ADVERTISEMENT

ಸಿದ್ದರಾಮಯ್ಯ ನಿವೃತ್ತಿಗೆ ಸಕಾಲ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 11:03 IST
Last Updated 13 ಜನವರಿ 2023, 11:03 IST
   

ಬೆಂಗಳೂರು:75 ವರ್ಷ ದಾಟಿರುವ ಸಿದ್ದರಾಮಯ್ಯ ಅವರು ರಾಜಕೀಯದಿಂದ ನಿವೃತ್ತಿ ಹೊಂದಲು ಇದು ಸಕಾಲ. ಆ ಪಕ್ಷದಲ್ಲಿರುವ ಯುವಕರಿಗೆ ದಾರಿ ಮಾಡಿಕೊಡಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

ಹಿಂದೂ ಧರ್ಮ ಒಡೆಯಲು ಹೋದವರು, ಜಾತಿ– ಜಾತಿಗಳ ಮಧ್ಯೆ ಬೇಧ ಉಂಟು ಮಾಡಿದವರು, ಸ್ವಾರ್ಥ ರಾಜಕಾರಣಕ್ಕಾಗಿ ಲೋಕಾಯುಕ್ತ ಮುಗಿಸಿದವರು ಈಗ ಮತ್ತೆ ಮುಖ್ಯಮಂತ್ರಿ ಆಗುತ್ತೇನೆಂದು ಹೊರಟಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

65 ವರ್ಷ ಆದಾಗ ಇದೇ ನನ್ನ ಕೊನೆ ಚುನಾವಣೆ, ಮುಂದೆ ಸ್ಪರ್ಧಿಸುವುದಿಲ್ಲ ಎಂದರು. ಈಗ 75 ವರ್ಷ ಆದರೂ ರಾಜಕೀಯದಿಂದ ನಿವೃತ್ತಿ ಆಗುತ್ತಿಲ್ಲ. ರಾಜಕೀಯದಲ್ಲೇ ಉಳಿಯುತ್ತೇನೆ ಎನ್ನುವ ಮೂಲಕ ‘ಸ್ಟೇ ರಾಮಯ್ಯ’ ಆಗಿದ್ದಾರೆ. ಅವರಿಗೆ ರಾಜಕಾರಣ ಸಾಕು, ಅವರ ಪಕ್ಷದ ಯುವಕರಿಗೆ ಜಾಗ ಬಿಟ್ಟುಕೊಡಲಿ ಎಂದರು.

ADVERTISEMENT

‘ಸಿದ್ದು ನಿಜಕನಸು’ ಪುಸ್ತಕ ವೈಯಕ್ತಿಕ ತೇಜೋವಧೆಯ ಪುಸ್ತಕವಲ್ಲ, ರಾಜಕೀಯವಾಗಿ ಅವರ ದ್ವಂದ್ವಗಳನ್ನು ಪ್ರಶ್ನಿಸುವ ಪುಸ್ತಕವಾಗಿತ್ತು. ಆ ಪುಸ್ತಕವನ್ನು ಓದದೇ ಹೆದರಿಕೊಂಡು ಓಡಿ ಹೋಗಿ ಅದಕ್ಕೆ ತಡೆಯಾಜ್ಞೆ ತಂದರು. ಅವರ ಬಗ್ಗೆ ಆಕ್ಷೇಪಾರ್ಹ ಇದಿದ್ದರೆ ಮಾನನಷ್ಟ ಹೂಡಬಹುದಿತ್ತು. ಅವರಿಗೆ ಸತ್ಯವನ್ನು ಎದುರಿಸುವ ಧೈರ್ಯವೇ ಇಲ್ಲ ಎಂದು ಅಶ್ವತ್ಥನಾರಾಯಣ ಹೇಳಿದರು.

ಕಾಂಗ್ರೆಸ್‌ ಪಕ್ಷ ‘ಪ್ರಜಾಧ್ವನಿ’ ಹೆಸರಿನಲ್ಲಿ ಬಸ್‌ ಯಾತ್ರೆ ಮಾಡುತ್ತಿದೆ. ಆ ಪಕ್ಷವು ಬಸ್ಸಿನಲ್ಲಿರುವ ಸೀಟುಗಳಷ್ಟು ಸ್ಥಾನ ಗೆದ್ದರೆ ಹೆಚ್ಚು. ಬಸ್‌ಗಳಲ್ಲಿ 40 ರಿಂದ 45 ಸೀಟುಗಳಿರುತ್ತವೆ. ಅಷ್ಟು ಗೆಲ್ಲಬಹುದು ಎಂದರು.

2013 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 120ಕ್ಕಿಂತ ಹೆಚ್ಚಿದ್ದ ಸ್ಥಾನಗಳನ್ನು 79ಕ್ಕೆ ತಂದ ಸಾಧನೆಯೇ ಸಿದ್ದರಾಮಯ್ಯ ಅವರದು. ನಿದ್ರೆ ರಾಮಯ್ಯ, ಎಸಿಬಿ ರಾಮಯ್ಯ ಸೇರಿ ಹಲವು ಹೆಸರು ಅವರಿಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದೊಳಗೆ ಆ ಪಕ್ಷದ ನಾಯಕರು ಪ್ರಜಾಪ್ರಭುತ್ವ, ಪ್ರಜಾಧ್ವನಿಗೆ ಗೌರವ ಕೊಟ್ಟಿಲ್ಲ. ಆ ಪಕ್ಷದ ಮೂಲಸ್ತಂಭವೇ ಕುಟುಂಬ. ಅಲ್ಲಿ ಪ್ರಜಾಪ್ರಭುತ್ವಕ್ಕೆ ಏನೂ ಮಹತ್ವ ಇಲ್ಲ. ಮಾನ್ಯತೆಯೂ ಇಲ್ಲ. ಆ ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅದರ ಇಚ್ಛೆ, ಮೂಲ ಉದ್ದೇಶಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಅಶ್ವತ್ಥನಾರಾಯಣ ಪ್ರಶ್ನಿಸಿದರು.

ದಲ್ಲಾಳಿಗಳು, ಮಧ್ಯವರ್ತಿಗಳನ್ನು ಬೆಳೆಸಿದ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದು. ಪಟ್ಟಿ ಮಾಡಿರುವುದು ಶಿವಕುಮಾರ್-ಸಿದ್ದರಾಮಯ್ಯ ಅವರದ್ದು. ಅಧಿಕಾರ ದುರ್ಬಳಕೆ ಮಾಡಿ ಭ್ರಷ್ಟಾಚಾರ ಸಂಸ್ಕೃತಿ ಬೆಳೆಸಿದವರೇ ಕಾಂಗ್ರೆಸ್ಸಿಗರು. ರಾಹುಲ್ ಗಾಂಧಿಯವರು ಭಾರತ್ ಜೋಡೋ ಮಾಡುತ್ತಿದ್ದಾರೆ. ಅವರು ಮೊದಲು ಶಿವಕುಮಾರ್- ಸಿದ್ದರಾಮಯ್ಯ ಅವರನ್ನು ಜೋಡಿಸಲಿ ಎಂದು ಅವರು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.