ADVERTISEMENT

ಕೊರೊನಾ | ಇಡೀ ರಾಜ್ಯದಲ್ಲಿ ಲಾಕ್‌ಡೌನ್‌ಗೆ ಎಚ್.ಡಿ. ದೇವೇಗೌಡ ಆಗ್ರಹ

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಲಾಕ್‌ಡೌನ್ ಸ್ವಾಗತಿಸಿದ ಎಚ್‌ಡಿಡಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 4:43 IST
Last Updated 13 ಜುಲೈ 2020, 4:43 IST
ಎಚ್.ಡಿ. ದೇವೇಗೌಡ (ಸಂಗ್ರಹ ಚಿತ್ರ)
ಎಚ್.ಡಿ. ದೇವೇಗೌಡ (ಸಂಗ್ರಹ ಚಿತ್ರ)   

ಬೆಂಗಳೂರು: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರವು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೆ ತಿಂಗಳು 14ರ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್‌ ಜಾರಿ ಮಾಡಿರುವುದು ಸ್ವಾಗತಾರ್ಹ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಜತೆಗೆ, ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ರಾಜ್ಯದ ಜನತೆಯ ಹಾಗೂ ನಮ್ಮ ಇಡೀ ದೇಶದ ಜನತೆಗೆ ನಾನು ಮನವಿ ಮಾಡಿಕೊಳ್ಳುತ್ತೇನೆ. ನಮಗೆ ಆರೋಗ್ಯವೇ ಭಾಗ್ಯ. ಆದ್ದರಿಂದ ದಯವಿಟ್ಟು ಮನೆಯಿಂದ ಹೊರ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ. ಅಂತರ ಕಾಯ್ದುಕೊಳ್ಳಿ. ಏನೇ ಮುಟ್ಟಬೇಕಾದರೂ ಸ್ಯಾನಿಟೈಸರ್‌ನಿಂದ ಕೈ ಅನ್ನು ಸ್ವಚ್ಛ ಗೊಳಿಸಿ ನಂತರ ಸ್ಪರ್ಶಿಸಿ. ಮುಖ್ಯವಾದ ಕೆಲಸ ಕಾರ್ಯಗಳು ಇದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ’ ಎಂದು ಮನವಿ ಮಾಡಿದ್ದಾರೆ.

‘ಈ ವೈರಸ್ಸನ್ನು ತಡೆಗಟ್ಟಲು ರಾಜ್ಯ ಸರ್ಕಾರ ಅನೇಕ ಪ್ಯಾಕೇಜುಗಳನ್ನು ಘೋಷಿಸಿದೆ. ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಅನೇಕ ನಾಯಕರು ಆಪಾದಿಸುತ್ತಿದ್ದಾರೆ. ಅದೇನೇ ಇದ್ದರೂ ಮುಂಬರುವ ಅಧಿವೇಶನದಲ್ಲಿ ಚರ್ಚೆಮಾಡಲಿ. ಈಗ ನಮಗೆ ಜನತೆಯ ಆರೋಗ್ಯ ಮುಖ್ಯ. ಮೊದಲು ನಾವೆಲ್ಲ ಅದರ ಕಡೆ ಗಮನ ಹರಿಸೋಣ. ಸರ್ಕಾರವು ಸಹ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಾವೆಲ್ಲ ಜೊತೆಗಿದ್ದೀವೆ. ಜನತೆಯ ಆರೋಗ್ಯದ ಜೊತೆ ಚೆಲ್ಲಾಟ ಬೇಡ. ದಯವಿಟ್ಟು ಇನ್ನು ಮುಂದಾದರೂ ಎಚ್ಚೆತ್ತು ಕೆಲಸ ಮಾಡಿ ಎಂದು ಮನವಿ ಮಾಡುತ್ತೀನೆ’ ಎಂದು ದೇವೇಗೌಡ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.