ADVERTISEMENT

ಆ ವೈದ್ಯೆ ಅಂದು ಕ್ಲಿನಿಕ್ಕಿಗೆ ಬಂದಿದ್ದರೆ ಕಾರ್ನಾಡರೇ ಇರುತ್ತಿರಲಿಲ್ಲ!

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 13:29 IST
Last Updated 10 ಜೂನ್ 2019, 13:29 IST
   

ಸಾಹಿತಿ ಗಿರೀಶ ಕಾರ್ನಾಡರು ತಮ್ಮ ‘ಆಡಾಡತ ಆಯುಷ್ಯ’ ಆತ್ಮ– ಕತೆಗಳನ್ನು ವೈದ್ಯೆ ಡಾ.ಮಧುಮಾಲತಿ ಗುಣೆ ಅವರಿಗೆ ಅರ್ಪಿಸಿದ್ದಾರೆ. ಅದರ ಹಿಂದೆ ಕುತೂಹಲದ ಕಥೆಯೊಂದಿದೆ. ಪುಸ್ತಕದ ಅರ್ಪಣೆಯ ಭಾಗ ಇಲ್ಲಿದೆ.

ಧಾರವಾಡ, 1973

ಆಯಿ (ನನ್ನ ತಾಯಿ), ಬಾಪ್ಪಾ (ತಂದೆ) ಹಾಗೂ ನಾನು ಊಟ ಮಾಡುತ್ತಿದ್ದೆವು. ನನ್ನ ಚಿತ್ರ ‘ವಂಶವೃಕ್ಷ’ ಆಗಲೇ ತುಂಬ ಯಶಸ್ವಿಯಾಗಿ ಓಡಿ ಹಲವಾರು ಬಹುಮಾನಗಳನ್ನು ಗಳಿಸಿತ್ತು. ‘ಕಾಡು’ ಚಿತ್ರ ಮುಗಿಯುತ್ತಾ ಬಂದಿತ್ತು. ನಾನು ಪುಣೆಯ ಫಿಲ್ಮ್‌ ಹಾಗೂ ಟೆಲಿವಿಜನ್‌ ಸಂಸ್ಥಾನಕ್ಕೆ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಒಟ್ಟು ವಾತಾವರಣ ಆತ್ಮಭಿನಂದನೆಯಿಂದ ಬೀಗುತ್ತಿತ್ತು.

ADVERTISEMENT

ಒಮ್ಮೆಲೆ ಆಯಿ ಬಾಪ್ಪಾನತ್ತ ನೋಡಿ, ‘ಮತ್ತು ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!’ ಎಂದಳು.

ಈ ವಿಧಾನ ಅನಪೇಕ್ಷಿತವಾಗಿ ಬಂದರೂ ಬಾಪ್ಪಾಗೆ ತಕ್ಷಣ ಅದರ ಮೊನೆ ಚುಚ್ಚಿತು. ಮುಖ ಕೆಂಪೇರಿ, ‘ಅಂ... ಹೂಂ... ಅದೆಲ್ಲ ನಿನ್ನ idea- ನನ್ನದಲ್ಲ. ಈಗ ಯಾಕೆ ಅದೆಲ್ಲ?’ ಎಂದು ಊಟದ ತಟ್ಟೆಯಲ್ಲಿ ಮುಖ ಮರೆಮಾಡಿದ.

ನನ್ನ ಕುತೂಹಲ ಕೆರಳಿತು. ಕೆದಕಿ ಕೇಳಿದೆ. ಆಗ ಆಯಿ ಹೇಳಿದಳು.

‘ನೀನು ಹೊಟ್ಟೆಯಲ್ಲಿದ್ದಾಗ, ನನಗೆ ಇನ್ನು ಮಕ್ಕಳು ಸಾಕು ಅನಿಸಿತು. ಮೂರು ಮಕ್ಕಳಿದ್ದಾರಲ್ಲ. ಇನ್ನೂ ಯಾಕೆ? ಎಂದೆ. ಅದಕ್ಕಾಗಿ ಪುಣೆಯಲ್ಲಿಯ ಡಾ.ಮಧುಮಾಲತಿ ಗುಣೆ ಎಂಬ ಡಾಕ್ಟರ ಕ್ಲಿನಿಕ್ಕಿಗೆ ಹೋದೆವು’

‘ಮುಂದೆ?’

‘ಆಕೆ ಬರತೇನೆ ಎಂದವಳು ಬರಲೇ ಇಲ್ಲ. ಸುಮಾರು ಒಂದು ತಾಸು ಹಾದಿ ಕಾಯ್ದು ಬೇಸತ್ತು ಬಂದು ಬಿಟ್ಟೆವು’

‘ಆಮೇಲೆ?’

‘ಆಮೇಲೇನು? ಹೊರಳಿ ಆ ಕಡೆಗೆ ಹೋಗಲೇ ಇಲ್ಲ’

ನಾನು ಗರ ಬಡಿದವನಂತಾದೆ. ನನಗಾಗ ಮೂವತ್ತೈದು. ಆದರೂ, ನಾನಿಲ್ಲದೆ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ನಾನು ಮಂಕಾಗಿ ಕೂತೆ. ನಾನಿಲ್ಲದ್ದು ಹೇಗಿರತಿತ್ತು? ಕೆಲಹೊತ್ತು ಎಲ್ಲಿ ಇದ್ದೇನೆ ಎಂಬುದೆ ಎಚ್ಚರವಿಲ್ಲದೆ ಈ ಇರವಳಿಯನ್ನೇ ದಿಟ್ಟಿಸುತ್ತ ಕೂತೆ. ಮರುಗಳಿಗೆಗೆ ಇನ್ನೊಂದು ವಿಚಾರ ಹೊಳೆದು ದಿಗ್ಭ್ರಾಂತನಾಗಿ ಕೇಳಿದೆ.

‘ಹಾಗಾದರೆ ತಂಗಿ– ಲೀಲಾ– ಆಕೆಯನ್ನು ಹೇಗೆ–?’

ಆಯಿ ಅರೆನಾಚುತ್ತಾ, ‘ಅಯ್ಯೋ ಆ ವರೆಗೆ ನಾವು ಆ ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆವು’ ಎಂದು ಖೊಳ್ಳನೆ ನಕ್ಕಳು.

ಬಾಪ್ಪಾ ತಾಟಿನೊಳಗಿಂದ ದೃಷ್ಟಿಯನ್ನೇ ಎತ್ತಿರಲಿಲ್ಲ.

ಅಂದು ಆ ಡಾಕ್ಟರರು ಕೊಟ್ಟ ಮಾತಿಗೆ ಸರಿಯಾಗಿ ಕ್ಲಿನಿಕ್ಕಿಗೆ ಬಂದಿದ್ದರೆ ಈ ಆತ್ಮ– ಕತೆಗಳು ಮಾತ್ರವಲ್ಲ ಇದರ ಉತ್ತರ ಪುರುಷನಾದ ನಾನೇ ಇಲ್ಲಿರುತ್ತಿರಲಿಲ್ಲ. ಆದ್ದರಿಂದ ಇವೆಲ್ಲವುಗಳ ಅಸ್ತಿತ್ವಕ್ಕೆ ಕಾರಣೀಭೂತಳಾದ ಆ ಡಾ.ಮಧುಮಾಲತಿ ಗುಣೆಯ ನೆನಪಿಗೆ ಈ ಆತ್ಮ– ಕತೆಗಳನ್ನು ಅರ್ಪಿಸುತ್ತಿದ್ದೇನೆ.

–ಗಿರೀಶ ಕಾರ್ನಾಡ

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.