ADVERTISEMENT

ಪತ್ರಕರ್ತ ಸಂತೋಷ್‌ ತಮ್ಮಯ್ಯ ಬಂಧನ

ಬಂಧನ ಖಂಡಿಸಿ ಕೊಡವ ಸಮಾಜದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 8:07 IST
Last Updated 13 ನವೆಂಬರ್ 2018, 8:07 IST
ಪತ್ರಕರ್ತ ಸಂತೋಷ್‌ ತಮ್ಮಯ್ಯ ಬಂಧನ ಖಂಡಿಸಿ ಗೋಣಿಕೊಪ್ಪಲು ಪೊಲೀಸ್‌ ಠಾಣೆಯ ಎದುರು ಕೊಡವ ಸಮಾಜದಿಂದ ಪ್ರತಿಭಟನೆ. (ಒಳ ಚಿತ್ರದಲ್ಲಿ ಸಂತೋಷ್‌ ತಮ್ಮಯ್ಯ)
ಪತ್ರಕರ್ತ ಸಂತೋಷ್‌ ತಮ್ಮಯ್ಯ ಬಂಧನ ಖಂಡಿಸಿ ಗೋಣಿಕೊಪ್ಪಲು ಪೊಲೀಸ್‌ ಠಾಣೆಯ ಎದುರು ಕೊಡವ ಸಮಾಜದಿಂದ ಪ್ರತಿಭಟನೆ. (ಒಳ ಚಿತ್ರದಲ್ಲಿ ಸಂತೋಷ್‌ ತಮ್ಮಯ್ಯ)   

ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಸ್ಲಾಂ ಧರ್ಮ ಕುರಿತು ಅವಹೇಳನಕಾರಿ ಆಗಿ ಮಾತನಾಡಿದ್ದಾರೆ ಎಂಬ ಆಪಾದನೆ ಮೇರೆಗೆ ಪತ್ರಕರ್ತ ಸಂತೋಷ್‌ ತಮ್ಮಯ್ಯ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಗೋಣಿಕೊಪ್ಪಲು ಠಾಣೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು, ಪೊನ್ನಂಪೇಟೆಯ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ನ.5ರಂದು ಗೋಣಿಕೊಪ್ಪಲಿನಲ್ಲಿ ಪ್ರಜ್ಞಾ ಕಾವೇರಿ ಸಂಘಟನೆಯಿಂದ ಆಯೋಜಿಸಿದ್ದ ‘ಟಿಪ್ಪು ಕರಾಳ ಮುಖಗಳ ಅನಾವರಣ’ ವಿಚಾರ ಸಂಕಿರಣದಲ್ಲಿ ಸಂತೋಷ್‌ ತಮ್ಮಯ್ಯ ಅವರು ಅವಹೇಳನಕಾರಿ ಆಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ತಮ್ಮಯ್ಯ ಅವರು ಸಮಾಜದಲ್ಲಿ ಶಾಂತಿ ಕದಡುವ ಯತ್ನ ನಡೆಸಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕೆಂದುಸಿದ್ದಾಪುರ ಕರಡಿಗೋಡು ಗ್ರಾಮದ ಕೆ.ಜೆ. ಆಸ್ಕರ್ ಅವರು ದೂರು ನೀಡಿದ್ದರು. ಮಂಗಳವಾರ ಮುಂಜಾನೆ ಅವರನ್ನು ಬಂಧಿಸಲಾಗಿದೆ.

ADVERTISEMENT

ಬಂಧನ ಖಂಡಿಸಿ ಗೋಣಿಕೊಪ್ಪಲಿನಲ್ಲಿ ಕೊಡವ ಸಮಾಜದಿಂದ ಬೃಹತ್‌ ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ, ಹಿಂದೂ ಜಾಗರಣಾ ವೇದಿಕೆ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಸದಸ್ಯರು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಮ್ಮಯ್ಯ ಅವರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.

ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಸುಧಾಕರ್ ಹೊಸಳ್ಳಿ, ಮಂಗಳೂರಿನ ರಾಬರ್ಟ್ ರೊಜಾರಿಯೋ, ಪೊನ್ನಂಪೇಟೆಯ ನಿವಾಸಿಯೂ ಆಗಿರುವ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ, ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರ ವಿರುದ್ಧವೂ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.