ADVERTISEMENT

ಮಕ್ಕಳ ದಾಖಲಾತಿ ಕೊರತೆ: 603 ಕನ್ನಡ ಶಾಲೆಗಳ ಮೇಲೆ ತೂಗುಗತ್ತಿ

ಶಾಲೆ ಮುಚ್ಚದೆ ಇದ್ದರೂ, ಅವಸಾನದ ಹಾದಿ ಗೋಚರ

ಎಂ.ಜಿ.ಬಾಲಕೃಷ್ಣ
Published 31 ಅಕ್ಟೋಬರ್ 2019, 19:41 IST
Last Updated 31 ಅಕ್ಟೋಬರ್ 2019, 19:41 IST
ಸರ್ಕಾರಿ ಶಾಲೆ–ಸಾಂದರ್ಭಿಕ ಚಿತ್ರ
ಸರ್ಕಾರಿ ಶಾಲೆ–ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಕ್ಕಳ ಕೊರತೆಯಿಂದಾಗಿ 603 ಕನ್ನಡ ಶಾಲೆಗಳ ಮೇಲೆ ತೂಗುಗತ್ತಿ ನೇತಾಡುತ್ತಿದ್ದು, ಮತ್ತೆ ಈ ಶಾಲೆಗಳು ಆರಂಭಗೊಳ್ಳುವುದು ಸಂಶಯ ಎಂದೇ ಹೇಳಲಾಗುತ್ತಿದೆ.

ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಹೆಮ್ಮೆ ಪಡುತ್ತಿರುವಾಗಲೇಮಕ್ಕಳ ಕೊರತೆಯಿಂದ ಕೃಷವಾಗಿರುವ ಶಾಲೆಗಳ ವಾಸ್ತವ ಚಿತ್ರಣವೂ ಲಭಿಸಿದ್ದು, ಕನ್ನಡ ಶಾಲೆಗಳು ದಿನಕಳೆದಂತೆ ಕಳೆಗುಂದುತ್ತಿವೆ. 2018–19ನೇ ಸಾಲಿನಲ್ಲಿ 433 ಸರ್ಕಾರಿ ಕಿರಿಯ ಪ್ರಾಥಮಿಕ ಮತ್ತು 71 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ. ಇದೇ ಅವಧಿಯಲ್ಲಿ20 ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಹಾಗೂ 79 ಹಿರಿಯ ಪ್ರಾಥಮಿಕ ಶಾಲೆಗ
ಳಿಗೂ ಹೊಸದಾಗಿ ಮಕ್ಕಳು ಬಂದೇ ಇಲ್ಲ.ಎರಡೂ ವಿಭಾಗಗಳನ್ನು ಸೇರಿಸಿದರೆ ಒಟ್ಟು 603 ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಆಗಿಲ್ಲ!

2019–20ನೇ ಸಾಲಿನ ಪ್ರವೇಶಾತಿ ಮಾಹಿತಿಯನ್ನು ಸಂಗ್ರಹಿಸುವ ಕೆಲಸದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಲ್ಲೀನವಾಗಿದ್ದು, ಇನ್ನೊಂದು ವಾರದೊಳಗೆ ಮಾಹಿತಿ ಸಂಗ್ರಹ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ
ಇದೆ.

ADVERTISEMENT

‘ಕಳೆದ ವರ್ಷ ಶೂನ್ಯ ಪ್ರವೇಶಾತಿ ಆಗಿರುವ ಕಡೆಗಳಲ್ಲಿ ಈ ವರ್ಷವೂ ಶಾಲೆಗೆ ಮಕ್ಕಳು ಬಂದೇ ಇಲ್ಲ ಎಂದು ಹೇಳಲಾಗದು. ಒಂದು ಅಂದಾಜಿನಂತೆ ಈ ಬಾರಿಯೂ ಸುಮಾರು 500 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿರುವ ಸಾಧ್ಯತೆ ಇದೆ’ ಎಂದು ಇಲಾಖೆಯ ಮಾಹಿತಿ ಸಂಗ್ರಹ ವಿಭಾಗದ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆ ಮುಚ್ಚುವುದಿಲ್ಲ: ‘ಮಕ್ಕಳು ಪ್ರವೇಶಾತಿ ಪಡೆದಿಲ್ಲ ಎಂದರೆ ಆ ಶಾಲೆ ಮುಚ್ಚುವುದಿಲ್ಲ. ಇತರ ತರಗತಿಗಳು ನಡೆಯುತ್ತಿರುತ್ತವೆ. ಶಾಲೆಯ ಹೆಚ್ಚುವರಿ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗುತ್ತದೆ. ಮಕ್ಕಳೇ ಇಲ್ಲದ ಶಾಲೆ ಇದ್ದರೂ, ಮುಂದಿನ ವರ್ಷ
ಬಬ್ಬ ವಿದ್ಯಾರ್ಥಿ ಪ್ರವೇಶ ಪಡೆದರೂ ಆ ಶಾಲೆ ಕಾರ್ಯಾರಂಭ ಮಾಡಲಿದೆ’ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು
ಹೇಳಿದರು.

ಮಕ್ಕಳು ಪ್ರವೇಶ ಪಡೆಯದ ಶಾಲೆಗಳು

ಶಾಲಾ ಆಡಳಿತ;ಒಟ್ಟು ಶಾಲೆಗಳು;ಕಿ.ಪ್ರಾ.ಶಾಲೆ;ಒಟ್ಟು ಶಾಲೆಗಳು;ಹಿ.ಪ್ರಾ.ಶಾಲೆ

ಸರ್ಕಾರಿ;21,442;433;22,554;71

ಬುಡಕಟ್ಟು ಕಲ್ಯಾಣ;111;2;755;3

ಖಾಸಗಿ ಅನುದಾನಿತ;240;20;2,874;79

ಖಾಸಗಿ ಅನುದಾನರಹಿತ;4,139;262;10,780;229

ಒಟ್ಟು;25,970;723;37,471;390

ನೆಗಡಿ ಎಂದು ಮೂಗನ್ನೇ ಕತ್ತರಿಸುವುದಿಲ್ಲ. ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಿ, ಖಾಸಗಿಗೆ ಕಡಿವಾಣ ಹಾಕಿ

-ಪ್ರೊ. ಎಸ್‌. ಜಿ. ಸಿದ್ದರಾಮಯ್ಯ ಲೇಖಕ, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.