ADVERTISEMENT

ವೈದ್ಯರಿಗೆ ಬ್ಲ್ಯಾಕ್‌ಮೇಲ್‌: ನಾಲ್ವರು ಪತ್ರಕರ್ತರ ಬಂಧನ

ವರದಿಗಾರರಿಂದ ಜೀವ ಬೆದರಿಕೆ, ಸುಲಿಗೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 14:34 IST
Last Updated 27 ಮಾರ್ಚ್ 2019, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ:‘ವೈದ್ಯರೊಬ್ಬರಿಗೆ ₹ 50 ಲಕ್ಷ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡುವ ಜತೆ ಜೀವ ಬೆದರಿಕೆ ಹಾಕಿ, ಹಣ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಪತ್ರಕರ್ತರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ತಿಳಿಸಿದರು.

‘ಸುವರ್ಣ 24X7 ನ್ಯೂಸ್‌ ವಾಹಿನಿಯ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮೆರಾಮೆನ್ ಸಂಗಮೇಶ ಕುಂಬಾರ, ಸಂಗ್ರಾಮ ಪತ್ರಿಕೆಯ ವರದಿಗಾರ ರವಿ ಬಿಸನಾಳ, ಹಲೋ ಬೆಂಗಳೂರು ಪಾಕ್ಷಿಕ ಪತ್ರಿಕೆಯ ವರದಿಗಾರ ಸಿದ್ರಾಮಪ್ಪ ಲಗಳಿ ಬಂಧಿತರು’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಈ ನಾಲ್ವರು ಪತ್ರಕರ್ತರು ಸೇರಿದಂತೆ, ವಿಜಯಪುರದ ನಿಂಗನಗೌಡ ಪಾಟೀಲ, ಅಥಣಿಯ ಆಶಾ ಲಕ್ಷ್ಮಣ ಜಡಗೆ ವೈದ್ಯ ಕಿರಣ್ ಓಸ್ವಾಲ್ ವಿರುದ್ಧ ಸಂಚು ರೂಪಿಸಿದ್ದರು. ಈ ಇಬ್ಬರೂ ಘಟನೆ ಬಳಿಕ ನಾಪತ್ತೆಯಾಗಿದ್ದು, ಪತ್ತೆಗೆ ವಿಶೇಷ ಪೊಲೀಸ್ ತಂಡ ರೂಪಿಸಲಾಗಿದೆ’ ಎಂದು ಎಸ್‌ಪಿ ತಿಳಿಸಿದರು.

ಘಟನೆ ವಿವರ: ‘ಈ ಪತ್ರಕರ್ತರ ಕೂಟ ಭ್ರೂಣ ಪತ್ತೆ ನಡೆಸಲಾಗುತ್ತಿದೆ ಎಂಬ ಸುಳ್ಳು ಆರೋಪ ಹೊರಿಸಿ, ಸುಲಿಗೆ ನಡೆಸಲಿಕ್ಕಾಗಿಯೇ ಮಂಗಳವಾರ ರಾತ್ರಿ ಡಾ.ಕಿರಣ್‌ ಓಸ್ವಾಲ್‌ರ ಸೋನೊಗ್ರಾಫಿ ಕ್ಲಿನಿಕ್‌ ಎದುರು ಕಾದು ಕುಳಿತಿತ್ತು. ತಮ್ಮ ಸಂಚಿನಂತೆ ನಿಂಗನಗೌಡ ಪಾಟೀಲ, ಆಶಾ ಜಡಗೆ ಕ್ಲಿನಿಕ್ ಒಳಗಿನಿಂದ ಹೊರ ಬಂದರು. ತಕ್ಷಣವೇ ಕ್ಲಿನಿಕ್‌ ಒಳಗೆ ನುಗ್ಗಿದ ಈ ತಂಡ ವೈದ್ಯರನ್ನು ಪ್ರಶ್ನಿಸಿದೆ.’

‘ಡಾ.ಓಸ್ವಾಲ್ ಆರೋಪ ನಿರಾಕರಿಸುತ್ತಿದ್ದಂತೆ, ರವಿ ಬಿಸನಾಳ ತಮ್ಮಲ್ಲಿದ್ದ ₹ 20,000 ನಗದನ್ನು ವೈದ್ಯರ ಕಿಸೆಗಿಟ್ಟು, ವಿಡಿಯೊ ಚಿತ್ರೀಕರಣ ನಡೆಸಿದ್ದಾರೆ. ನಂತರ ₹ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ. ಮಾತುಕತೆಯ ಚೌಕಾಶಿಯಲ್ಲಿ ₹ 10 ಲಕ್ಷಕ್ಕಿಳಿದಿದ್ದಾರೆ.’

‘ಹಣ ನೀಡದಿದ್ದರೆ ನಮ್ಮ ಟಿವಿಯಲ್ಲಿ ಪ್ರಸಾರ ಮಾಡಿ ನಿಮ್ಮ ಮರ್ಯಾದೆ ಕಳೆಯುತ್ತೇವೆ. ಜತೆಗೆ ಅಧಿಕಾರಿಗಳಿಗೂ ತಿಳಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಡ ಹಾಕುತ್ತೇವೆ ಎಂದು ಅಂಜಿಸಿದ್ದಾರೆ. ನಂತರ ಹೋಟೆಲ್‌ವೊಂದಕ್ಕೆ ಮಾತುಕತೆ ಸ್ಥಳಾಂತರಿಸಿ, ಅಲ್ಲಿ ವೈದ್ಯರ ಕಿಸೆಯಲ್ಲಿದ್ದ ₹ 1,00,500 ನಗದನ್ನು ಕಿತ್ತು ಕೊಂಡಿದ್ದಾರೆ. ಉಳಿದ ₹ 9 ಲಕ್ಷ ಹಣವನ್ನು ನಾಳೆಯೇ ಕೊಡಬೇಕು. ಈ ವಿಷಯವನ್ನು ಎಲ್ಲಾದ್ರೂ ಬಾಯಿಬಿಟ್ಟರೆ, ಖಲಾಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.’

‘ಈ ಸಂಬಂಧ ವೈದ್ಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ನಾಲ್ವರು ಪತ್ರಕರ್ತರನ್ನು ಬಂಧಿಸಿ, ಏಪ್ರಿಲ್‌ 3ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ’ ಎಂದು ಪ್ರಕಾಶ್ ನಿಕ್ಕಂ ಪ್ರಕರಣದ ಸಂಪೂರ್ಣ ವಿವರ ನೀಡಿದರು.

ಬಿಸನಾಳ ಬಿಜೆಪಿ ಕಾರ್ಯಕರ್ತ ?
ಪತ್ರಕರ್ತ ರವಿ ಬಿಸನಾಳ ಬಿಜೆಪಿ ಜಿಲ್ಲಾ ಘಟಕದ ಮೋರ್ಚಾವೊಂದರ ಕಾರ್ಯದರ್ಶಿಯಾಗಿದ್ದರು. ಈ ಘಟನೆಗೆ ಮುನ್ನವೂ ಪಕ್ಷದಲ್ಲಿ ಸಕ್ರಿಯರಾಗಿದ್ದರು ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

ಆದರೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ, ಬಿಸನಾಳಗೂ ನಮಗೂ ಸಂಬಂಧವಿಲ್ಲ ಎನ್ನುತ್ತಿದೆ. ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಜತೆಯಲ್ಲಿರುವ ಫೋಟೊಗಳನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹರಿದುಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.