ADVERTISEMENT

ಅತ್ಯಾಚಾರ ಕುರಿತು ವಿವಾದಾತ್ಮಕ ಹೇಳಿಕೆ: ಕ್ಷಮೆ ಕೋರಿದ ರಮೇಶ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2021, 17:33 IST
Last Updated 17 ಡಿಸೆಂಬರ್ 2021, 17:33 IST
 ಕೆ.ಆರ್.ರಮೇಶ್ ಕುಮಾರ್
ಕೆ.ಆರ್.ರಮೇಶ್ ಕುಮಾರ್   

ಬೆಳಗಾವಿ (ಸುವರ್ಣ ವಿಧಾನಸೌಧ): ಅತ್ಯಾಚಾರದ ಕುರಿತು ಗುರುವಾರ ಸದನದಲ್ಲಿ ತಾವು ಆಡಿದ ಮಾತಿನ ಬಗ್ಗೆ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ಕುಮಾರ್‌ ವಿಷಾದ ವ್ಯಕ್ತಪಡಿಸಿ, ಕ್ಷಮೆಯನ್ನೂ ಕೇಳಿದರು.

ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಸಮಜಾಯಿಷಿ ನೀಡಿದ ಅವರು, ‘ನಾನು ನಿನ್ನೆ ಮಾಡಿದ ಉಲ್ಲೇಖವು ಹೆಣ್ಣಿಗೆ ಅಪಮಾನ ಮಾಡುವುದಾಗಿರಲಿಲ್ಲ ಅಥವಾ ದುರುದ್ದೇಶದಿಂದ ಕೂಡಿದ್ದಲ್ಲ. ನಾನು ಯಾವ ಸನ್ನಿವೇಶದಲ್ಲಿ ಹೇಳಿದೆ ಎಂಬುದನ್ನು ಅರ್ಥ ಮಾಡಿಕೊಂಡಿಲ್ಲ. ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದಿಲ್ಲ’ ಎಂದರು.

‘ನನ್ನ ಮಾತಿನಿಂದ ದೇಶದ ಯಾವುದೇ ಭಾಗದ ಹೆಣ್ಣು ಮಕ್ಕಳಿಗೆ ನೋವಾಗಿದ್ದಾರೆ ಶುದ್ಧ ಹೃದಯದಿಂದ ವಿಷಾದಿಸುತ್ತೇನೆ. ನನ್ನಿಂದ ಅಪರಾಧ ಆಗಿದೆ ಎಂದು ತೀರ್ಪು ಕೊಟ್ಟಾಗಿದೆ. ಆದ್ದರಿಂದ ಕ್ಷಮೆ ಕೇಳುತ್ತೇನೆ’ ಎಂದು ರಮೇಶ್‌ ಕುಮಾರ್ ಹೇಳಿದರು.

ADVERTISEMENT

ಈ ವಿಷಯವಾಗಿ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನಾವೆಲ್ಲರೂ ಪರಸ್ಪರ ಭಾವನಾತ್ಮಕ ಸಂಬಂಧ ಹೊಂದಿರುವವರು. ರಮೇಶ್‌ಕುಮಾರ್‌ ಅವರು ಗುರುವಾರ ಸಾಂದರ್ಭಿಕವಾಗಿ ಮಾತನ್ನು ಪ್ರಸ್ತಾಪಿಸಿದ್ದರು. ಈ ಸದನದಲ್ಲಿರುವ ನಾವೆಲ್ಲರೂ ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆ. ಆದ್ದರಿಂದ ಈ ವಿಷಯವನ್ನು ಇಲ್ಲಿಗೆ ಮುಕ್ತಾಯ ಮಾಡೋಣ’ ಎಂದು ತೆರೆ ಎಳೆದರು. ಬೇರೆ ಯಾವುದೇ ಸದಸ್ಯರಿಗೂ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಲಿಲ್ಲ.

ಅವರದ್ದೇ ಭಾಷೆಯಲ್ಲಿ ಹೇಳಿದ್ದಾರೆ: ಇಬ್ರಾಹಿಂ
‘ಸರ್ಕಾರಕ್ಕೆಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹೇಳಿದರೆ ಅರ್ಥ ಆಗುವುದಿಲ್ಲ. ಹೀಗಾಗಿ, ಅವರದ್ದೇ ಭಾಷೆಯಲ್ಲಿ ರಮೇಶ್‌ಕುಮಾರ್ ಹೇಳಿದ್ದಾರೆ‌’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ಅತ್ಯಾಚಾರದ ಕುರಿತು ವಿಧಾನಸಭೆಯಲ್ಲಿ ಗುರುವಾರ ಕೆ.ಆರ್‌. ರಮೇಶ್‌ಕುಮಾರ್‌ ಆಡಿದ್ದ ಮಾತಿಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ‘ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದವರು ಪಕ್ಕದಲ್ಲಿ ಕುಳಿತಿದ್ದಾರೆ‌. ಶಿಸ್ತಿನ ಕೇಸರಿ ನಾಯಕರು,ಹನ್ನೆರಡು ಪತಿವ್ರತ ಮಹಾಜನರು ಯಾಕೆ ಸುಮ್ಮನಿದ್ದಾರೆ’ ಎಂದು ತಮ್ಮದೇ ಧಾಟಿಯಲ್ಲಿ ಪರೋಕ್ಷವಾಗಿ ಬಿಜೆಪಿಯ ಸಚಿವರನ್ನು ಪ್ರಶ್ನಿಸಿದರು.

‘ರಮೇಶ್‌ಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಗೊತ್ತಿಲ್ಲ. ಪೀಠದಲ್ಲಿದ್ದ ಸ್ಪೀಕರ್ ಅದನ್ನು ತೆಗೆದುಹಾಕಬೇಕಿತ್ತು’ ಎಂದ ಅವರು, ‘ರಮೇಶ್‌ಕುಮಾರ್‌ ಬ್ರಾಹ್ಮಣರು. ಆದರೆ, ಅವರು ಕೇಶವ ಕೃಪಾ ಮತ್ತು ಬಸವಾದಿ ಶರಣರ ನಡುವೆ ಇದ್ದಾರೆ’ ಎಂದರು.

‘ಸಂಸದ ಸದಾನಂದಗೌಡರ ವಿಡಿಯೊ ಇದೆ. ಸದಾನಂದಗೌಡ ಸದಾ ನಗುತ್ತಾ ಇರುತ್ತಾರೆ. ಅವರು ನ್ಯಾಯಾಲಯದಿಂದ ಯಾಕೆ ತಡೆಯಾಜ್ಞೆ ತಂದರು. ಬಿಜೆಪಿ‌ ಮತ್ತು ಕೇಶವ ಕೃಪಾದವರು ಯಾಕೆ ಸುಮ್ಮನಿದ್ದಾರೆ’ ಎಂದು ಟೀಕಿಸಿದರು.

**
ಯಾರು ಕೂಡ ಹೀಗೆ ಮಾತನಾಡಬಾರದು. ಇದು ಬಿಜೆಪಿ, ಕಾಂಗ್ರೆಸ್ ವಿಚಾರ ಎಂದಲ್ಲ. ಇಂಥ ಹೇಳಿಕೆಗಳಿಂದ ಮಹಿಳೆಯರಿಗೆ ನೋವಾಗುತ್ತದೆ.
-ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.