ಕೆ. ಕಸ್ತೂರಿ ರಂಗನ್
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ, ವಿಜ್ಞಾನಿ ಕೆ. ಕಸ್ತೂರಿ ರಂಗನ್ (84) ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧರಾದರು.
ಮೃತರಿಗೆ ಇಬ್ಬರು ಪುತ್ರರಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಸದಾಶಿವನಗರದ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (ಆರ್‌ಆರ್‌ಐ) ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಾಹ್ಯಾಕಾಶ ವಿಜ್ಞಾನಿಯಾಗಿದ್ದ ಕೃಷ್ಣಸ್ವಾಮಿ ಕಸ್ತೂರಿ ರಂಗನ್, ಬಾಹ್ಯಾಕಾ ಕ್ಷೇತ್ರವಲ್ಲದೇ ರಾಜಕೀಯ, ಶಿಕ್ಷಣ, ಪರಿಸರ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ್ದರು.
ಕಸ್ತೂರಿ ರಂಗನ್ ಅವರು, 1994 ರಿಂದ 2003ರ ವರೆಗೆ ಇಸ್ರೊದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ಪಿಎಸ್‌ಎಲ್‌ವಿ ಯೋಜನೆ ಅಭಿವೃದ್ಧಿಯಲ್ಲಿ ಮುಖ್ಯಪಾತ್ರವಹಿಸಿದ್ದ ಅವರು, ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹಗಳಾದ ‘ಭಾಸ್ಕರ್ I’ ಮತ್ತು ‘ಭಾಸ್ಕರ್ II’ ಉಪಗ್ರಹಗಳ ತಯಾರಿಕೆಯಲ್ಲಿ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದ್ದರು..
2003–2009 ರವೆರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು, ನಂತರ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ನಿಯಾಸ್) ಸಂಸ್ಥೆಯ ನಿರ್ದೇಶಕರಾಗಿದ್ದರು. ನಂತರ ಯೋಜನಾ ಆಯೋಗದಲ್ಲಿ ವಿಜ್ಞಾನದ ವಿಭಾಗದ ಸದಸ್ಯರಾಗಿದ್ದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಕರಡು ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಎನ್‌ಇಪಿಯಲ್ಲಿನ ಶಿಕ್ಷಣ ಸುಧಾರಣೆಗಳ ಹಿಂದಿನ ವ್ಯಕ್ತಿ ಎಂದೇ ಕಸ್ತೂರಿ ರಂಗನ್ ಖ್ಯಾತರಾಗಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ್ದ ‘ಪಶ್ಚಿಮ ಘಟ್ಟ ಅಧ್ಯಯನ ಸಮಿತಿಗೆ ಕಸ್ತೂರಿ ರಂಗನ್ ನೇತೃತ್ವವಹಿಸಿದ್ದರು. 1982ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ ಹಾಗೂ 2000ದಲ್ಲಿ ಪದ್ಮವಿಭೂಷಣ ಪುರಸ್ಕಾರ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.