ADVERTISEMENT

ಸದನದಲ್ಲಿ ಮಾತು ಗಮ್ಮತ್ತು | ನೀವು ಏನು ಸಾಕ್ಷಿ ಗುಡ್ಡೆ ಇಡುತ್ತೀರಾ?: ಅಶೋಕ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 14:43 IST
Last Updated 20 ಆಗಸ್ಟ್ 2025, 14:43 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ‘ಡಿ.ಕೆ. ಶಿವಕುಮಾರ್ ಯಾವಾಗಲೂ ಸಾಕ್ಷಿ ಗುಡ್ಡೆ ಬಿಟ್ಟು ಹೋಗಬೇಕು ಅಂತಾ ಹೇಳುತ್ತಾರೆ. ಹಾಗೇ ಸ್ಪೀಕರ್ ಅವ್ರೇ, ನೀವು ಏನು ಸಾಕ್ಷಿ ಗುಡ್ಡೆ ಇಡುತ್ತೀರಾ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಪ್ರಶ್ನಿಸಿದರು.

ಒಳ ಮೀಸಲಾತಿ ಕುರಿತು ಮುಖ್ಯಮಂತ್ರಿ ಸದನದಲ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ಅವಕಾಶ ನೀಡದ ಸಭಾಧ್ಯಕ್ಷರನ್ನು ಕೆಣಕಿದ ಅಶೋಕ, ‘ನೀವು ಕಾಂಗ್ರೆಸ್ ಪರವಾಗಿ ಇರದೇ, ಮಾತನಾಡಲು ಅವಕಾಶ ಕೊಡಿ’ ಎಂದರು.

ADVERTISEMENT

ಸಂಪುಟದಿಂದ ವಜಾಗೊಂಡ ನಂತರ ಕಲಾಪಕ್ಕೆ‌ ಹಾಜರಾಗದ ಕೆ.ಎನ್‌. ರಾಜಣ್ಣ ಹೆಸರು ಪ್ರಸ್ತಾಪಿಸಿದ ಅಶೋಕ, ‘ರಾಜಣ್ಣ ಹೋದ ಮೇಲೆ ಡಿಕೆಶಿ ಫುಲ್ ಆಕ್ಟೀವ್ ಆಗಿದ್ದಾರೆ. ಮುಖದಲ್ಲಿ ನೋಡಿ ಕಳೆ. ಎಲ್ಲ ದಲಿತರು ಅವರ ಪರ ಬಂದಿದ್ದಾರೆ ಎಂದು ಖುಷಿಗೊಂಡಿದ್ದಾರೆ’ ಎಂದು ಶಿವಕುಮಾರ್‌ ಅವರನ್ನು ಕಿಚಾಯಿಸಿದರು.

ಆಗ ಸಭಾಧ್ಯಕ್ಷ ಯು.ಟಿ. ಖಾದರ್, ‘ಸ್ಪೀಕರ್ ತೀರ್ಮಾನ ಸರಿ ತಪ್ಪು ಅನ್ನೋದು ಇಲ್ಲ. ಸ್ಪೀಕರ್ ತೀರ್ಮಾನ ಅಂತಿಮ’ ಎಂದರು.

ಅದಕ್ಕೆ ಅಶೋಕ, ‘ಎರಡು ಕಣ್ಣಲ್ಲಿ ಒಂದು ಕಣ್ಣು ಹೋದರೆ ಒಂಟಿ ಕಣ್ಣು ಎನ್ನುತ್ತಾರೆ. ಎಡ, ಬಲ ಕಣ್ಣು ಅಂತ ಹೇಳೋದಿಲ್ಲ. ನೀವು ಅಷ್ಟೇ. ಒಂದು ಕಡೆ ನಡೆದುಕೊಂಡರೆ ಎಡ ಬಲ ಎನ್ನಲ್ಲ. ಒನ್ ಸೈಡ್ ಎಂದೇ ಹೇಳುತ್ತಾರೆ’ ಎಂದರು.

‘ಶಿಫಾರಸು ಇಲ್ಲ ಎಂದಿದ್ದಕ್ಕೆ ಬೇಸರವಾಯಿತೇ?’

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ತಿದ್ದುಪಡಿ ಮಸೂದೆ’ ಮೇಲಿನ ಚರ್ಚೆಯ ವೇಳೆ ಕೆಲ ಸದಸ್ಯರು, ‘ಇದರಿಂದ ನಮಗೆ ಶಿಫಾರಸು ಪತ್ರ ಒತ್ತಡ ಕಡಿಮೆ ಆಗುತ್ತದೆ’ ಎಂದರು.

ತಮ್ಮ ಉತ್ತರದ ವೇಳೆ ಈ ಬಗ್ಗೆ ಪ್ರಸ್ತಾಪಿಸಿದ ದಿನೇಶ್‌, ‘ಈ ಹಿಂದೆ ಶಿಫಾರಸು ಪತ್ರಗಳ ಆಧಾರದಲ್ಲೇ ವರ್ಗಾವಣೆ ನಡೆಯುತ್ತಿತ್ತು. ಈಗ ಅದೆಲ್ಲಾ ನಿಂತುಹೋಗಲಿದೆ’ ಎಂದರು. ಆಗ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ಶಿಫಾರಸು ಪತ್ರಗಳ ಮೇಲೆ ವರ್ಗಾವಣೆ ಆಗುತ್ತಿತ್ತು ಎಂಬುದನ್ನು ಸದನದ ಮುಂದೆ ಹೇಳಿದ್ದೀರಿ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಸಚಿವರನ್ನು ಮಾತಿಗೆ ಸಿಲುಕಿಸಲು ಯತ್ನಿಸಿದರು.

ಸಚಿವ ಬೈರತಿ ಸುರೇಶ್‌, ‘ಆ ಕಡೆಯಿಂದ ನಮಗೆಲ್ಲಾ ಬಂದಿರುವ ಶಿಫಾರಸು ಪತ್ರಗಳ ರಾಶಿಯೇ ಇದೆ’ ಎಂದು ಕೂಗಿದರು. ದಿನೇಶ್ ಗುಂಡೂರಾವ್, ‘ಶಿಫಾರಸು ಪತ್ರ ನಡೆಯುವುದಿಲ್ಲ ಎಂದಿದ್ದಕ್ಕೆ ನಿಮಗೆ ಬೇಸರವಾಯಿತೇ’ ಎಂದು ಕುಟುಕಿದರು.

‘ಸೂಟ್‌ಕೇಸ್‌ನ ಅನುಭವ’

ವಿಧಾನ ಪರಿಷತ್ತಿನಲ್ಲಿ ಮಂಡಿಸಲಾದ ‘ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ಮಸೂದೆ’ಯ ಮೇಲಿನ ಚರ್ಚೆಯ ವೇಳೆ, ‘ಕೆರೆಗಳ ಬಫರ್‌ ಝೋನ್ ವಿಚಾರದಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಸೂಟ್‌ಕೇಸ್‌ ಬಂದಿತ್ತು. ಅದನ್ನು ವಾಪಸ್‌ ಕಳುಹಿಸಿದ್ದೆವು. ಈಗ ಸೂಟ್‌ಕೇಸ್‌ಗಳು ಹೆಚ್ಚು ಪ್ರಭಾವಿ ಆಗಿರಬೇಕು. ಸರ್ಕಾರ ತನ್ನನ್ನು ಮಾರಿಕೊಂಡಿದೆ’ ಎಂದು ಬಿಜೆಪಿಯ ಸಿ.ಟಿ.ರವಿ ಆರೋಪಿಸಿದರು.

ಮಸೂದೆಯಲ್ಲಿನ ಅಂಶಗಳ ಬಗ್ಗೆ ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸಿದ ಸಭಾ ನಾಯಕ ಎನ್‌.ಎಸ್‌.ಬೋಸರಾಜು, ‘ನಮಗೆ ಯಾವ ಸೂಟ್‌ಕೇಸ್‌ಗಳ ಅನುಭವ ಇಲ್ಲ. ನಿಮಗೆ ಅಂತಹ ಅನುಭವ ಇರಬೇಕು. ಅದಕ್ಕಾಗಿಯೇ ಸೂಟ್‌ಕೇಸ್‌ ಬಗ್ಗೆ ಮಾತನಾಡಿದಿರಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸಿ.ಟಿ.ರವಿ ಅವರು ಎದ್ದುನಿಂತರೂ ಮಾತು ಮುಂದುವರೆಸಿದ ಸಚಿವರು, ‘ನೀವು ಸದನದ ಹಿರಿಯ ಸದಸ್ಯರಿದ್ದೀರಿ. ಇಂಥದ್ದನ್ನೆಲ್ಲಾ ಮಾತನಾಡುತ್ತಾರೆಯೇ’ ಎಂದು ಕಟುವಾಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.