ADVERTISEMENT

ಡಿಕೆಶಿ ಟೀಕಿಸುವಾಗ ಈಶ್ವರಪ್ಪ ಯಡವಟ್ಟು: ಕ್ರಿಸ್ತನ ಜನ್ಮಸ್ಥಳದ ತಪ್ಪು ಉಲ್ಲೇಖ!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 12:29 IST
Last Updated 27 ಡಿಸೆಂಬರ್ 2019, 12:29 IST
ಕೆ.ಎಸ್.ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್
ಕೆ.ಎಸ್.ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್   

ಬೆಂಗಳೂರು: ರಾಮನಗರದ ಕಪಾಲಿ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪಿಸುವ ವಿಚಾರದಲ್ಲಿ ಡಿ.ಕೆ ಶಿವಕುಮಾರ್‌ ಅವರನ್ನು ಟೀಕಿಸಿ ಟ್ವೀಟ್‌ ಮಾಡುವ ವೇಳೆ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಅವರು ಯಡವಟ್ಟು ಮಾಡಿಕೊಂಡಿದ್ದಾರೆ. ಯೇಸು ಕ್ರಿಸ್ತನದ ಜನ್ಮಸ್ಥಳದ ಬಗ್ಗೆ ಅವರು ತಪ್ಪು ಉಲ್ಲೇಖ ಮಾಡಿದ್ದಾರೆ.

ಡಿಕೆಶಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಸಚಿವ ಕೆ.ಎಸ್‌ ಈಶ್ವರಪ್ಪ ಟ್ವೀಟ್‌ ಮಾಡಿದ್ದರು.‘ನಮ್ಮ ಪವಿತ್ರ ದೇಶದಲ್ಲೇ ಹುಟ್ಟಿದ ಪ್ರಭು ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ವಿರೋಧಿಸಿದ್ದ ಕಾಂಗ್ರೆಸ್ ನವರು, ತಮ್ಮ ನಾಯಕಿಯನ್ನು ಮೆಚ್ಚಿಸಲು ತಮ್ಮದೇ ಹಣದಲ್ಲಿ ವ್ಯಾಟಿಕನ್ ನಲ್ಲಿ ಹುಟ್ಟಿದ ಯೇಸುವಿನ ಪ್ರತಿಮೆ ನಿರ್ಮಿಸಲು ಹೊರಟಿದ್ದಾರೆ. ಇನ್ನು ಇವರು ಕೆಪಿಸಿಸಿ ಅಧ್ಯಕ್ಷರಾಗುವುದನ್ನು ತಪ್ಪಿಸಲು ಸ್ವತಃ ಸಿದ್ದರಾಮಯ್ಯನವರಿಗೂ ಆಗುವುದಿಲ್ಲ’ ಎಂದು ಟೀಕಿಸಿದ್ದರು.

ತಮ್ಮ ಟ್ವೀಟ್‌ನಲ್ಲಿ ಈಶ್ವರಪ್ಪ ಅವರು ಕ್ರಿಸ್ತನ ಜನ್ಮಸ್ಥಳವನ್ನು ಬೆತ್ಲೆಹೆಮ್‌ ಎಂದು ಉಲ್ಲೇಖಿಸುವ ಬದಲಿಗೆ ವ್ಯಾಟಿಕನ್‌ ಎಂದು ಉಲ್ಲೇಖಿಸಿದ್ದಾರೆ. ಯೇಸು ಕ್ರಿಸ್ತ ಹುಟ್ಟಿದ್ದು ಬೆತ್ಲೆಹೆಮ್‌ ಪಟ್ಟಣದಲ್ಲಿ ಎಂದೇ ಕ್ರಿಶ್ಚಿಯನ್ನರು ನಂಬಿದ್ದಾರೆ.ಅದು ಇಂದಿನ ಇಸ್ರೇಲ್‌ನಲ್ಲಿದೆ. ಜೆರುಸಲೆಂ ಪಟ್ಟಣಕ್ಕೆ ತೀರ ಸಮೀಪದಲ್ಲಿದೆ.ಇತಿಹಾಸದ ಎಲ್ಲಿಯೂ ಯೇಸು ಕ್ರಿಸ್ತ ವ್ಯಾಟಿಕನ್‌ಗೆ ಪ್ರವಾಸ ಕೈಗೊಂಡ ಬಗ್ಗೆಯಾಗಲಿ, ಭೇಟಿ ನೀಡಿದ ಬಗ್ಗೆಯೂ ಉಲ್ಲೇಖಗಳಿಲ್ಲ. ಆದರೆ, ಕ್ರೈಸ್ತ ವ್ಯಾಟಿಕನ್‌ನಲ್ಲಿ ಹುಟ್ಟಿದ್ದಾನೆಂದು ಟ್ವೀಟ್‌ ಮಾಡಿ ಈಶ್ವರಪ್ಪ ಯಡವಟ್ಟು ಮಾಡಿಕೊಂಡಿದ್ದಾರೆ.

ADVERTISEMENT

ಭೂಪಟದಲ್ಲಿ ಬೆತ್ಲೆಹೆಮ್‌ನಿಂದ ಸರಿಸುಮಾರು 3500 ಕಿ.ಮೀ ದೂರದಲ್ಲಿರುವ ವ್ಯಾಟಿಕನ್‌ ಇಟಲಿಗೆ ಹತ್ತಿರದಲ್ಲಿದೆ. ಆದರೆ, ಕ್ರೈಸ್ತರಿಗೆ ಪವಿತ್ರವೆನಿಸಿರುವ ಈ ಪುಟ್ಟ ಪ್ರದೇಶಸ್ವತಂತ್ರ ಆಡಳಿತವಿರುವ ಸಾರ್ವಭೌಮನಗರ. ಇದರ ವ್ಯಾಪ್ತಿ 110 ಎಕರೆ ಪ್ರದೇಶವಷ್ಟೇ. ಈ ಪ್ರದೇಶದ ಆಡಳಿತ ಪೋಪ್‌ಗಳ ಕೈಲಿರುತ್ತದೆ.

ಈಶ್ವರಪ್ಪ ಅವರ ಯಡವಟ್ಟಿನ ಬಗ್ಗೆ ಹಲವರು ಕಮೆಂಟ್‌ ಬಾಕ್ಸ್‌ನಲ್ಲಿ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕ್ರೈಸ್ತ ಹುಟ್ಟಿದ್ದು ವ್ಯಾಟಿಕನ್‌ನಲ್ಲಿ ಅಲ್ಲ, ಬೆತ್ಲೆಹೆಮ್‌ನಲ್ಲಿ, ಜೆರುಸಲೆಂನಲ್ಲಿಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.