ADVERTISEMENT

ಬಾಣಂತಿಯರ ಸಾವು ಪ್ರಕರಣ ನ್ಯಾಯಾಂಗ ತನಿಖೆಗೆ: ಸಚಿವ ದಿನೇಶ್ ಗುಂಡೂರಾವ್‌

ವಿಧಾನಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 14:15 IST
Last Updated 19 ಡಿಸೆಂಬರ್ 2024, 14:15 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣಗಳ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ಹೊರಡಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರು ವಿಧಾನಸಭೆಯಲ್ಲಿ ಗುರುವಾರ ಪ್ರಕಟಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಮತ್ತು ಬಾಣಂತಿಯರ ಸಾವಿನ ಪ್ರಕರಣಗಳ ಕುರಿತು ನಿಯಮ 69ರ ಅಡಿಯಲ್ಲಿ ಸದನದಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ‘ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣಗಳ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಪ್ರಕರಣಗಳ ಸಮಗ್ರ ತನಿಖೆಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ, ಆದೇಶ ಹೊರಡಿಸಲಾಗುವುದು’ ಎಂದರು.

‘ಪಶ್ಚಿಮ್‌ ಬಂಗಾ ಫಾರ್ಮಾಸ್ಯುಟಿಕಲ್ ಕಂಪನಿ ಪೂರೈಸಿದ್ದ ರಿಂಗರ್‌ ಲ್ಯಾಕ್ಟೇಟ್ ಐ.ವಿ ದ್ರಾವಣ ಕಳಪೆ ಗುಣಮಟ್ಟದ್ದಾಗಿತ್ತು. ಅದರಿಂದಾಗಿಯೇ ಬಾಣಂತಿಯರ ಆರೋಗ್ಯದಲ್ಲಿ ವ್ಯತ್ಯಯವಾಗಿ ಸಾವು ಸಂಭವಿಸಿರುವ ಅನುಮಾನಗಳಿವೆ. ಈ ಸಂಬಂಧ ಒಂಬತ್ತು ಪ್ರಕರಣಗಳನ್ನು ಕಂಪನಿ ವಿರುದ್ಧ ದಾಖಲಿಸಲಾಗಿದೆ. ಇಂತಹ ಪ್ರಕರಣಗಳನ್ನು ಹೀಗೆಯೇ ಬಿಡಬಾರದು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇಬೇಕು. ನಮ್ಮ ವೈಫಲ್ಯವಿದ್ದರೆ ನನ್ನ ವಿರುದ್ಧವೂ ಕ್ರಮ ಆಗಲಿ’ ಎಂದು ಹೇಳಿದರು.

ADVERTISEMENT

ಪಶ್ಚಿಮ್‌ ಬಂಗಾ ಕಂಪನಿ ಪೂರೈಸಿದ್ದ ರಿಂಗರ್‌ ಲ್ಯಾಕ್ಟೇಟ್‌ ಐ.ವಿ ದ್ರಾವಣದ ಗುಣಮಟ್ಟ ಕಳಪೆ ಎಂಬ ವರದಿಗಳು 2023ರಲ್ಲೇ ಬಂದಿದ್ದವು. 192 ಬ್ಯಾಚ್‌ಗಳಲ್ಲಿ ಪೂರೈಕೆಯಾಗಿದ್ದ ಐ.ವಿ ದ್ರಾವಣವನ್ನು ಬಳಕೆಯಿಂದ ಹಿಂಪಡೆದು, ಪಶ್ಚಿಮ ಬಂಗಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು ಎಂದು ವಿವರ ನೀಡಿದರು.

ಕೇಂದ್ರದ ಪ್ರಯೋಗಾಲಯದ ವರದಿ: ಪಶ್ಚಿಮ್ ಬಂಗಾ ಕಂಪನಿಯು ಕೇಂದ್ರದ ಪ್ರಯೋಗಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೇಂದ್ರದ ಪ್ರಯೋಗಾಲವು ರಿಂಗರ್‌ ಲ್ಯಾಕ್ಟೇಟ್‌ ದ್ರಾವಣದ ಗುಣಮಟ್ಟ ಕಳಪೆಯಾಗಿಲ್ಲ ಎಂಬ ವರದಿ ನೀಡಿತ್ತು ಎಂದು ದಿನೇಶ್‌ ತಿಳಿಸಿದರು.

‘ಕೇಂದ್ರದ ಪ್ರಯೋಗಾಲಯದ ವರದಿ ಬಂದ ಬಳಿಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು ಈ ದ್ರಾವಣವನ್ನು ರಾಷ್ಟ್ರೀಯ ಪ್ರಯೋಗಾಲಯ ಮತ್ತು ಪರೀಕ್ಷಾ ಮಾನ್ಯತಾ ಮಂಡಳಿ (ಎನ್‌ಎಬಿಎಲ್‌) ಮಾನ್ಯತೆ ಹೊಂದಿರುವ ಪ್ರಯೋಗಾಲಯಗಳು ಹಾಗೂ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಪ್ರಯೋಗಾಲಯಗಳಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಿತ್ತು. 22 ಬ್ಯಾಚ್‌ಗಳ ದ್ರಾವಣವನ್ನು ಹಂತ ಹಂತವಾಗಿ ಬಳಕೆಗೆ ಪೂರೈಸಲಾಗಿತ್ತು. ಬಳ್ಳಾರಿ ಪ್ರಕರಣದ ಬಳಿಕವೂ ಪರೀಕ್ಷೆ ನಡೆಸಿದ್ದು, ದ್ರಾವಣ ಗುಣಮಟ್ಟದಿಂದ ಕೂಡಿದೆ ಎಂಬ ವರದಿ ಬಂದಿದೆ’ ಎಂದರು.

‘ಔಷಧಿ ಕಂಪನಿಗಳ ಲಾಬಿಯನ್ನು ಮಣಿಸಬೇಕಿದೆ’

‘ನಮ್ಮ ದೇಶದಲ್ಲಿ ಔಷಧಿ ಕಂಪನಿಗಳ ಲಾಬಿ ಪ್ರಬಲವಾಗಿದೆ. ಹಲವು ಕಂಪನಿಗಳು ರಫ್ತು ಉದ್ದೇಶ ಮತ್ತು ದೇಶೀಯ ಮಾರುಕಟ್ಟೆಗೆ ಔಷಧಿ ಉತ್ಪಾದಿಸಲು ಪ್ರತ್ಯೇಕ ಘಟಕಗಳನ್ನು ಹೊಂದಿವೆ. ಇದು ನಮ್ಮ ದೇಶದೊಳಕ್ಕೆ ಮಾರುಕಟ್ಟೆ ಪ್ರವೇಶಿಸುವ ಔಷಧಿಗಳ ಗುಣಮಟ್ಟದ ಬಗ್ಗೆ ಚಿಂತಿಸುವಂತೆ ಮಾಡಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಔಷಧ ಉತ್ಪಾದನೆ ಮಾರಾಟದ ಮೇಲೆ ಹೊಂದಿರುವ ನಿಯಂತ್ರಣ ವ್ಯವಸ್ಥೆಯ ಮೇಲೆ ಔಷಧಿ ಉತ್ಪಾದಕರೇ ಹಿಡಿತ ಸಾಧಿಸಿದ್ದಾರೆ ಎಂದರು.

‘ವಿಪಕ್ಷದ ಆರೋಪಗಳಲ್ಲಿ ಹುರುಳಿಲ್ಲ’

‘ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ವಿರೋಧ ಪಕ್ಷ ಬಿಜೆಪಿಯವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. 108 ಆಂಬುಲೆನ್ಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಹೊರತಾಗಿ ಯಾವುದೇ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯು ಬಳಕೆದಾರರ ಶುಲ್ಕ ಹೆಚ್ಚಿಸಿಲ್ಲ. ರಾಷ್ಟ್ರೀಯ ಗುಣಮಟ್ಟ ಖಾತರಿ ಮಾನದಂಡಗಳ ಅಡಿಯಲ್ಲಿ ಪ್ರಮಾಣಪತ್ರವನ್ನೂ ಪಡೆಯಲಾಗುತ್ತಿದೆ’ ಎಂದು ದಿನೇಶ್ ಗುಂಡೂರಾವ್‌ ಹೇಳಿದರು.

ಬಿಜೆಪಿ ಧರಣಿ ಸಭಾತ್ಯಾಗ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರು ರಾಜೀನಾಮೆ ನೀಡಬೇಕು. ಗರ್ಭಿಣಿಯರ ಸಾವು ಸರ್ಕಾರಿ ಪ್ರಾಯೋಜಿತ ಹತ್ಯೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಿ ಬಳಿಕ ಸಭಾತ್ಯಾಗ ಮಾಡಿದರು. ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ ಭ್ರಷ್ಟಾಚಾರದ ಕಾರಣ ಈ ಸಾವುಗಳು ಸಂಭವಿಸಿದ್ದು ಸಚಿವರೇ ತಪ್ಪಿತಸ್ಥರು. ಅವರನ್ನು ವಜಾ ಮಾಡಬೇಕಿತ್ತು ಎಂದು ಆಗ್ರಹಿಸಿದರು. ಈ ಹಂತದಲ್ಲಿ ಅಶ್ವತ್ಥನಾರಾಯಣ ಮತ್ತು ದಿನೇಶ್‌ ಗುಂಡೂರಾವ್‌ ಮಧ್ಯೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. ಈ ಹಂತದಲ್ಲಿ ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.