
ಬೆಂಗಳೂರು: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕನಕದಾಸರ ಕರ್ಮಭೂಮಿ ಕಾಗಿನೆಲೆ ಮತ್ತು ಜನ್ಮಭೂಮಿ ಸ್ಥಳವಾದ ಬಾಡ ಗ್ರಾಮ ಹಾಗೂ ಸುತ್ತಮುತ್ತಲಿನ ಪರಂಪರೆಯ ತಾಣಗಳನ್ನು ಅಭಿವೃದ್ಧಿಗೊಳಿಸಲು ವಿವಿಧ ಯೋಜನೆಗಳ ₹ 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆ ಬುಧವಾರ ನಡೆಯಿತು.
ಕಾಗಿನೆಲೆಯಲ್ಲಿ ಪ್ರತಿ ವರ್ಷ ಕನಕ ಉತ್ಸವವನ್ನು ಆಚರಿಸಬೇಕು. ಈ ಉತ್ಸವ ಸಂದರ್ಭದಲ್ಲಿ ಜಿಲ್ಲೆಯ ದಾರ್ಶನಿಕರ ಜೀವನಾದರ್ಶಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠ ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಪ್ರಾಧಿಕಾರದಲ್ಲಿ ಸಂಚಿತ ನಿಧಿಯನ್ನು ಸ್ಥಾಪಿಸಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದೂ ಮುಖ್ಯಮಂತ್ರಿ ನಿರ್ದೇಶನ ನೀಡಿದರು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಲಾಭವನ ನಿರ್ಮಾಣ, ಕನಕ ವಸ್ತು ಸಂಗ್ರಹಾಲಯದಲ್ಲಿ ಒಳವಸ್ತು ಶಿಲ್ಪ ಸಂಗ್ರಹಾಲಯ ನಿರ್ಮಾಣ, ಚೆನ್ನಕೇಶವ ದೇವಾಲಯ, ಮೆಟ್ಟಿಲು, ಗೋಪುರ, ಕಮಾನುಗಳ ನಿರ್ಮಾಣ, ಕದರಮಂಡಲಗಿ ವೆಂಕಟೇಶ್ವರ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಾಧಿಕಾರದ ವ್ಯಾಪ್ತಿಯ ಉದ್ಯಾನಗಳ ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡುವ ಕುರಿತು ಹಾಗೂ ಕನಕ ಪರಿಸರ ಉದ್ಯಾನದಲ್ಲಿ ಖಾಲಿ ಇರುವ ಜಾಗದಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಲು ನಿರ್ಧರಿಸಲಾಯಿತು. ಕಾಗಿನೆಲೆ ಗ್ರಾಮದ ವ್ಯಾಪ್ತಿಯಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲು ಚರ್ಚಿಸಲಾಯಿತು.
ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಸಚಿವ ಶಿವಾನಂದ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಪ್ರಾಧಿಕಾರದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.