ADVERTISEMENT

ಕನ್ನಡಿಗ, ಉದ್ಯೋಗ, ಮೂಲಸೌಕರ್ಯ: ಕನ್ನಡ ಹೋರಾಟಗಾರ vs ಉದ್ಯಮಿಗಳ ವಾಕ್‌ಸಮರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 9:19 IST
Last Updated 23 ಅಕ್ಟೋಬರ್ 2025, 9:19 IST
   

ಬೆಂಗಳೂರು: ಸ್ಥಳೀಯರಿಗೆ ಪ್ರಾಧಾನ್ಯತೆ, ಉದ್ಯೋಗ ಹಕ್ಕು ಮತ್ತು ಬೆಂಗಳೂರಿನ ಹದಗೆಟ್ಟ ಮೂಲಸೌಕರ್ಯ ವಿಷಯವು ಉದ್ಯಮಿಗಳಾದ ಕಿರಣ್ ಮಜೂಂದಾರ್ ಮತ್ತು ಟಿ.ವಿ. ಮೋಹನದಾಸ ಪೈ ಹಾಗೂ ಕನ್ನಡ ಪರ ಹೋರಾಟಗಾರ ಅರುಣ್ ಜಾವಗಲ್‌ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವಾಕ್‌ಸಮರಕ್ಕೆ ವೇದಿಕೆಯಾಗಿದೆ.

ಈ ಚರ್ಚೆಯು ನಗರದ ತ್ವರಿತ ಬೆಳವಣಿಗೆ ಮತ್ತು ಸಾಂಸ್ಕೃತಿಕ ಆದ್ಯತೆ ನಡುವಿನ ಬೃಹತ್‌ ಅಂತರದ ಮೇಲೆ ಇನ್ನಷ್ಟು ಬೆಳಕು ಚೆಲ್ಲಿದೆ.

ಗುಣಮಟ್ಟವಿಲ್ಲದ ರಸ್ತೆ ಹಾಗೂ ಕಳಪೆ ನಿರ್ವಹಣೆ, ಎಲ್ಲೆಂದರಲ್ಲಿ ಚೆಲ್ಲಾಡಿದ ಕಸ ಹಾಗೂ ವಿಲೇವಾರಿ ಸಮಸ್ಯೆಯನ್ನು ಉದ್ಯಮಿಗಳಾದ ಕಿರಣ್ ಮಜೂಂದಾರ್ ಮತ್ತು ಮೋಹನದಾಸ ಪೈ ಅವರು ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಜತೆಗೆ ಈ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆಯೂ ಆಗ್ರಹಿಸಿದ್ದರು.

ADVERTISEMENT

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿತ ಹಲವು ಮುಖಂಡರು ಉದ್ಯಮಿಗಳ ಈ ಪೋಸ್ಟ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಹಿಂದಿನ ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರದಲ್ಲೂ ಇದ್ದ ಸಮಸ್ಯೆಗಳನ್ನು ಮರೆಮಾಚಿ, ಈಗ ಇಂಥ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ತಮ್ಮ ‘ವೈಯಕ್ತಿಕ ಹಿತಾಸಕ್ತಿ’ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಈ ಇಬ್ಬರೂ ಉದ್ಯಮಿಗಳು, ‘ಹಿಂದಿನ ಸರ್ಕಾರದ ಅವಧಿಯಲ್ಲೂ ಮೂಲಸೌಕರ್ಯ ಸಮಸ್ಯೆಯನ್ನು ಬೆಳಕಿಗೆ ತರಲಾಗಿತ್ತು. ತ್ವರಿತವಾಗಿ ರಸ್ತೆಗಳ ದುರಸ್ತಿ ಮತ್ತು ನಗರದ ಶುಚಿತ್ವ ಅಗತ್ಯ ಎಂಬುದಷ್ಟೇ ನಮ್ಮ ಉದ್ದೇಶ’ ಎಂದಿದ್ದಾರೆ.

ಉದ್ಯಮಿಗಳ ಈ ವಾದಕ್ಕೆ ತಿರುಗೇಟು ನೀಡಿರುವ ಕನ್ನಡ ಭಾಷೆ, ಹಕ್ಕು ಮತ್ತು ಉದ್ಯೋಗ ಮೀಸಲಾತಿಗಾಗಿ ಹೋರಾಡುತ್ತಿರುವ ಅರುಣ್ ಜಾವಗಲ್ ಅವರೂ ಸಾಮಾಜಿಕ ಮಾಧ್ಯಮಗಳ ಮೂಲಕ ಉದ್ಯಮಿಗಳಿಗೆ ತಿರುಗೇಟು ನೀಡಿದ್ದಾರೆ. 

‘ಕನ್ನಡ ವಿರೋಧಿಗಳು ಮತ್ತು ದೆಹಲಿ ಏಜೆಂಟರಾದ ಈ ಉದ್ಯಮಿಗಳು, ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಶೇ 50ರಿಂದ 75ರಷ್ಟು ನೌಕರಿ ಮೀಸಲಾತಿ ನೀಡಬೇಕೆಂಬ ರಾಜ್ಯದ ನೀತಿಯನ್ನು ವಿರೋಧಿಸುವ ಮೂಲಕ ಕರ್ನಾಟಕದ ಹಿತವನ್ನು ದುರ್ಬಲಗೊಳಿಸಿದ್ದಾರೆ’ ಎಂದಿದ್ದಾರೆ.

‘ಗುಜರಾತ್‌ ಮೂಲದ (ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು) ಕಿರಣ್ ಶಾ ಹಾಗೂ ಕೊಂಕಣಿ ಭಾಷಿಕರಾದ (ಉಡುಪಿ ಮೂಲದ) ಮೋಹನದಾಸ ಪೈ ಅವರು ತಕರಾರು ಎತ್ತಿದ ನಂತರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ವಿಷಯದಲ್ಲಿ ಕನ್ನಡಿಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮೌನಕ್ಕೆ ಜಾರಿದ್ದಾರೆ. ಉದ್ಯೋಗ ಸೃಜನೆ ಸ್ವಾಗತಾರ್ಹ. ಹಾಗೆಂದ ಮಾತ್ರಕ್ಕೆ ಕನ್ನಡಿಗರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಕ್ಕನ್ನು ತಡಯುವಂತಿಲ್ಲ’ ಎಂದೂ ಅವರು ಎಚ್ಚರಿಸಿದ್ದಾರೆ.

ಜಾವಗಲ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಕಿರಣ್ ಶಾ, ‘ನಾನು ಹೆಮ್ಮೆಯ ಮಣ್ಣಿನ ಮಗಳು’ ಎಂದು ಹೇಳುವ ಮೂಲಕ ಬೆಂಗಳೂರಿನೊಂದಿಗಿನ ತಮ್ಮ ನಂಟನ್ನು ಹಂಚಿಕೊಂಡಿದ್ದಾರೆ.

ಮೋಹನದಾಸ ಪೈ ಕೂಡಾ ಪ್ರತಿಕ್ರಿಯಿಸಿ, ‘ನಾವಿಬ್ಬರೂ ಇದೇ ನಗರದಲ್ಲಿ ಹುಟ್ಟಿದವರು. ನಮ್ಮ ಬದುಕಿನ ಬಹುಪಾಲನ್ನು ಇಲ್ಲಿಯೇ ಕಳೆದಿದ್ದೇವೆ. ಆ ಮೂಲಕ ನಗರದ ಬೆಳವಣಿಗೆಗೆ ನಾವೂ ಸಹಕರಿಸಿದ್ದೇವೆ. ಇಷ್ಟೊಂದು ದ್ವೇಷ ತುಂಬಿರುವ, ವಿವೇಚನಾರಹಿತ ಹೇಳಿಕೆಗಳು ಮಾನಸಿಕ ಆರೋಗ್ಯ ಕಳೆದುಕೊಂಡಿರುವವರಿಂದ ಮಾತ್ರ ನಿರೀಕ್ಷಿಸಲು ಸಾಧ್ಯ. ಇಂಥ ಅನಾರೋಗ್ಯಕರ ಜನರು ನಮ್ಮನ್ನೇ ಹೊರಗಿನವರು ಎನ್ನುವುದಾದರೆ, ಬೆಂಗಳೂರಿಗರು ಯಾರು?’ ಎಂದು ಪ್ರಶ್ನಿಸಿದ್ದಾರೆ. 

ಕರ್ನಾಟಕದ ಅಭಿವೃದ್ಧಿಯ ವಿಚಾರದಲ್ಲಿ ನಡೆಯುತ್ತಿರುವ ವಲಸೆ, ಆರ್ಥಿಕ ಪ್ರಗತಿ ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳ ಕುರಿತ ಚರ್ಚೆ ಇಂದು, ನಿನ್ನೆಯದಲ್ಲ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ನಗರಿ ಎಂಬ ಖ್ಯಾತಿ ಗಳಿಸುತ್ತಿದ್ದಂತೆ ನಗರದ ಬೆಳವಣಿಗೆಯ ಓಗವೂ ಅಷ್ಟೇ ವೇಗವಾಗಿ ನಡೆದಿದೆ. ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ಅಭಿವೃದ್ಧಿ ಕಂಡಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಅಧಿಕ ವೇತನದ ನೌಕರಿಗಳಲ್ಲಿ ಕನ್ನಡೇತರರು ಇರುವುದರಿಂದ ರಾಜ್ಯದ ನೀತಿಗಳಲ್ಲಿ ಅವರ ಪ್ರಭಾವ ಹೆಚ್ಚಾಗಿದೆ ಎಂಬ ಆರೋಪ ಸ್ಥಳೀಯರದ್ದಾಗಿದೆ.

ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಸಿಗುತ್ತಿರುವುದು ಶೇ 1.5 ಮಾತ್ರ

‘ತೆರಿಗೆ ಮತ್ತು ಹೊಣೆಗಾರಿಕೆ ವಿಷಯ ಬಂದಾಗ, ಉದ್ಯಮಿಗಳು ಯಾರ ಹಿತ ಕಾಯುತ್ತಿದ್ದಾರೆ? ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಪ್ರತಿ ₹100ರಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ₹59 ಕೇಂದ್ರ ಸರ್ಕಾರಕ್ಕೆ ಸೇರುತ್ತದೆ. ಕೇವಲ ₹1.50 ಮಾತ್ರ ಕರ್ನಾಟಕ ಸರ್ಕಾರಕ್ಕೆ ಸೇರುತ್ತದೆ. ಇಂಥ ಸಂದರ್ಭದಲ್ಲಿ ಸ್ಥಳೀಯ ಆಡಳಿತಕ್ಕೆ ಇವರ ತೆರಿಗೆಯ ಯಾವ ಪಾಲೂ ಸೇರುವುದಿಲ್ಲ. ತೆರಿಗೆ ವಿಕೇಂದ್ರೀಕರಣದಲ್ಲಿ ಸ್ಥಳೀಯ ಸಂಸ್ಥೆಗಳಿಗೂ ಈ ಪಾಲು ಸಿಗಬೇಕು ಎಂಬುದು ಈ ಕಾಲದ ತುರ್ತು’ ಎಂದು ಅರುಣ್ ಅವರು ಡೆಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ.

‘ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆಯ ಸಿಂಹ ಪಾಲು ಕೇಂದ್ರ ಸರ್ಕಾರವನ್ನು ಸೇರುತ್ತಿರುವಾಗ, ಈ ಉದ್ಯಮಿಗಳು ರಾಜ್ಯ ಸರ್ಕಾರದಿಂದ ಲೆಕ್ಕವನ್ನೇಕೆ ಬಯಸುತ್ತಿವೆ? ಯಾರ ನೀತಿಗಳನ್ನು ಅವರು ವಿರೋಧಿಸುತ್ತಿದ್ದಾರೆ?’ ಎಂದಿದ್ದಾರೆ. ಜತೆಗೆ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ಪ್ರಸ್ತಾವವನ್ನು ಮುಂದಿಟ್ಟು ಹಿನ್ನೆಡೆ ಅನುಭವಿಸಿದ ರಾಜ್ಯ ಸರ್ಕಾರದ ಸ್ಥಿತಿಯನ್ನೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಅನುದಾನಿತ ಉಪನಗರ, ಮೆಟ್ರೊ ಯೋಜನೆ ವಿಳಂಬ ಕೇಳುತ್ತಿಲ್ಲವೇಕೆ?

‘ಬಹುರಾಷ್ಟ್ರೀಯ ಕಂಪನಿಗಳು ಸ್ಥಳೀಯ ಕಾನೂನು ಮತ್ತು ಸರ್ಕಾರದ ಚೌಕಟ್ಟನ್ನು ಒಪ್ಪಿಕೊಂಡಿರುವಾಗ, ಅತಿ ರಾಷ್ಟ್ರೀಯತಾವಾದಿ ಮನಸ್ಥಿತಿಯ ಕೆಲವರು ಕನ್ನಡಿಗರಿಗೆ ಮೀಸಲಾತಿ ವಿರೋಧಿಸುತ್ತಾ ಹಾಗೂ ಅಗ್ಗದ ವಲಸೆ ಕಾರ್ಮಿಕರ ಮೊರೆ ಹೋಗುತ್ತಿರುವುದೇಕೆ‘ ಎಂದು ಪ್ರಶ್ನಿಸಿದ್ದಾರೆ.

‘ಸರ್ಕಾರದ ವಿವಿಧ ಸಮಿತಿಗಳಲ್ಲಿರುವ ಕೈಗಾರಿಕೆಗಳ ಮುಖಂಡರು ರಾಜ್ಯದ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಜತೆಗೆ ಬೆಂಗಳೂರು ರಾಜಕೀಯವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದಾರೆ. ಒಂದೊಮ್ಮೆ ಅಷ್ಟೊಂದು ಕಾಳಜಿ ಇದ್ದರೆ, ಕೇಂದ್ರ ಸರ್ಕಾರ ಅನುದಾನಿತ ಉಪನಗರ ರೈಲು ಯೋಜನೆ ಏಕೆ ವಿಳಂಬವಾಗುತ್ತಿದೆ? ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊ ಯೋಜನೆಗೆ ಏಕಿಷ್ಟು ತಡ?’ ಎಂಬ ಪ್ರಶ್ನೆಗಳನ್ನೇಕೆ ಕೇಳುತ್ತಿಲ್ಲ’ ಎಂದಿದ್ದಾರೆ.

‘ಸ್ಥಳೀಯರಿಗೆ ಉದ್ಯೋಗ ನೀಡುವುದರಿಂದ ಇಲ್ಲಿನ ಆರ್ಥಿಕತೆ ಉತ್ತಮವಾಗುತ್ತದೆ. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವು ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸರಿದೂಗಿಸಬಹುದು. ಇದರಿಂದ ಮೂಲಸೌಕರ್ಯವೂ ಹೆಚ್ಚಳವಾಗಲಿದೆ. ಜತೆಗೆ ಅಗ್ಗದ ವಲಸಿಗರು ರಾಜ್ಯಕ್ಕೆ ಬರುವ ಸಂಖ್ಯೆಯೂ ಇಳಿಮುಖವಾಗಲಿದೆ’ ಎಂದು ಅರುಣ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.