ADVERTISEMENT

ಜಾಧವ್ ರಾಜೀನಾಮೆ ಯಾವುದೇ ಪರಿಣಾಮ ‌ಬೀರಲ್ಲ: ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 7:18 IST
Last Updated 4 ಮಾರ್ಚ್ 2019, 7:18 IST
   

ಬೆಂಗಳೂರು: ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದ ಯಾವುದೇ ಪರಿಣಾಮ ‌ಬೀರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಪಕ್ಷ ಬಿಡುವ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು. ಬೀಸೋ ದೊಣ್ಣೆಯಿಂದ ಪಾರಾಗಲು ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಎಂದರು.

ಜಾಧವ್‌ಗೆ ಕಾಂಗ್ರೆಸ್‌ನಿಂದಾಗಿ ಇಷ್ಟು ದೊಡ್ಡ ಮಟ್ಟದ ಸ್ಥಾನ ಮಾನ ಸಿಕ್ಕಿತ್ತು. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗುವುದಕ್ಕೆ ನಮ್ಮ ಪಕ್ಷ ಸಹಾಯ ಮಾಡಿತ್ತು. ಈಗ ಜಾಧವ್ ಕುಂಟು ನೆಪ ಹೇಳುತ್ತಿದ್ದಾರೆ. ಅವರು ಪಕ್ಷಕ್ಕೆ ಮೋಸ ಮಾಡಿದ್ದಾರೆ. ಸ್ವಂತ ಸ್ಚಾರ್ಥಕ್ಕಾಗಿ ಬಿಕರಿಯಾಗಿದ್ದಾರೆ ಎಂದು ಆಪಾದಿಸಿದರು.

ADVERTISEMENT

ಸಾಮಾಜಿಕ ನ್ಯಾಯದ ಪರ ಇರುವ ಪಕ್ಷ ಬಿಟ್ಟು ಸಿದ್ದಾಂತ ಇಲ್ಲದ ಕಡೆ ಹೋಗ್ತಿದಾರೆ. ಜಾಧವ್ ಎಷ್ಟು ದೊಡ್ಡ ಸ್ವಾರ್ಥಿ ಅನ್ನುವುದನ್ನು ಇಡೀ ರಾಜ್ಯಕ್ಕೆ ತೋರಿಸಿ ಕೊಟ್ಟಿದ್ದಾರೆ. ಇದರ ಪರಿಣಾಮ ಮುಂದೆ ಅವರಿಗೆ ಅರ್ಥವಾಗಲಿದೆ. ಪಕ್ಷ ಬಿಡ್ತಿಲ್ಲ ಅಂತ ಅವರು ಅಂದು ಡ್ರಾಮಾ ಮಾಡಿದ್ರು. ಪಕ್ಷದ ಮೇಲೆ ನಿಷ್ಠೆ ಇರದವರು ಹೋದರೆ ಹೋಗಬಹುದು ಎಂದು ಹೇಳಿದರು.

ನಮ್ಮ ಮಾಹಿತಿ ಪ್ರಕಾರ ಬೇರೆ ಯಾರೂ ರಾಜೀನಾಮೆ ಕೊಟ್ಟು ಹೋಗುವುದಿಲ್ಲ. ಒಬ್ಬ ವ್ಯಕ್ತಿ ಮೇಲೆ ನಮ್ಮ ಪಕ್ಷ ಅವಲಂಬಿತವಾಗಿಲ್ಲ. ಲೋಕಸಭೆ ಚುನಾವಣೆಗೆ ಟಿಕೆಟ್‌ಅನ್ನು ಬಿಜೆಪಿಯವರು ಕೊಡ್ತಾರೆ ಎನ್ನೋ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಗೇನೂ ಇದರಿಂದ ಹಿನ್ನಡೆ ಆಗುವುದಿಲ್ಲ ಎಂದರು.

ಖರ್ಗೆಯವರ ಕೊಡುಗೆ ಈ ರಾಜ್ಯಕ್ಕೆ ನಾವು ಬೇರೆಯವರ ಜೊತೆ ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದರು.

ಜಾಧವ್ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾರೆ:ಖಂಡ್ರೆ

ಡಾ.ಉಮೇಶ್ ಜಾಧವ್ ರಾಜೀನಾಮೆ ವಿಚಾರ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ.ಜಾಧವ್ ತಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾರೆಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.

ಸ್ಪೀಕರ್‌ಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರು ಕೊಟ್ಟಿರುವ ಅನರ್ಹತೆಯ ದೂರು ಇದೆ. ಸ್ಪೀಕರ್ ಇದರ ಕಡೆ ಗಮನಹರಿಸುತ್ತಾರೆ ಎಂದರು.

ನಾನಂತೂ ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೆ. ಮುಂದೆ ಅವರಿಗೆ ತಪ್ಪಿನ ಅರಿವಾಗುವುದು ನಿಶ್ಚಿತ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.