ADVERTISEMENT

ಆರ್‌ಸಿಬಿ ಆಟಗಾರರಿಗೆ ಸರ್ಕಾರದ ಸನ್ಮಾನ: ಮುಗಿಲು ಮುಟ್ಟಿದ ಅಭಿಮಾನಿಗಳ ಘೋಷಣೆ

ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 23:30 IST
Last Updated 4 ಜೂನ್ 2025, 23:30 IST
<div class="paragraphs"><p>ಆರ್‌ಸಿಬಿ ಆಟಗಾರರ ಸನ್ಮಾನ ಹಾಗೂ ವಿಜಯೋತ್ಸವದ ವೇಳೆ ಮಿನ್ಸ್ಕ್‌ ಸ್ಕ್ವೇರ್‌ ಸುತ್ತಮುತ್ತ ಸೇರಿದ್ದ ಜನಸಾಗರ&nbsp; </p></div>

ಆರ್‌ಸಿಬಿ ಆಟಗಾರರ ಸನ್ಮಾನ ಹಾಗೂ ವಿಜಯೋತ್ಸವದ ವೇಳೆ ಮಿನ್ಸ್ಕ್‌ ಸ್ಕ್ವೇರ್‌ ಸುತ್ತಮುತ್ತ ಸೇರಿದ್ದ ಜನಸಾಗರ 

   

ಚಿತ್ರ: ಕೃಷ್ಣ ಕುಮಾರ್‌ ಪಿ.ಎಸ್.

ಬೆಂಗಳೂರು: ಐಪಿಎಲ್‌ 18ನೇ ಆವೃತ್ತಿ ವಿಜೇತ ಆರ್‌ಸಿಬಿ ತಂಡದ ಆಟಗಾರರಿಗೆ ವಿಧಾನಸೌಧದಲ್ಲಿ ಬುಧವಾರ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳಿ, ಕನ್ನಡ ಬಾವುಟ ನೀಡುವ ಮೂಲಕ ಆಟಗಾರರನ್ನು ಬರಮಾಡಿಕೊಂಡರು. ವಿಧಾನಸೌಧದ ಪೂರ್ವದ ಮೆಟ್ಟಿಲುಗಳ ಮೇಲೆ ಸಂಜೆ 5ಕ್ಕೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿರಾಟ್‌ ಕೊಹ್ಲಿ ಸೇರಿದಂತೆ ಆರ್‌ಸಿಬಿ ತಂಡದ ಎಲ್ಲ ಆಟಗಾರರೂ ಭಾಗವಹಿಸಿದ್ದರು.

ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಒಂದು ಲಕ್ಷಕ್ಕೂ ಹೆಚ್ಚಿನ ಜನರು ವಿಧಾನಸೌಧದ ಮುಂದೆ ಜಮಾಯಿಸಿದ್ದರು. ಅಂಬೇಡ್ಕರ್‌ ವೀದಿಯ‌ಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಇಡೀ ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು. ಯುವಕ–ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನಡೆದುಕೊಂಡು ಹೋಗಲೂ ಸಾಧ್ಯವಾಗದಷ್ಟು ಜನಸಂದಣಿ ಇತ್ತು. ಆರ್‌ಸಿಬಿ.. ಆರ್‌ಸಿಬಿ, ಕೊಹ್ಲಿ.. ಕೊಹ್ಲಿ ಘೋಷಣೆಗಳು ಮುಗಿಲು ಮುಟ್ಟಿದ್ದವು.

ವಿಧಾನಸೌಧದ ಎಲ್ಲ ಗೇಟುಗಳಲ್ಲೂ ಭಾರಿ ಭದ್ರತೆ ಒದಗಿಸಲಾಗಿತ್ತು. ಸಾರ್ವಜನಿಕರಿಗೆ ವಿಧಾನಸೌಧದ ಆವರಣದ ಒಳಗೆ  ಪ್ರವೇಶ ನಿಷೇಧಿಸಲಾಗಿತ್ತು. ಕೆಲವರು ಬ್ಯಾರಿಕೇಡ್‌, ಕಾಂಪೌಂಡ್‌ ಏರಿ ವಿಧಾನಸೌಧದ ಆವರಣ ಪ್ರವೇಶಿಸಲು ಪ್ರಯತ್ನಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ಹೊರಗೆ ಹೋಗಿದ್ದ ವಿಧಾನಸೌಧದ ಸಿಬ್ಬಂದಿ ಒಳ ಪ್ರವೇಶಿಸಲು ಪರದಾಡಿದರು.

10 ನಿಮಿಷಕ್ಕೆ ಕಾರ್ಯಕ್ರಮ ಮುಕ್ತಾಯ: ಸನ್ಮಾನ ಸಮಾರಂಭ ಕೇವಲ 10 ನಿಮಿಷಕ್ಕೆ ಮುಕ್ತಾಯವಾಯಿತು. ಎಲ್ಲ ಆಟಗಾರರನ್ನೂ ಒಟ್ಟಿಗೆ ಕೂರಿಸಿ, ಮೈಸೂರು ಪೇಟ, ಶಾಲು ಹಾಕಿ ಸನ್ಮಾನ ಮಾಡಲಲಾಯಿತು. ಸಚಿವರು, ಶಾಸಕರು ಹಾಗೂ ಅವರ ಕುಟುಂಬ ಪರಿವಾರ ಆಟಗಾರರ ಜತೆ ಸೆಲ್ಫಿಗಾಗಿ ಮುಗಿಬಿದ್ದರು. ಅವರ ವರ್ತನೆಗೆ ಆಟಗಾರರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.