
ಬೆಂಗಳೂರು: ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷರಾಗಿದ್ದ ಅವಧಿಯ ವ್ಯವಹಾರಗಳ ಬಗೆಗಿನ ತನಿಖೆಗೆ, ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗ ರಚಿಸುವ ಬಗ್ಗೆ ವರದಿ ನೀಡಿ ಎಂದು ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದಾರೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಬುಧವಾರವಷ್ಟೇ ಭೇಟಿ ಮಾಡಿದ್ದ ಮಹೇಶ ಜೋಶಿ ಅವರು ಈ ಸಂಬಂಧ ಮನವಿ ಸಲ್ಲಿಸಿದ್ದರು.
‘ಕೆಲವರು ದುರುದ್ದೇಶದಿಂದ ಕಸಾಪ, ನನ್ನ ಮೇಲೆ ಮತ್ತು ಕಾರ್ಯಕಾರಿ ಸಮಿತಿಯ ವಿರುದ್ಧ ಅಪಪ್ರಚಾರ ಮಾಡಿಸುತ್ತಾ, ನಿರಂತರ ದೂರು ನೀಡುತ್ತಿದ್ದಾರೆ. ಕಸಾಪ ಹಾಗೂ ನನ್ನನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರು ನೀಡಿರುವ ದೂರು ಆಧರಿಸಿ ವಿಚಾರಣಾಧಿಕಾರಿಗಳನ್ನು ನೇಮಿಸಲಾಗಿದೆ. ವಿಚಾರಣಾಧಿಕಾರಿಯು ವಿಚಾರಣೆ ನಡೆಸದೆ ವರದಿ ನೀಡುವ ಬಗ್ಗೆ ಅನುಮಾನವಿದೆ. ಹೀಗಾಗಿ, ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮಹೇಶ ಜೋಶಿ ಕೋರಿದ್ದರು.
ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರು ಪತ್ರ ಬರೆದಿದ್ದು, ಮಹೇಶ ಜೋಶಿ ಅವರ ಮನವಿ ಬಗ್ಗೆ ವಿವರಿಸಿದ್ದಾರೆ.
‘ತಮ್ಮ ವಿರುದ್ಧ ದುರುದ್ದೇಶದಿಂದ ಆರೋಪ ಮಾಡಲಾಗಿದೆ ಎಂದು ಮಹೇಶ ಜೋಶಿ ಅವರು ತಿಳಿಸಿದ್ದಾರೆ. ಆರೋಪ ಮಾಡಿದವರು ಪ್ರಭಾವಿ ಸ್ಥಾನದಲ್ಲಿದ್ದು, ವಿಚಾರಣಾಧಿಕಾರಿಯು ನಿಷ್ಪಕ್ಷಪಾತ ತನಿಖೆ ನಡೆಸುವ ಬಗ್ಗೆ ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸುವ ಬಗ್ಗೆ ನಿಮ್ಮ ವಷ್ತುನಿಷ್ಠ ವರದಿಯನ್ನು ಸಲ್ಲಿಸಿ’ ಎಂದು ರಾಜ್ಯಪಾಲರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.