ADVERTISEMENT

ವಿಧಾನಸಭೆ ಅಧಿವೇಶನ: ನಾಯಕತ್ವ ಬದಲಾವಣೆ ವಿಚಾರವಾಗಿ ಕಾಂಗ್ರೆಸ್–ಬಿಜೆಪಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 23:30 IST
Last Updated 10 ಡಿಸೆಂಬರ್ 2025, 23:30 IST
<div class="paragraphs"><p>ಆರ್. ಆಶೋಕ, ಸಿದ್ದರಾಮಯ್ಯ</p></div>

ಆರ್. ಆಶೋಕ, ಸಿದ್ದರಾಮಯ್ಯ

   

ಪ್ರಜಾವಾಣಿ ಚಿತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಆಡಳಿತರೂಢ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಅಧಿಕಾರ ಹಂಚಿಕೆ ಕುರಿತ ಗೊಂದಲವನ್ನು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದಾಗ, ಸಚಿವರಾದ ಪ್ರಿಯಾಂಕ್‌ ಖರ್ಗೆ ಮತ್ತು ಬೈರತಿ ಸುರೇಶ್ ಅವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಕಿತ್ತಾಟ ಪ್ರಸ್ತಾಪಿಸಿ ತಿರುಗೇಟು ಕೊಟ್ಟರು.

ADVERTISEMENT

ಉತ್ತರ ಕರ್ನಾಟಕದ ಮೇಲಿನ ಚರ್ಚೆ ವೇಳೆ ಅಶೋಕ ಅವರು, ‘ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥ ನಾಯಕತ್ವ ಬೇಕು. ಈಗ ನಾಯಕತ್ವದ ಗೊಂದಲ ನಡೆದಿದೆ. ಕಾಂಗ್ರೆಸ್ ಶಾಸಕರಿಂದಲೇ ಗೊಂದಲಕಾರಿ ಹೇಳಿಕೆಗಳು ಬರುತ್ತಿವೆ’ ಎಂದು ಹೇಳಿದರು.

‘ಸಮರ್ಥ ನಾಯಕತ್ವ ಇಲ್ಲ ಎಂದರೆ ಉತ್ತರ ಕರ್ನಾಟಕದ ಸಮಸ್ಯೆಗಳೇ ಗೋವಿಂದ’ ಎಂದ ಅಶೋಕ ಅವರು, ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರ ‘ಎಕ್ಸ್‌’ ಸಂದೇಶದ ಕುರಿತು ಗಮನ ಸೆಳೆದರು.

‘ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ‘ಮುಖ್ಯಮಂತ್ರಿ’ ಎಂದು ಸ್ವಾಗತದ ಸಂದೇಶ ಹಾಕಿದ್ದರು. ಆ ಬಳಿಕ ಕಣ್ತಪ್ಪಿನಿಂದ ಆಗಿದೆ ಎಂದು ಸಮಜಾಯಿಷಿ ನೀಡಿದರು. ಈ ಬಗ್ಗೆ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

ಸಚಿವ ಬೈರತಿ ಸುರೇಶ್ ಅವರ ‘ಕಿಂಗ್‌ ಈಸ್ ಅಲೈವ್’ ಎಂಬ ಹೇಳಿಕೆ ಉಲ್ಲೇಖಿಸಿದ ಅಶೋಕ, ‘ಇದರ ಅರ್ಥ ಏನು? ಮುಖ್ಯಮಂತ್ರಿಯವರು ಗಟ್ಟಿಯಾಗಿ, ಕಲ್ಲು ಬಂಡೆಯಂತಿದ್ದಾರಲ್ಲವೇ? ಈ ಮಾತು ಕೇಳಿದರೆ ಯಾರಿಗಾದರೂ ಸಂದೇಹ ಬರುವುದಿಲ್ಲವೇ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಬೈರತಿ ಸುರೇಶ್, ‘ಮಾಧ್ಯಮದವರು ನಾಯಕತ್ವದ ಪ್ರಶ್ನೆ ಕೇಳಿದಾಗ ‘ಕಿಂಗ್‌ ಈಸ್‌ ಅಲೈವ್’ ಎಂದು ಹೇಳಿದ್ದೆ. ಇದಕ್ಕೆ ವಿಪರೀತ ಅರ್ಥ ಕಲ್ಪಿಸಬೇಕಿಲ್ಲ. ನಮ್ಮ ನಾಯಕರು ಗಟ್ಟಿಮುಟ್ಟಾಗಿದ್ದಾರೆ. ನಾಯಕತ್ವದ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಅಣ್ಣ–ತಮ್ಮಂದಿರ ರೀತಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು. ಆಗ ಬಿಜೆಪಿ ಸದಸ್ಯರು, ‘ಹೋ’ ಎಂದು ಕೂಗಿದರು.

‘ನೀವು ಯಾರ ಪರ, ಮುಖ್ಯಮಂತ್ರಿ ಪರವೋ’ಎಂದು ಅಶೋಕ ಪ್ರಶ್ನಿಸಿದಾಗ, ‘ನನ್ನ ನಿಯತ್ತು ಕಾಂಗ್ರೆಸ್ ಪಕ್ಷ ಮತ್ತು ಸಿದ್ದರಾಮಯ್ಯ ಸಾಹೇಬ್ರಿಗೆ. ಮೊದಲು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ನೋಡಿಕೊಳ್ಳಿ. ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದೆ. ಅವರನ್ನು ಕೆಳಗಿಳಿಸುವ ಕೆಲಸ ನಡೆಯುತ್ತಿದೆ’ ಎಂದು ಸುರೇಶ್ ತಿರುಗೇಟು ನೀಡಿದರು.

ಸುರೇಶ್ ನೆರವಿಗೆ ಧಾವಿಸಿದ ಪ್ರಿಯಾಂಕ್ ಖರ್ಗೆ ಅವರು, ‘ನಿಮ್ಮ ಅವಧಿಯಲ್ಲಿ ಎಷ್ಟು ಬಾರಿ ಮುಖ್ಯಮಂತ್ರಿಯನ್ನು ಬದಲಿಸಿದ್ದೀರಿ ನೋಡಿಕೊಳ್ಳಿ, ನಿಮ್ಮ ಯಾವುದೇ ಮುಖ್ಯಮಂತ್ರಿ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸಲಿಲ್ಲ. ಈ ಬಗ್ಗೆಯೂ ಚರ್ಚೆ ಆಗಲಿ’ ಎಂದರು.

‘ಅಧಿಕಾರದ ಗೊಂದಲದ ಕಾರಣ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ.  ಮುಖ್ಯಮಂತ್ರಿ– ಉಪ ಮುಖ್ಯಮಂತ್ರಿಯವರು ಇಡ್ಲಿ–ವಡೆ ತಿಂದು ಸಮಸ್ಯೆ ಬಗೆಹರಿಸಿಕೊಳ್ಳುವುದಾದರೆ, ಈ ಫಾರ್ಮುಲಾವನ್ನು ಇಡೀ ದೇಶಕ್ಕೆ ಕೊಡಿ. ಎಲ್ಲ ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಬಗೆಹರಿಯುತ್ತದೆ’ ಎಂದು ಅಶೋಕ ಕುಟುಕಿದರು.