ADVERTISEMENT

ರಾಜಕಾರಣಿಗಳಿಗೆ ಕನ್ನಡದ ಬಗ್ಗೆ ಅಭಿಮಾನ ಇಲ್ಲ: ಭಗವಾನ್

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 10:17 IST
Last Updated 3 ನವೆಂಬರ್ 2019, 10:17 IST
   

ಮೈಸೂರು: ‘ನಮ್ಮ ಬಹುಪಾಲು ರಾಜಕಾರಣಿಗಳಿಗೆ ಕನ್ನಡ ಭಾಷೆಯ ಕುರಿತು ಯಾವ ಅಭಿಮಾನವೂ ಇಲ್ಲ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಇಲ್ಲಿ ನಡೆದ ‘ಕನ್ನಡ ಬದುಕಿನ ಸಬಲೀಕರಣ ಸವಾಲುಗಳು ಮತ್ತು ಸಾಧ್ಯತೆಗಳು’ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ತಮಿಳುನಾಡಿನ ಪ್ರತಿಯೊಬ್ಬ ರಾಜಕಾರಣಿಯೂ ಅವರ ಮಾತೃಭಾಷೆಯ ಬಗ್ಗೆ ಅಪಾರವಾದ ಬದ್ಧತೆ ಹೊಂದಿದ್ದಾರೆ. ಹೀಗಾಗಿಯೇ, ಅಲ್ಲಿ ತಮಿಳು ಬೆಳೆಯುತ್ತಿದೆ. ಇಲ್ಲಿ ಕನ್ನಡ ನೆಲಕಚ್ಚುತ್ತಿದೆ ಎಂದು ಕಿಡಿಕಾರಿದರು.

ADVERTISEMENT

‘ನಾವು ಬೇರೆ ರಾಜ್ಯದಿಂದ ಬಂದವರ ಜತೆ ಅವರ ಭಾಷೆ ಕಲಿತು ಮಾತನಾಡುತ್ತೇವೆ. ಅದೇ ನಮ್ಮ ಭಾಷೆಯನ್ನು ಅವರಿಗೆ ಕಲಿಸಲು ಹೋಗುವುದಿಲ್ಲ. ಹೀಗಾದರೆ, ಭಾಷೆ ಬೆಳೆಯುವುದಿಲ್ಲ’ ಎಂದರು.

‘ಹೊಸ ಜ್ಞಾನವನ್ನು ನಾವು ಇಂಗ್ಲಿಷ್‌ನಿಂದ ಕಲಿಯುತ್ತೇವೆ. ಹಾಗಾದರೆ, ಕನ್ನಡ ಹೇಗೆ ತಾನೆ ಬೆಳೆಯುತ್ತದೆ’ ಎಂದು ಪ್ರಶ್ನಿಸಿದ ಅವರು ‘ಎಲ್ಲ ಜ್ಞಾನಶಾಖೆಗಳ ಜ್ಞಾನವು ಕನ್ನಡದಲ್ಲೇ ಇದ್ದಾಗ, ಕನ್ನಡದಲ್ಲೇ ಕಲಿತಾಗ ಮಾತ್ರ ಕನ್ನಡ ಬೆಳೆಯುತ್ತದೆ’ ಎಂದು ಹೇಳಿದರು.

ಎಲ್ಲ ವಿದ್ಯಾರ್ಥಿಗಳಿಗೂ ವಾರದಲ್ಲಿ ಒಂದು ತರಗತಿಯನ್ನು ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಶ್ರೀಮಂತಿಕೆಯನ್ನು ಕುರಿತು ಹೇಳುವುದಕ್ಕೆಂದೇ ಇಡಬೇಕು. ಆಗ ಇಂದಿನ ತಲೆಮಾರು ಕನ್ನಡದ ಕುರಿತು ಅಭಿಮಾನ ತಳೆಯುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.