ADVERTISEMENT

ಎಂಎಸ್‌ಪಿ ಖಾತರಿಗೆ ಆಗ್ರಹಿಸಿ ಹೋರಾಟ: ಜಗಜೀತ್‌ ಸಿಂಗ್‌ ದಲೈವಾಲ

ಜನವರಿ 8ಕ್ಕೆ ದೆಹಲಿಯಲ್ಲಿ ರೈತ ಸಂಘಟನೆಗಳ ಪೂರ್ವಭಾವಿ ಸಭೆ: ಸಂಯುಕ್ತ ಕಿಸಾನ್‌ ಮೋರ್ಚಾ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 14:09 IST
Last Updated 27 ಡಿಸೆಂಬರ್ 2025, 14:09 IST
ಉಂಡೆ ಕೊಬ್ಬರಿ
ಉಂಡೆ ಕೊಬ್ಬರಿ   

ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ ಒದಗಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಹೋರಾಟ ನಡೆಸಲಾಗುವುದು’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡ ಜಗಜೀತ್‌ ಸಿಂಗ್‌ ದಲೈವಾಲ ಅವರು ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಲು, ಜನವರಿ 8ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಎಲ್ಲ ರೈತ ಸಂಘಗಳ ಪ್ರಮುಖರನ್ನು ಕರೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಸುಪ್ರೀಂ ಕೋರ್ಟ್‌ ನೇಮಿಸಿದ್ದ ಉನ್ನತಾಧಿಕಾರ ಸಮಿತಿ ಮತ್ತು ಕೃಷಿ ವ್ಯವಹಾರಗಳ ಸಂಸದೀಯ ಸಮಿತಿ ವರದಿ ಸಲ್ಲಿಸಿವೆ. ಎಂಎಸ್‌ಪಿಗೆ ಕಾನೂನಿನ ಖಾತರಿ ಒದಗಿಸಬೇಕು ಎಂದು ಶಿಫಾರಸು ಮಾಡಿವೆ. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ತುಟಿಬಿಚ್ಚುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸುವುದು ಅನಿವಾರ್ಯ’ ಎಂದರು.

‘ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಾರೆ. ಆದರೆ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಒದಗಿಸದೆ, ಆಮದು ಉತ್ತೇಜಿಸುತ್ತಿದ್ದಾರೆ. ಪ್ರತಿ ಆರ್ಥಿಕ ವರ್ಷದಲ್ಲಿ ಸರಾಸರಿ ₹2.50 ಲಕ್ಷ ಕೋಟಿ ಮೌಲ್ಯದಷ್ಟು ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ದೇಶದ ರೈತರಿಗೆ ನಷ್ಟವಾಗುತ್ತಿದೆ. ಕೇಂದ್ರದ ಅವೈಜ್ಞಾನಿಕ ನೀತಿಗಳಿಂದ ದೇಶದಾದ್ಯಂತ 7 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ‘ರಾಜ್ಯ ಸರ್ಕಾರವು ಕಬ್ಬಿಗೆ ಹೆಚ್ಚುವರಿ ಬೆಲೆ ನಿಗದಿ ಮಾಡಿದ್ದರ ವಿರುದ್ಧ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯವು ಅವರ ಅರ್ಜಿಯನ್ನು ತಿರಸ್ಕರಿಸಿದೆ. ಸಕ್ಕರೆ ಕಾರ್ಖಾನೆ ಮಾಲೀಕರು ಈಗಲಾದರೂ ಕಬ್ಬು ಬೆಳೆಗಾರರಿಗೆ ಅವರ ಪಾಲಿನ ಹಣವನ್ನು ಪಾವತಿ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.