪ್ರದೇಶ    

ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಪ್ರದೇಶದ ಒಟ್ಟು ವಿಸ್ತೀರ್ಣ ಹೆಚ್ಚಾಗಿದೆಯಾದರೂ, ಎರಡು ವರ್ಷಗಳಲ್ಲಿ ಕಾಡನ್ನು ಆಪೋಶನ ತೆಗೆದುಕೊಂಡ ಆಕ್ರಮಣಕಾರಿ ಕಳೆಸಸ್ಯಗಳ ವಿಸ್ತೀರ್ಣ ದುಪ್ಪಟ್ಟಾಗಿದೆ. ಸ್ಥಳೀಯ ಸಸ್ಯ ಪ್ರಬೇಧಗಳು ಮತ್ತು ಅವುಗಳನ್ನು ಅವಲಂಬಿಸಿರುವ ವನ್ಯಜೀವಿಗಳಿಗೆ ಕಂಟಕವಾಗಿ ಮಾರ್ಪಟ್ಟಿದೆ.

ಕೇಂದ್ರ ಸರ್ಕಾರವು ಈಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ–2023’ರಲ್ಲಿ ಈ ಮಾಹಿತಿ ಇದೆ.

2021ರ ವರದಿಯ ಪ್ರಕಾರ, ರಾಜ್ಯದ ಅರಣ್ಯ ಪ್ರದೇಶದಲ್ಲಿ ಲಂಟಾನಾ, ತೀವ್ರಗಂಧಿ (Chromolaena Odorata), ಅಕೇಶಿಯಾ, ತಗಚೆ ಮತ್ತು ಉತ್ತರಾಣಿ ಎಂಬ ಐದು ಪ್ರಮುಖ ಆಕ್ರಮಣಕಾರಿ ಕಳೆ ಸಸ್ಯಗಳು ಒಟ್ಟು 2,860 ಚದರ ಕಿ.ಮೀ.ನಷ್ಟು ಹರಡಿದ್ದವು. 2023ರ ವೇಳೆಗೆ ಈ ಕಳೆ ಸಸ್ಯಗಳ ವ್ಯಾಪ್ತಿ 6,219 ಚದರ ಕಿ.ಮೀ. ಅರಣ್ಯ ಪ್ರದೇಶಕ್ಕೆ ವಿಸ್ತರಿಸಿದೆ. ಎರಡೇ ವರ್ಷದಲ್ಲಿ ಅವುಗಳ ವಿಸ್ತೀರ್ಣವು ಶೇ 118ರಷ್ಟು ಏರಿಕೆಯಾಗಿದೆ.

ADVERTISEMENT

ಈ ಐದೂ ಕಳೆ ಸಸ್ಯಗಳು ವಿದೇಶಿ ಮೂಲದವಾಗಿದ್ದು, ಆಲಂಕಾರಿಕ ಮತ್ತು ಮರಮಟ್ಟಿಗೆಂದು ಭಾರತಕ್ಕೆ ಪರಿಚಯಿಸಿದ ಪ್ರಭೇದಗಳಾಗಿವೆ. ಸುತ್ತಲಿನ ಇತರ ಸಸ್ಯಗಳನ್ನು ಆಪೋಶನ ತೆಗೆದುಕೊಂಡು ಕ್ಷಿಪ್ರವಾಗಿ ಬೆಳೆಯುವ ಗುಣದ ಕಾರಣದಿಂದ ಇವುಗಳನ್ನು ‘ಅತಿಕ್ರಮಣಕಾರಿ ಪ್ರಬೇಧ’ಗಳು ಎಂದು ವರ್ಗೀಕರಿಸಲಾಗಿದೆ.

ರಾಜ್ಯದ ದಟ್ಟಾರಣ್ಯಗಳಿಗೂ ಇವು ವ್ಯಾಪಿಸಿವೆ. ಲಂಟಾನಾದ ಕಾರಣದಿಂದ ಕೆಲ ಸಣ್ಣ ಸಸ್ಯ ಮತ್ತು ಮರಗಳ ಪ್ರಭೇದಗಳು ನಾಶವಾಗುತ್ತಿವೆ. ಅಂತಹ ಸಸ್ಯ–ಮರಗಳನ್ನು ಆಹಾರಕ್ಕಾಗಿ ಅವಲಂಬಿಸಿರುವ ಕೀಟ–ಜಂತು ಮತ್ತು ಹಕ್ಕಿ ಪ್ರಭೇದಗಳಿಗೆ ತೊಡಕಾಗಿದೆ. ಅಕೇಷಿಯಾ ಮತ್ತು ತೀವ್ರಗಂಧಿ ಕಳೆಯ ಕೆಳಗೆ ಹುಲ್ಲು ಮತ್ತು ಇತರ ನೆಲ ಸಸ್ಯಗಳು ಬೆಳೆಯುವುದಿಲ್ಲ. ಅಂತಹ ಪ್ರಭೇದಗಳೂ ನಾಶವಾಗುತ್ತಿವೆ.

ಹಸಿರಿನ ಹೊದಿಕೆ ಹಿಗ್ಗುತ್ತಿದೆ ಎಂಬುದಕ್ಕೆ ಮಾತ್ರವೇ ಅರಣ್ಯ ಸ್ಥಿತಿಗತಿ ವರದಿ ಒತ್ತು ನೀಡುತ್ತಿದೆ. ಆದರೆ ಕಳೆ ಸಸ್ಯಗಳ ಅತಿಕ್ರಮಣದಿಂದ ಅರಣ್ಯದ ಸ್ವರೂಪ ಬದಲಾಗುತ್ತಿರುವುದನ್ನು ವರದಿಯು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹಲವು ಪರಿಸರವಾದಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.