ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಉಂಟು ದೀರ್ಘ ನಂಟು

ಚಾಲ್ತಿಯಲ್ಲಿ ಇಲ್ಲದ ಖಾತೆಗೆ ₹20 ಲಕ್ಷ ಜಮೆ * ಜಾಲದ ಬೆನ್ನು ಹತ್ತಿದ ಡಿಆರ್‌ಐ

ಕೆ.ಎಸ್.ಸುನಿಲ್
Published 14 ಮಾರ್ಚ್ 2025, 23:30 IST
Last Updated 14 ಮಾರ್ಚ್ 2025, 23:30 IST
<div class="paragraphs"><p>ರನ್ಯಾ ರಾವ್‌</p></div>

ರನ್ಯಾ ರಾವ್‌

   

ಬೆಂಗಳೂರು: ಚಿನ್ನ ಕಳ್ಳಸಾಗಣೆಯಲ್ಲಿ ನಟಿ ರನ್ಯಾ ರಾವ್ ಅವರು ದೀರ್ಘಕಾಲದ ನಂಟು ಹೊಂದಿರುವುದು ರೆವೆನ್ಯೂ ಗುಪ್ತಚರ ನಿರ್ದೇಶನಾಲಯದ ( ಡಿಆರ್‌ಐ) ತನಿಖೆ ವೇಳೆ ಪತ್ತೆಯಾಗಿದೆ.

ನಟಿಯ ಬ್ಯಾಂಕ್ ಖಾತೆಯೊಂದಕ್ಕೆ ಸಂಶಯಾಸ್ಪದ ಮೂಲದಿಂದ ₹20 ಲಕ್ಷ 2024ರ ಅಕ್ಟೋಬರ್‌ನಲ್ಲೇ ಸಂದಾಯವಾಗಿರುವುದು ಪತ್ತೆಯಾಗಿದೆ. ನಗದು ವರ್ಗಾವಣೆ ಆದ ಸಂದರ್ಭದಲ್ಲಿ ಈ ಖಾತೆ ಚಾಲ್ತಿಯಲ್ಲೇ ಇರಲಿಲ್ಲ. ಈ ಪಾವತಿಯ ಹಿಂದೆ ಚಿನ್ನ ಕಳ್ಳಸಾಗಣೆ ಜಾಲದ ನಂಟು ಇರಬಹುದು ಎಂಬ ಶಂಕೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೊದಲ ಬಾರಿಗೆ ದುಬೈನಿಂದ ಬೆಂಗಳೂರಿಗೆ ಚಿನ್ನಕಳ್ಳಸಾಗಣೆ ಮಾಡಿರುವುದಾಗಿ ವಿಚಾರಣೆ ವೇಳೆ ರನ್ಯಾ  ಹೇಳಿದ್ದಾರೆ. ಆದರೆ, ತನಿಖಾ ತಂಡ ನಟಿಯ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದ್ದು, ವಹಿವಾಟು ಕುರಿತು ಮಾಹಿತಿ ಸಂಗ್ರಹಿಸಿದೆ.

ಚಾಲ್ತಿಯಲ್ಲಿ ಇಲ್ಲದ ರನ್ಯಾ ಖಾತೆಗೆ ಹಣ ಸಂದಾಯವಾಗಿದ್ದು ಬಿಟ್ಟರೆ, ಈ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಯಾವ ಖಾತೆಯಿಂದ ವರ್ಗಾವಣೆ ಆಗಿದೆ? ಯಾರು ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.

ಮೊದಲು ಸಿಕ್ಕಿಬಿದ್ದಿದ್ದರೇ?: ರನ್ಯಾ ಅವರನ್ನು ಹಿಂದೊಮ್ಮೆ ಚಿನ್ನ ಕಳ್ಳಸಾಗಣೆಗೆ ಯತ್ನಿಸುತ್ತಿದ್ದ ಶಂಕೆಯ ಮೇಲೆ ದುಬೈ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದ ಮಾಹಿತಿ ಡಿಆರ್‌ಐಗೆ ಲಭ್ಯವಾಗಿದೆ. ನಟಿ ಹಿಂದಿನಿಂದಲೂ ಚಿನ್ನ ಕಳ್ಳಸಾಗಣೆ ಜಾಲದಲ್ಲಿ ಸಕ್ರಿಯರಾಗಿದ್ದರು ಎಂಬ ಅನುಮಾನಕ್ಕೆ ಇದು ಪುಷ್ಟಿ ನೀಡಿದೆ.

‘ಹೆಚ್ಚು ಪ್ರಮಾಣದ ಚಿನ್ನದೊಂದಿಗೆ ಬೆಂಗಳೂರಿನತ್ತ ಹೊರಟಿದ್ದ ರನ್ಯಾ ಅವರನ್ನು ದುಬೈನ ವಿಮಾನ ನಿಲ್ದಾಣದಲ್ಲಿ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದವು. ಆಗ, ‘ಭಾರತಕ್ಕೆ ಹೊರಟಿಲ್ಲ, ಜಿನೀವಾಕ್ಕೆ ಪ್ರಯಾಣಿಸುತ್ತಿದ್ದೇನೆ’ ಎಂದು ನಟಿ ಉತ್ತರಿಸಿದ್ದರು. ಜಿನೀವಾಕ್ಕೆ ಚಿನ್ನ ಕೊಂಡೊಯ್ಯಲು ನಿರ್ಬಂಧಗಳಿಲ್ಲದ ಕಾರಣದಿಂದ ನಟಿಯ ಮಾತನ್ನು ನಂಬಿದ್ದ ತನಿಖಾ ಸಂಸ್ಥೆಗಳ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದರು ಎಂಬ ಮಾಹಿತಿ ದೊರೆತಿದೆ. ಈ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಕಳ್ಳ ಸಾಗಣೆ ಮೂಲಕ ತರುತ್ತಿದ್ದ ಚಿನ್ನವನ್ನು ರನ್ಯಾ ರಾವ್‌, ‌ತರುಣ್ ರಾಜು ಅವರಿಗೆ ನೀಡುತ್ತಿದ್ದರು. ಹವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈ ತಲುಪಿ, ಬಳಿಕ ಚಿನ್ನದ ಗಟ್ಟಿ ರೂಪದಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿತ್ತು. ಈ ಚಿನ್ನವನ್ನು ಬೆಂಗಳೂರಿನಲ್ಲಿ ಆಯ್ದ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಒಂದು ಕೆ.ಜಿ ಚಿನ್ನಕ್ಕೆ ₹5 ರಿಂದ ₹10 ಲಕ್ಷದವರೆಗೂ ಕಮಿಷನ್ ದೊರೆಯುತ್ತಿತ್ತು ಎಂಬುದು ತನಿಖಾ ತಂಡಕ್ಕೆ ಗೊತ್ತಾಗಿದೆ.

ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯ ಸ್ನೇಹಿತ ತರುಣ್ ರಾಜು ಅವರು ತೆಲುಗು ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ. ಹಾಗಾಗಿ ಅವರಿಗೆ ಉದ್ಯಮಿಗಳು, ರಾಜಕಾರಣಿಗಳು ಮತ್ತು ನಟರ ನಂಟು ಹೊಂದಿದ್ದು, ಆ ಆಯಾಮದಿಂದಲೂ ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದೆ.

ಚಿನ್ನಾಭರಣ ಕಂಪನಿಗಳ ಕೈವಾಡದ ಶಂಕೆ

ರನ್ಯಾ ರಾವ್‌ ಮತ್ತು ಇತರರು ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಜಾಲದಲ್ಲಿ ದೇಶದ ಕೆಲವು ಪ್ರತಿಷ್ಠಿತ ಚಿನ್ನಾಭರಣ ಕಂಪನಿಗಳ ಕೈವಾಡ ಇರುವ ಶಂಕೆಯೂ ಬಲವಾಗಿದೆ. ಈ ಜಾಡು ಹಿಡಿದು ಡಿಆರ್‌ಐ ಮುಂದೆ ಸಾಗುತ್ತಿದೆ. ಬೆಂಗಳೂರಿನಲ್ಲಿರುವ ಕೆಲವು ಪ್ರತಿಷ್ಠಿತ ಚಿನ್ನಾಭರಣ ಕಂಪನಿಗಳು ಕಳ್ಳಸಾಗಣೆಯಿಂದ ಬಂದ ಚಿನ್ನವನ್ನು ಬಳಕೆ ಮಾಡಿಕೊಂಡಿರುವ ಸುಳಿವು ತನಿಖಾ ತಂಡಗಳಿಗೆ ಲಭಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೈಕಮಾಂಡ್‌ಗೆ ಕಾಂಗ್ರೆಸ್‌ ವರದಿ

ಚಿತ್ರ ನಟಿ ರನ್ಯಾ ರಾವ್‌ ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿದ್ದ ಪ್ರಕರಣದಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರು, ಸರ್ಕಾರದ ಸಚಿವರು ಭಾಗಿಯಾಗಿಲ್ಲ ಎಂದು ಪಕ್ಷದ ಹೈಕಮಾಂಡ್‌ಗೆ ಕೆಪಿಸಿಸಿ ವರದಿ ನೀಡಿದೆ.

‘ಮಾಧ್ಯಮಗಳಲ್ಲಿ ವರದಿ ಬಿತ್ತರವಾದಂತೆ ಪ್ರಕರಣದಲ್ಲಿ ಸರ್ಕಾರದ ಯಾವ ಸಚಿವರು, ಕಾಂಗ್ರೆಸ್‌ ನಾಯಕರ ಕೈವಾಡ ಇಲ್ಲ. ಆರೋಪಿ ರನ್ಯಾ ಅವರು ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್ ಅವರ ಮಲಮಗಳು. ಅವರು ರಾಜ್ಯ ಕೇಡರ್‌ನ ಐಪಿಎಸ್‌ ಅಧಿಕಾರಿ. ಹಾಗಾಗಿ, ಅವರ ಕುಟುಂಬದ ಪರಿಚಯ ಹಲವರಿಗಿದೆ. ಅವರ ಕುಟುಂಬದ ಮದುವೆ ಮತ್ತಿತರ ಸಮಾರಂಭಗಳಲ್ಲಿ ಭಾಗಿಯಾಗಿದ್ದಾರೆ. ವೈಯಕ್ತಿಕ ಸ್ನೇಹ, ನಂಟಿನ ಹೊರತು ಆರೋಪಿಗೆ ಯಾವುದೇ ಸಹಕಾರವನ್ನು ಯಾರೊಬ್ಬರೂ ನೀಡಿಲ್ಲ ಎಂದು ಹೈಕಮಾಂಡ್‌ಗೆ ನೀಡಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳು ಹೇಳಿವೆ.

ಪ್ರಕರಣ ಪತ್ತೆಯಾದ ನಂತರ ಸರ್ಕಾರದ ಕೆಲ ಸಚಿವರೊಂದಿಗೆ ರನ್ಯಾ ರಾವ್‌ ನಂಟಿದೆ ಎಂಬ ಸುದ್ದಿಗಳು ಬಿತ್ತರವಾದ ಕಾರಣ ಕೆಪಿಸಿಸಿ, ದೆಹಲಿ ನಾಯಕರಿಗೆ ಸ್ಪಷ್ಟನೆ ನೀಡಿದೆ.

ಜತಿನ್‌ ಹುಕ್ಕೇರಿ ವಿಚಾರಣೆ

ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶೋಧ ಮುಂದುವರಿಸಿರುವ ಜಾರಿ ನಿರ್ದೇಶ ನಾಲಯವು (ಇ.ಡಿ), ನಟಿ ರನ್ಯಾ ರಾವ್ ಪತಿ ಜತಿನ್‌ ಹುಕ್ಕೇರಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.

ಜತಿನ್‌ ಅವರ ಫ್ಲ್ಯಾಟ್‌ಗೆ ಶುಕ್ರವಾರ ಬಂದಿದ್ದ ಇ.ಡಿ ಅಧಿಕಾರಿಗಳು ರಾತ್ರಿಯವರೆಗೂ ವಿಚಾರಣೆ ನಡೆಸಿದರು. ಉದ್ಯಮಿ ತರುಣ್‌ ರಾಜು, ರನ್ಯಾ ರಾವ್‌ ನಡುವಣ ಹಣಕಾಸು ವ್ಯವಹಾರ, ಜತಿನ್‌ ಅವರ ಹಣಕಾಸು ವಹಿವಾಟುಗಳ ಬಗ್ಗೆ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.

ತರುಣ್‌ ಮತ್ತು ಜತಿನ್‌ ಅವರ ಉದ್ಯಮಗಳ ಜತೆ ಹಣಕಾಸು ವ್ಯವಹಾರ ಇರಿಸಿಕೊಂಡಿರುವ ಇತರ ಉದ್ಯಮಿಗಳು ಮತ್ತು ಉದ್ಯಮಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ. ಗುರುವಾರದ ಶೋಧ ಕಾರ್ಯದ ವೇಳೆ ಕಲೆಹಾಕಿದ್ದ ದಾಖಲೆಗಳ ಬಗ್ಗೆ ಜತಿನ್‌ ಅವರಿಂದ ವಿವರಣೆ ಕೇಳಲಾಗಿದೆ ಎಂದು ಮಾಹಿತಿ ನೀಡಿವೆ.

ಗುರುವಾರದ ಶೋಧದ ವೇಳೆ ನಗರದ ಕೆಲ ಚಿನ್ನದ ವ್ಯಾಪಾರಿಗಳ ಜತೆ ಹಣಕಾಸು ವ್ಯವಹಾರ ನಡೆದಿರುವ ಬಗ್ಗೆ ಸುಳಿವು ದೊರೆತಿದೆ. ಅವರಿಗೆ ಸಮನ್ಸ್‌ ನೀಡಿ, ವಿಚಾರಣೆ ನಡೆಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಜಾಮೀನು ಅರ್ಜಿ ತಿರಸ್ಕೃತ

ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಬೆಂಗಳೂರು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ.

ನ್ಯಾಯಾಧೀಶ ವಿಶ್ವನಾಥ್ ಚನ್ನಬಸಪ್ಪ ಗೌಡರ್ ಅವರು ರನ್ಯಾ ಪರ ವಕೀಲರು ಮತ್ತು ಡಿಆರ್‌ಐ ವಕೀಲರ ವಾದಗಳನ್ನು ಆಲಿಸಿದ ನಂತರ ಈ ಆದೇಶವನ್ನು ಹೊರಡಿಸಿದ್ದಾರೆ. ಹಾಗಾಗಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರನ್ಯಾ ಇರಲಿದ್ದಾರೆ.

ಜಾಮೀನು ಅರ್ಜಿ ವಿರೋಧಿಸಿದ ಡಿಆರ್‌ಐ, ಈ ಪ್ರಕರಣವು ‘ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ’ ಮತ್ತು ರನ್ಯಾ ತನಿಖೆಗೆ ಸಹಕರಿಸಿಲ್ಲ ಎಂದು ಮಾಹಿತಿ ನೀಡಿತು.

ಇದೇ ವೇಳೆ, ಪ್ರಕರಣದ ಎರಡನೇ ಆರೋಪಿ ತರುಣ್‌ ರಾಜುಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಜಾಮೀನು ಕೋರಿ ತರುಣ್ ರಾಜು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತರುಣ್ ರಾಜು ಮನವಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್‌ಐ ಪರ ವಕೀಲರು ಕಾಲಾವಕಾಶ ಕೇಳಿರುವುದರಿಂದ ಅರ್ಜಿ ವಿಚಾರಣೆಯನ್ನು ಶನಿವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿ, ಆಕ್ಷೇಪಣೆ ಸಲ್ಲಿಸುವಂತೆ ಡಿಆರ್‌ಐ ಅಧಿಕಾರಿಗಳಿಗೆ
ಸೂಚಿಸಿದೆ.

‘ಇಬ್ಬರು ಸಚಿವರ ಸೆಟ್ಲ್‌ಮೆಂಟ್‌ ಆಗಲಿದೆ’

‘ರನ್ಯಾ ರಾವ್‌ ಪ್ರಕರಣ ಮುಂದಿಟ್ಟುಕೊಂಡು, ಮುಖ್ಯಮಂತ್ರಿ ಆಕಾಂಕ್ಷಿ ಆಗಿರುವವರೊಬ್ಬರ ಸೆಟ್ಲ್‌ಮೆಂಟ್‌ ಆಗುತ್ತದೆ. ಅದು ಯಾವ ರೀತಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಬಿಜೆಪಿ ಶಾಸಕ ಮುನಿರತ್ನ ಮಾರ್ಮಿಕವಾಗಿ ನುಡಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.

‘ರಮೇಶ ಜಾರಕಿಹೊಳಿ ಅವರದ್ದು ಮೊದಲೇ ಸೆಟ್ಲ್‌ಮೆಂಟ್‌ ಆಗಿತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಆದ ನಂತರ ನನ್ನ ಮತ್ತು ಯೋಗೀಶ್ವರ್ ಅವರ ಸೆಟ್ಲ್‌ಮೆಂಟ್‌ ಆಯಿತು. ಈಗ ಯಾರಿಗೆ ಕಾದಿದೆ ನೋಡಬೇಕು. ಯಾವ ರೀತಿ ಸೆಟ್ಲ್‌ಮೆಂಟ್‌ ಮಾಡಿದ್ದಾರೆ ಎನ್ನುವುದನ್ನು ಕಾದು ನೋಡಬೇಕು. ರನ್ಯಾ ಪ್ರಕರಣದಲ್ಲಿ ಇಬ್ಬರು ಸಚಿವರ ಹೆಸರು ಕೇಳಿಬಂದಿದೆ. ಮುಂದೆ ಏನಾಗುತ್ತದೆ ನೋಡೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.