ADVERTISEMENT

ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಸಾರಥ್ಯದಲ್ಲಿ ‘ಕೈ’ ಬಲವರ್ಧನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 1:23 IST
Last Updated 5 ಜೂನ್ 2024, 1:23 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಸತತ ಎರಡು ಲೋಕಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ಸೋತು, ಅಧಿಕೃತ ವಿರೋಧ ಪಕ್ಷದ ಸ್ಥಾನ ಪಡೆಯುವುದಕ್ಕೂ ಅಸಾಧ್ಯವಾದ ಸ್ಥಿತಿ ತಲುಪಿದ್ದ ಕಾಂಗ್ರೆಸ್‌ ಪಕ್ಷದ ಪುನರುಜ್ಜೀವನದ ಸಾರಥ್ಯ ವಹಿಸಿದವರು ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ.

ಗಾಂಧಿ ಕುಟುಂಬದ ಹೊರಗಿನವರಾಗಿ ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಪಕ್ಷದ ಬಲವರ್ಧನೆಗೆ ನಾಯಕತ್ವ ನೀಡಿದ ಶ್ರೇಯ ಖರ್ಗೆ ಅವರಿಗೆ ಸಲ್ಲುತ್ತದೆ. ಸುದೀರ್ಘ ಹತ್ತು ವರ್ಷ ದೇಶದ ಆಡಳಿತ ನಡೆಸಿದ್ದ ಯುಪಿಎ ಮೈತ್ರಿಕೂಟದ ನಾಯಕತ್ವ ವಹಿಸಿದ್ದ ಕಾಂಗ್ರೆಸ್‌ನ ಸಂಸತ್‌ ಸದಸ್ಯರ ಸಂಖ್ಯೆ, 2014ರ ಚುನಾವಣೆಯಲ್ಲಿ 44ಕ್ಕೆ ಕುಸಿದಿತ್ತು. 2019ರ ಚುನಾವಣೆಯಲ್ಲೂ ಕಾಂಗ್ರೆಸ್‌ ಸಾಧನೆ 52 ಸ್ಥಾನಕ್ಕಷ್ಟೇ ಸೀಮಿತವಾಗಿತ್ತು.

2017ರಿಂದ 2019ರವರೆಗೆ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ 2019ರ ಚುನಾವಣೆಯ ಸೋಲಿನ ಬಳಿಕ ರಾಜೀನಾಮೆ ನೀಡಿದ್ದರು. ಮೂರು ವರ್ಷಗಳ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಎಐಸಿಸಿ ಅಧ್ಯಕ್ಷರಾಗಿ, ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿಯೂ ಮಹತ್ತರ ಪಾತ್ರ ವಹಿಸಿದ್ದರು.

ADVERTISEMENT

ಸೀತಾರಾಂ ಕೇಸರಿ ಕೂಡ ಗಾಂಧಿ ಕುಟುಂಬದ ಹೊರಗಿನವರಾಗಿ ಎಐಸಿಸಿ ಅಧ್ಯಕ್ಷರಾಗಿ 1996ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದ್ದರು. ಆಗ ಕಾಂಗ್ರೆಸ್‌ 140 ಸ್ಥಾನ ಗಳಿಸಿತ್ತು. ಸ್ವತಂತ್ರವಾಗಿ ಸರ್ಕಾರ ರಚಿಸಲಾಗದು ಎಂಬ ಕಾರಣದಿಂದ ಎಚ್‌.ಡಿ. ದೇವೇಗೌಡ ನೇತೃತ್ವದ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರು. ಈಗಲೂ ಅದೇ ಪರಿಸ್ಥಿತಿ ಉದ್ಭವಿಸಿದ್ದು, ಕಾಂಗ್ರೆಸ್‌ ಸ್ವತಂತ್ರವಾಗಿ ಸರ್ಕಾರ ರಚಿಸಲಾಗದ ಸ್ಥಿತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.