ADVERTISEMENT

ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 8:37 IST
Last Updated 2 ಅಕ್ಟೋಬರ್ 2021, 8:37 IST
ಎಚ್‌.ಡಿ. ಕುಮಾರಸ್ವಾಮಿ (ಪ್ರಜಾವಾಣಿ ಸಂಗ್ರಹ ಚಿತ್ರ)
ಎಚ್‌.ಡಿ. ಕುಮಾರಸ್ವಾಮಿ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ. ಬಿಜೆಪಿಯನ್ನು ಎದುರಿಸುವ ಶಕ್ತಿಯನ್ನು ಆ ಪಕ್ಷ ಕಳೆದುಕೊಂಡಿದೆ. ಮುಂದೆ ಪ್ರಾದೇಶಿಕ ಪಕ್ಷಗಳೇ ಬಿಜೆಪಿಗೆ ಪ್ರಬಲ ಎದುರಾಳಿಗಳಾಗಲಿವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಈಗ ಸಾಗುತ್ತಿರುವ ಹಾದಿಯನ್ನು ನೋಡಿದರೆ ಆ ಪಕ್ಷಕ್ಕೆ ರಾಜಕೀಯ ಭವಿಷ್ಯ ಉಳಿದಿಲ್ಲ ಎಂಬುದು ಮನವರಿಕೆಯಾಗುತ್ತದೆ. ಬಿಜೆಪಿಯವನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಯನ್ನು ಕಾಂಗ್ರೆಸ್‌ ಪಡೆಯುವುದು ಕಷ್ಟ. ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆಯೇ ಸ್ಪರ್ಧೆ ಇದರಲಿದೆ’ ಎಂದರು.

‘ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷ ಹೋಳಾಗಿದೆ. ಕರ್ನಾಟಕದಲ್ಲಿ ಒಂದಷ್ಟು ಶಕ್ತಿ ಇದೆ. ಆದರೆ, ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳಿದೆ. ರಾಜ್ಯ ಕಾಂಗ್ರೆಸ್‌ನಲ್ಲೂ ಆಂತರಿಕ ಸಂಘರ್ಷವಿದೆ. 18 ತಿಂಗಳಲ್ಲಿ ಇಲ್ಲಿಯೂ ಏನಾದರೂ ಆಗಬಹುದು. ನಮ್ಮ ಮನೆಗೆ (ಜೆಡಿಎಸ್‌) ಬೆಂಕಿ ಇಡಲು ಕಾಂಗ್ರೆಸ್‌ನವರು ಹೊರಟಿದ್ದಾರೆ. ಅವರ ಮನೆಗೇ (ಕಾಂಗ್ರೆಸ್‌) ಬೆಂಕಿ ಇಟ್ಟುಕೊಳ್ಳುತ್ತಾರೇನೋ? ಕಾದು ನೋಡೋಣ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಿದ್ದರಾಮಯ್ಯ ಸೇರಿದಂತೆ ಪಕ್ಷ ತೊರೆದಿರುವ ನಾಯಕರು ಇದ್ದಾಗಲೂ ಜೆಡಿಎಸ್‌ ಶಾಸಕರ ಸಂಖ್ಯೆ 50 ದಾಟಿರಲಿಲ್ಲ. ಸಿದ್ದರಾಮಯ್ಯ, ರಮೇಶ್‌ ಕುಮಾರ್‌, ಪಿ.ಜಿ.ಆರ್‌ ಸಿಂಧ್ಯ ಸೇರಿದಂತೆ ಹಲವರು ಪಕ್ಷ ಬಿಟ್ಟು ಹೋದರೂ ಯಾವ ಪರಿಣಾಮವೂ ಆಗಿಲ್ಲ ಎಂದರು.

‘ಹಿಂದೆ ನಮ್ಮ ಪಕ್ಷದ ಏಳು ಮಂದಿಯನ್ನು ಕರೆದೊಯ್ದ ಪಕ್ಷದ ಸ್ಥಿತಿ ಏನಾಯಿತು? 78 ಸ್ಥಾನಕ್ಕೆ ಕುಸಿಯಿತು. ಈಗಲೂ ಅದೇ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಪ್ರಯತ್ನ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ 38ರಿಂದ 40 ಸ್ಥಾನಕ್ಕೆ ಕುಸಿಯಬಹುದು’ ಎಂದು ಹೇಳಿದರು.

ಒಕ್ಕಲಿಗ ಶಾಸಕರು, ಮುಖಂಡರನ್ನು ಸೆಳೆದ ಮಾತ್ರಕ್ಕೆ ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಈಗಲೂ ಜನರು ಎಚ್‌.ಡಿ. ದೇವೇಗೌಡರ ಪರವಾಗಿ ಇದ್ದಾರೆ. ತಾವು 123 ಸ್ಥಾನ ಪಡೆಯುವುದಾಗಿ ಹೇಳುತ್ತಿರುವುದು ಕನಸು ಕಾಣುತ್ತಿರುವುದಲ್ಲ. 30 ಸ್ಥಾನದಿಂದ 123ಕ್ಕೆ ಏರುವುದು ಕಷ್ಟವೇನೂ ಅಲ್ಲ ಎಂದರು.

‘ಜೆಡಿಎಸ್‌ ಬಗ್ಗೆ ಪ್ರೀತಿ ಇರುವ ಯುವ ಮುಖಂಡರು ಮತ್ತು ಕೆಲವು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ನನ್ನ ಜತೆ ಇದ್ದಾರೆ. ಬಾಡಿಗೆಗೆ ಯಾವುದೇ ಏಜೆನ್ಸಿಯನ್ನು ಪಡೆದಿಲ್ಲ. ಪಕ್ಷದ ಕುರಿತು ಪ್ರೀತಿ ಇರುವವರ ನೆರವಿನಲ್ಲಿ ಯೋಜನೆ ರೂಪಿಸಿ, ಮುಂದಕ್ಕೆ ಸಾಗುತ್ತಿದ್ದೇನೆ. ದೆಹಲಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳ ಕುರಿತು ಅಧ್ಯಯನ ನಡೆಸಿದ್ದು, ನನ್ನದೇ ಒಂದು ಯೋಜನೆ ರೂಪಿಸುತ್ತಿದ್ದೇನೆ‘ ಎಂದು ತಿಳಿಸಿದರು.

ಮುಸ್ಲಿಂ ಸಮಾಜದವರಿಗೆ 20, ಮಹಿಳೆಯರಿಗೆ 20ರಿಂದ 25 ಟಿಕೆಟ್‌ ನೀಡುತ್ತೇವೆ. ಸಿದ್ದರಾಮಯ್ಯ ಅವರನ್ನು ಕೇಳಿ ನಾನು ಅಭ್ಯರ್ಥಿ ನಿರ್ಧರಿಸಬೇಕಾ? ಆ ರೀತಿ ಹೇಳಲು ಸಿದ್ದರಾಮಯ್ಯ ಯಾರು? ನಮ್ಮ ಪಕ್ಷದ ವಿಚಾರದಲ್ಲಿ ಅವರಿಗೇನು ಅಧಿಕಾರವಿದೆ? ಕಾಂಗ್ರೆಸ್‌, ಬಿಜೆಪಿಯ ದೊಣ್ಣೆ ನಾಯಕರನ್ನು ಕೇಳಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

‘ನಾವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಅನ್ಯಾಯ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಇವರು ಯಾರ ಜೇಬು ತುಂಬಿಸಿದ್ದಾರೆ? ಡಿಪಿಆರ್‌ ಇರೋದು ಇವರ ತೆವಲಿಗೆ ತಕ್ಕಂತೆ ಬದಲಾವಣೆ ಮಾಡುವುದಕ್ಕಾ? ಗುತ್ತಿಗೆದಾರರಿಗೆ ನೀಡಲು ಹಣ ಇತ್ತು. ಆದರೆ, ರೈತರಿಗೆ ನೀಡಲು ಇರಲಿಲ್ಲ ಅಲ್ಲವೆ’ ಎಂದು ಕೇಳಿದರು.

ಮೀಸಲಾತಿ ವಿಷಯದಲ್ಲಿ ಕೆಲವರು ಕಗ್ಗಂಟು ಸೃಷ್ಟಿಸುತ್ತಿದ್ದಾರೆ. ಮೀಸಲಾತಿಗಿಂತಲೂ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡುವುದು ಮುಖ್ಯ. ಮಾತೆತ್ತಿದರೆ ಹತ್ತು ಕೆ.ಜಿ. ಅಕ್ಕಿ ಕೊಡುತ್ತೇವೆ ಎನ್ನುತ್ತಾರೆ. ಸರ್ಕಾರದ ಹಣದಲ್ಲಿ ಎಷ್ಟು ದಿನ ಭಿಕ್ಷುಕರನ್ನು ಸೃಷ್ಟಿಸುತ್ತಲೇ ಇರುತ್ತೀರಿ? ಜನರಿಗೆ ಶಾಶ್ವತವಾದ ಬದುಕುವ ದಾರಿ ತೋರಿಸಬೇಕಲ್ಲವೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.