ADVERTISEMENT

ಒಂದು ದಿನದ ವೇತನ ಕೊಡಲು ಹಿಂದೇಟು!

ಸೂಕ್ತ ಆಹ್ವಾನ ನೀಡದ ಕಸಾಪ ನಡೆಗೆ ಮುನಿಸಿಕೊಂಡ ಸರ್ಕಾರಿ ನೌಕರರ ಸಂಘ

ಮನೋಜ ಕುಮಾರ್ ಗುದ್ದಿ
Published 27 ಜನವರಿ 2020, 19:34 IST
Last Updated 27 ಜನವರಿ 2020, 19:34 IST
   

ಕಲಬುರ್ಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಕಾರ್ಯಗಳಿಗೆಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳಿಗೆ ಆಹ್ವಾನ ನೀಡಿಲ್ಲ ಎಂದು ಮುನಿಸಿಕೊಂಡಿರುವ ಸಂಘವು ಜಿಲ್ಲೆಯ ನೌಕರರ ಒಂದು ದಿನದ ವೇತನವನ್ನು ನೀಡಲು ಹಿಂದೇಟು ಹಾಕುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಸಮ್ಮೇಳನದ ಕೋಶಾಧ್ಯಕ್ಷರೂ ಆದ ಜಿಲ್ಲಾಧಿಕಾರಿ ಅವರಿಗೆ ಜ.24ರಂದು ₹ 3 ಕೋಟಿ ಮೊತ್ತದ ಚೆಕ್‌ ವಿತರಿಸಬೇಕಿತ್ತು. ಆದರೆ, ‘ಯಾರು ಬಂದರೂ ನಡೆಯುತ್ತದೆ, ಬರದಿದ್ದರೂ ನಡೆಯುತ್ತದೆ’ ಎಂಬ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನಡೆಗೆ ಸಾಂಕೇತಿಕ ಪ್ರತಿರೋಧ ತೋರಿಸುವ ಸಲುವಾಗಿ ಚೆಕ್‌ ಹಸ್ತಾಂತರ ಕಾರ್ಯಕ್ರಮ ಕೊನೆ ಗಳಿಗೆಯಲ್ಲಿ ರದ್ದಾಯಿತು ಎನ್ನಲಾಗಿದೆ.

ಸಮ್ಮೇಳನ ನಡೆಸಲು ₹ 14 ಕೋಟಿ ವೆಚ್ಚವಾಗಬಹುದು ಎಂದು ಕಸಾಪ ಕೇಂದ್ರ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ಇಲಾಖೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ಅಲ್ಲದೇ, ಇತ್ತೀಚೆಗೆ ಸಮ್ಮೇಳನದ ಪೂರ್ವಸಿದ್ಧತಾ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ‘ಸಮ್ಮೇಳನಕ್ಕೆ ಸರ್ಕಾರ ತನ್ನ ಪಾಲಿನ ಹಣ ನೀಡಲಿದೆ. ಜೊತೆಗೆ ಜಿಲ್ಲೆಯ ದಾನಿಗಳಿಂದಲೂ ಹಣ ಸಂಗ್ರಹಿಸಿ’ ಎಂದು ಸೂಚನೆ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ ಶರತ್ ಬಿ. ಈ ಸಂಬಂಧ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆ, ಸಿಮೆಂಟ್‌ ಕಾರ್ಖಾನೆಗಳ ಮುಖ್ಯಸ್ಥರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಪತ್ರ ಬರೆದು ನೆರವು ಕೇಳಿದ್ದಾರೆ. ಆದರೆ, ನಿರೀಕ್ಷಿತ ಮಟ್ಟಿಗೆ ನಿಧಿ ಸಂಗ್ರಹವಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸಮ್ಮೇಳನದ ಸಂಘಟಕರಿಗೆ ಸರ್ಕಾರದ ಅನುದಾನ ಹೊರತುಪಡಿಸಿ ಮತ್ತೊಂದು ಪ್ರಮುಖ ಹಣಕಾಸಿನ ಮೂಲವೆಂದರೆ ಸರ್ಕಾರಿ ನೌಕರರು ನೀಡುವ ಒಂದು ದಿನದ ವೇತನ. ಆದರೆ, ವಿವಿಧ ಸಮಿತಿಗಳಲ್ಲಿ ಸೇರಿಸಿಕೊಂಡಿಲ್ಲ. ಸಭೆಗಳಿಗೂ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ (ರಾಜು) ಲೇಂಗಟಿ ಅವರನ್ನು ಆಹ್ವಾನಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಸಾಪ ಜಿಲ್ಲಾ ಘಟಕದ ಪದಾಧಿಕಾರಿಯೊಬ್ಬರು, ‘ಜಿಲ್ಲೆಯ ನೌಕರರ ಸಂಘದಲ್ಲಿ ಎರಡು ಬಣಗಳಿದ್ದು, ಒಬ್ಬರನ್ನು ಕರೆದರೆ ಮತ್ತೊಬ್ಬರಿಗೆ ಸಿಟ್ಟು ಬರುತ್ತದೆ. ಆದಾಗ್ಯೂ, ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ಸಭೆಗಳಿಗೆ ಆಹ್ವಾನಿಸಿದ್ದೇವೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.