
ರಾಜ್ಯಪಾಲ ಥಾವರ ಚಂದ್ ಗೆಹಲೋತ್
ಬೆಂಗಳೂರು: ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಜೆಡಿಎಸ್ ಮುಖಂಡರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಮಾಡಿದ್ದಾರೆ.
ರಾಜ್ಯಪಾಲರನ್ನು ಬುಧವಾರ ಭೇಟಿ ಮಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ನೇತೃತ್ವದ ನಿಯೋಗ, ‘ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತರಲು ಹೊರಟಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯು ರಾಜ್ಯದ ಜನರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ. ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ ಗದ್ದಲದ ಮಧ್ಯೆ ಅಂಗೀಕಾರ ಪಡೆದಿದ್ದಾರೆ. ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಇಂತಹ ಮಸೂದೆಯನ್ನು ತಿರಸ್ಕರಿಸಬೇಕು’ ಎಂದು ಕೋರಿದರು.
ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸುರೇಶ್ ಬಾಬು, ‘ಅತಿವೃಷ್ಟಿ, ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಉತ್ತರ ಕರ್ನಾಟಕದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರ ಸಮಸ್ಯೆಗೆ ನೆರವಾಗಬೇಕಾದ ಸರ್ಕಾರ ದ್ವೇಷ ಭಾಷಣ ಮಸೂದೆ ರೂಪಿಸುವಂತಹ ಕೆಲಸದಲ್ಲಿ ಮಗ್ನವಾಗಿದೆ. ವಿರೋಧ ಪಕ್ಷಗಳನ್ನು ನಿಯಂತ್ರಿಸಲು ಹೊರಟಿದೆ. ಸರ್ಕಾರದ ನಡೆಯ ವಿರುದ್ಧ ಜೆಡಿಎಸ್ ಹೋರಾಟ ಮಾಡಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.