ADVERTISEMENT

ಚಿರತೆ ಓಡಿಸಲು ಏನು ಮಾಡಬೇಕು? ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 22:00 IST
Last Updated 22 ಡಿಸೆಂಬರ್ 2022, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ರಾಜ್ಯದಲ್ಲಿ ಚಿರತೆಗಳ ಹಾವಳಿ ತಡೆಗೆ ಏನು ಮಾಡಬೇಕು?

ಕೆಲವು ಶಾಸಕರ ಪ್ರಕಾರ ಕಬ್ಬಿನ ಗದ್ದೆಗಳಲ್ಲಿ ಬೆಳೆದು ನಿಂತ ಬೆಳೆಯನ್ನು ಕಟಾವು ಮಾಡಬೇಕು. ಇದರಿಂದ ಚಿರತೆಗಳು ಓಡಿ ಹೋಗುತ್ತವೆ. ಒಬ್ಬ ಶಾಸಕರ ಪ್ರಕಾರ ಚಿರತೆ ಧಾಮವನ್ನು ಮಾಡಿ ಎಲ್ಲ ಚಿರತೆಗಳನ್ನು ಅಲ್ಲಿ ಬಿಟ್ಟು ಬಿಡುವುದೇ ಒಳ್ಳೆಯದು!

ಇಂತಹ ಸ್ವಾರಸ್ಯಕರ ಸಲಹೆಗಳು ಕೇಳಿ ಬಂದಿದ್ದು ವಿಧಾನಸಭೆಯ ಶೂನ್ಯವೇಳೆಯಲ್ಲಿ. ಜೆಡಿಎಸ್‌ ಶಾಸಕ ಅಶ್ವಿನ್‌ಕುಮಾರ್‌ ಅವರು ಟೀ.ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿರತೆ ಹಾವಳಿಯನ್ನು ಗಮನ ಸೆಳೆದಾಗ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

ADVERTISEMENT

‘ಇತ್ತೀಚೆಗೆ ದೇವಸ್ಥಾನಕ್ಕೆ ಹೋದ ಹುಡುಗನೊಬ್ಬನ್ನು ಚಿರತೆ ಹೊತ್ತು ಕಾಡಿಗೆ ಒಯ್ದಿತು. ಅದಕ್ಕೂ ಹಿಂದೆ ಯುವತಿಯೊಬ್ಬಳ ಮೇಲೆ ದಾಳಿ ನಡೆಸಿತ್ತು. ಒಟ್ಟಿನಲ್ಲಿ ಭಯಭೀತಿ ವಾತಾವರಣ ಸೃಷ್ಟಿಯಾಗಿದೆ ಎಂದು ಅಶ್ವಿನ್‌ಕುಮಾರ್ ಹೇಳಿದರು.

ನಮ್ಮಲ್ಲಿ ಕಾಡಿನ ಪ್ರಮಾಣ ಕಡಿಮೆ ಇದೆ. 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಮತ್ತು 2,500 ಹೆಕ್ಟೇರ್‌ನಲ್ಲಿ ಕಬ್ಬು ಇದೆ. ಕಬ್ಬು ಕಟಾವಿಗೆ ಬಂದಿದೆ. ಕಬ್ಬಿನ ಗದ್ದೆಗೆ ಹೋಗಲು ಹೆದರುತ್ತಿದ್ದಾರೆ. ಈ ಭಾಗದಲ್ಲಿ 10 ರಿಂದ 15 ಚಿರತೆಗಳು, ಅವುಗಳ ಮರಿಗಳು ಇವೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದರು.

ಮಾಗಡಿ ಕ್ಷೇತ್ರದ ಜೆಡಿಎಸ್‌ನ ಶಾಸಕ ಮಂಜುನಾಥ್ ಮಾತನಾಡಿ, ನಮ್ಮ ಕ್ಷೇತ್ರದಲ್ಲೂ ಚಿರತೆ ಹಾವಳಿ ಜಾಸ್ತಿ ಇದೆ. ಚಿರತೆ ಹಿಡಿಯಲು 5 ರಿಂದ 6 ಬೋನುಗಳಿವೆ. ಬೋನುಗಳ ಸಂಖ್ಯೆಯನ್ನು 15 ರಿಂದ 20ಕ್ಕೆ ಹೆಚ್ಚಿಸಬೇಕು. ಚಿರತೆ ಸಂತತಿಯೂ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ಇಲ್ಲಿ ಹಿಡಿದು ಎಲ್ಲಿಗೆ ಬಿಡುತ್ತಾರೆ ಎಂಬುದು ಗೊತ್ತಿಲ್ಲ ಎಂದರು.

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಈ ಕ್ಷೇತ್ರದಲ್ಲಿ ಹಿಡಿದದ್ದು ಪಕ್ಕದ ಕ್ಷೇತ್ರಕ್ಕೆ ಒಯ್ದು ಬಿಡುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ‘ಈ ಸಮಸ್ಯೆಗೆ ನಿಮ್ಮ ಬಳಿ ಏನಾದರೂ ಪರಿಹಾರ ಕ್ರಮ ಇದ್ದರೆ ಹೇಳಿ’ ಎಂದು ಕಾಗೇರಿ ಹೇಳಿ
ದಾಗ, ಕಾಂಗ್ರೆಸ್‌ನ ತುಕಾರಾಂ ಅವರು, ‘1985ರಲ್ಲಿ ನಮ್ಮ ಊರಲ್ಲಿ ಕರಡಿ ಹಾವಳಿ ಮಿತಿ ಮೀರಿದಾಗ 3 ಸಾವಿರ ಎಕರೆ ಪ್ರದೇಶದಲ್ಲಿ ಕರಡಿಧಾಮ ಮಾಡಿದರು. ಆ ಮೇಲೆ ಕರಡಿ ಹಾವಳಿ ಕಡಿಮೆ ಆಯಿತು. ಅದೇ ರೀತಿಯಲ್ಲಿ ಚಿರತೆ ಧಾಮ ಮಾಡುವುದು ಸೂಕ್ತ’ ಎಂದು ಸಲಹೆ ಹೇಳಿದರು.

ಆನೆ, ಹುಲಿ, ಚಿರತೆಗಳಿಗೆ ಮನವಿ ಕೊಡೋಣ’

ಕಾಂಗ್ರೆಸ್‌ನ ರಮೇಶ್‌ಕುಮಾರ್‌ ಮಾತನಾಡಿ, ‘ಈ ಅರಣ್ಯ ಅಧಿಕಾರಿಗಳಿಗೆ ಹರ್ಬಿವೋರಸ್‌, ಕಾರ್ನಿವೋರಸ್‌, ಓಮ್ನಿವೋರಸ್‌ ಬಗ್ಗೆ ಗೊತ್ತೆ? ಅರಣ್ಯಗಳ ಬಗ್ಗೆ ಗೊತ್ತೆ’ ಎಂದು ಪ್ರಶ್ನಿಸಿದರು. ಆ ಬಳಿಕ ತಮ್ಮ ಮಾತಿನ ಧಾಟಿಯಲ್ಲಿ ಹಾಸ್ಯ ಬೆರೆಸಿದ ಅವರು, ‘ಆನೆ, ಹುಲಿ, ಚಿರತೆ, ಕೋಣ, ನರಿ, ಮಂಗಗಳ ಬಳಿಗೆ ನಾವು ಸರ್ವಪಕ್ಷಗಳ ನಿಯೋಗದಲ್ಲಿ ಹೋಗಿ ನೀವು ಮಾಡಲು ಆಗದ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಅವುಗಳಿಗೆ ಮನವಿ ಕೊಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.