ಕಲ್ಲು ಗಣಿಗಾರಿಕೆಯಿಂದ ಬರಿದಾಗುತ್ತಿರುವ ಚಿತ್ರದುರ್ಗದ ಕರಡಿ ಬೆಟ್ಟ ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕಂಡಿದ್ದು ಹೀಗೆ
ಪ್ರಜಾವಾಣಿ ಚಿತ್ರ: ಚಂದ್ರಪ್ಪ ವಿ
ಚಿತ್ರದುರ್ಗ: ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಕೆಲವೇ ಮೀಟರ್ ದೂರದಲ್ಲಿರುವ, ಕರಡಿಗಳ ಆವಾಸಸ್ಥಾನವಾಗಿದ್ದ ‘ಕರಡಿಬೆಟ್ಟ’ ಈಗ ಕಲ್ಲು ಗಣಿಗಾರಿಕೆಯಿಂದ ಬರಿದಾಗುವತ್ತ ಸಾಗಿದೆ. ಗಣಿ ಸ್ಫೋಟದಿಂದ ಕರಡಿ ಹಾಗೂ ಮತ್ತಿತರ ಪ್ರಾಣಿ ಸಂಕುಲದ ಜೀವಕ್ಕೆ ಕಂಟಕ ಎದುರಾಗಿದೆ.
ಗುಡ್ಡದಲ್ಲಿ ವಾಸವಿದ್ದ ಕರಡಿಗಳು ಕೆಲವು ವರ್ಷಗಳಿಂದ ನೆಲೆಯಿಲ್ಲದಂತಾಗಿ ಅತ್ತಿತ್ತ ಓಡಾಡುತ್ತ ಹೆದ್ದಾರಿಯ ವಾಹನಗಳ ಚಕ್ರಕ್ಕೆ ಸಿಲುಕಿ ಸಾಯುತ್ತಿವೆ. ಅನತಿ ದೂರದಲ್ಲಿರುವ ಜನವಸತಿ ಪ್ರದೇಶದಲ್ಲಿ ಜನತೆಗೂ ತೀವ್ರ ತೊಂದರೆ ಎದುರಾಗಿದೆ. ಸಮೀಪದಲ್ಲೇ ಮಡಿವಾಳ ಮಾಚಿದೇವ, ಭೋವಿ, ಮೇದಾರ ಕೇತೇಶ್ವರ, ಮಾದಾರ ಚನ್ನಯ್ಯ, ಛಲವಾದಿ ಗುರುಪೀಠಗಳಿದ್ದು ಮಠಾಧೀಶರು, ಮಠದ ಶಾಲಾ ವಿದ್ಯಾರ್ಥಿಗಳು ಸ್ಫೋಟದಿಂದ ಭೀತಿಗೊಳಗಾಗುತ್ತಿದ್ದಾರೆ.
ಈ ಬೆಟ್ಟದ ಕೂಗಳತೆ ದೂರದಲ್ಲಿ ಮುರುಘಾಮಠದ ‘ಯೋಗವನ ಬೆಟ್ಟ’ವಿದ್ದು ಅಲ್ಲಿ ಆಯುರ್ವೇದ, ಪ್ರಕೃತಿ ಚಿಕಿತ್ಸಾ ಸೌಲಭ್ಯವಿದೆ. ಚಿಕಿತ್ಸಾಲಯದ ಸುತ್ತಮುತ್ತ ನೂರಾರು ಜಾತಿಯ ವನಮೂಲಿಕೆಗಳಿವೆ. ಗಣಿ ಸ್ಫೋಟದಿಂದಾಗಿ ವನಮೂಲಿಕೆಗಳ ಬೆಳವಣಿಗೆಗೂ ಹಾನಿಯಾಗುತ್ತಿದೆ.
‘ಸ್ಫೋಟದ ತೀವ್ರತೆಯಿಂದಾಗಿ ಯೋಗವನ ಬೆಟ್ಟದಲ್ಲಿ 2 ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಮುಸ್ಸಂಜೆಯಲ್ಲಿ ನಡೆಯುವ ಸ್ಫೋಟದ ಶಬ್ದದಿಂದ ಎದೆ ನಡುಗುತ್ತದೆ. ಅಕ್ಕಪಕ್ಕದ ಹಳ್ಳಿಗಳ ಜನರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದರು. ಕೆಲ ದಿವಸ ಗಣಿಗಾರಿಕೆ ನಿಂತಿತ್ತು. ಆದರೆ ಈಗ ಮತ್ತೆ ಗಣಿಗಾರಿಕೆ ಆರಂಭವಾಗಿದ್ದು ಬೆಟ್ಟವೇ ಖಾಲಿಯಾಗುತ್ತಿದೆ’ ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಕ್ಕೆ ಸಿಲುಕಿ ಸತ್ತಿರುವ ಕರಡಿ
ದಾವಣಗೆರೆಯಿಂದ ಬೆಂಗಳೂರಿನತ್ತ ಹೊರಟಾಗ ಕತ್ತರಿಸಿದ ಕೇಕ್‌ನಂತೆ ತೋಚುವ ಬೆಟ್ಟ ಕಂಡು ಜನರು ಮರುಗುತ್ತಾರೆ. ಕೆಲವರು ಬೆಟ್ಟದ ಚಿತ್ರ ತೆಗೆದು, ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಹಲವು ಯೂಟ್ಯೂಬರ್‌ಗಳು ಬೆಟ್ಟದ ಸ್ಥಿತಿಯ ಬಗ್ಗೆ ವಿಡಿಯೊ ಪ್ರಕಟಿಸಿದ್ದಾರೆ.
‘ಬೆಟ್ಟ ಅರ್ಧ ಸೀಳಿದ ಸ್ಥಿತಿ ನೋಡಿದರೆ ಬೇಸರವಾಗುತ್ತದೆ. ಚಿತ್ರದುರ್ಗವು ಬೆಟ್ಟ, ಗುಡ್ಡಗಳ ನಾಡು. ಎಲ್ಲ ಬೆಟ್ಟಗಳೂ ಹೀಗಾದರೆ ದುರ್ಗಕ್ಕೆ ಅರ್ಥವೂ ಇರುವುದಿಲ್ಲ’ ಎಂದು ಪ್ರವಾಸಿಗರು ಹೇಳಿದರು.
ಬೆಟ್ಟದ ಸಮೀಪದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಸ್ಮಾರಕ (ಪುಣ್ಯಭೂಮಿ) ಇದೆ. ಅಲ್ಲಿರುವ ಪ್ರತಿಮೆ, ಕಟ್ಟಡಗಳೂ ಸ್ಫೋಟದ ತೀವ್ರತೆಯಿಂದ ಬಿರುಕಾಗುತ್ತಿವೆ. ಅಲ್ಲಿಯೇ ಅಲೆಮಾರಿಗಳ ಗುಡಿಸಲುಗಳಿದ್ದು, ಬಡಜನರು ಸ್ಫೋಟದ ವೇಳೆಯಲ್ಲಿ ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ.
‘ರಾಸಾಯನಿಕ ಬಳಸಿ ಸ್ಫೋಟ ನಡೆಸುತ್ತಿರುವ ಕಾರಣ ಅಂತರ್ಜಲಕ್ಕೆ ಹಾನಿಯಾಗುತ್ತಿದೆ. ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ. ಸಮೀಪ ದಲ್ಲಿ ಜೋಗಿಮಟ್ಟಿ ವನ್ಯಧಾಮ ಇರುವ ಕಾರಣ ಇಲ್ಲಿ ಕಲ್ಲು ಗಣಿ ನಡೆಸಲೇಬಾರದು’ ಎಂದು ಜಲತಜ್ಞ ದೇವರಾಜರೆಡ್ಡಿ ತಿಳಿಸಿದರು.
ಗಣಿ ಮಾಲೀಕರು ರಾಜಧನ ಕಟ್ಟುತ್ತಿದ್ದು, ಸರ್ಕಾರಕ್ಕೆ ಆದಾಯ ಬರುತ್ತಿದೆ. ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರುಗಳು ಬಂದರೆ ಪರಿಶೀಲನೆ ನಡೆಸಲಾಗುವುದು ಎಂ.ಜೆ.ಮಹೇಶ್, ಉಪ ನಿರ್ದೇಶಕ ಗಣಿ ಮತ್ತು ಭೂವಿಜ್ಞಾನ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.