ADVERTISEMENT

ಜನರನ್ನು ಸಾಯಿಸಿ ಯೋಜನೆ ಜಾರಿಯ ಅವಶ್ಯ ನನಗಿಲ್ಲ: ಕೆ.ಜೆ. ಜಾರ್ಜ್‌

ಯೋಜನೆ ಸ್ಥಗಿತಕ್ಕಾಗಿ ಉತ್ತರ ಕನ್ನಡ ಜನ ಸಾಯಲೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:18 IST
Last Updated 10 ಡಿಸೆಂಬರ್ 2025, 16:18 IST
ಕೆ.ಜೆ. ಜಾರ್ಜ್‌
ಕೆ.ಜೆ. ಜಾರ್ಜ್‌   

ಬೆಳಗಾವಿ (ಸುವರ್ಣ ವಿಧಾನಸೌಧ): ‘ಜನರನ್ನು ಸಾಯಿಸಿ ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆ ಅನುಷ್ಠಾನಗೊಳಿಸುವ ಅಗತ್ಯ ನನಗಿಲ್ಲ. ಇದು ನನ್ನ ಮನೆಯ ಯೋಜನೆಯೂ ಅಲ್ಲ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಉತ್ಪಾದನೆಗಾಗಿ ಈ ಯೋಜನೆ ಮಾಡುತ್ತಿದ್ದೇವೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಆಕ್ರೋಶದಿಂದ ಹೇಳಿದರು.

ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ದಿನಕರ ಶೆಟ್ಟಿ ‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಯೋಜನೆ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆಯಿಂದ ಪಶ್ಚಿಮಘಟ್ಟಕ್ಕೆ ಹಾನಿಯಾಗುತ್ತದೆ. ಯೋಜನೆಯಿಂದ ಭೂ ಕುಸಿತ ಸಮಸ್ಯೆ ಉಂಟಾಗಲಿದೆ. ಈ ಯೋಜನೆ ಸ್ಥಗಿತಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ಸಾಯಲು ಸಿದ್ಧರಿದ್ದಾರೆ. ಒಂದು ವೇಳೆ ಯೋಜನೆ ಮಾಡಲೇಬೇಕು ಎಂದರೆ ಜನರ ಹೆಣದ ಮೇಲೆ ಅನುಷ್ಠಾನಗೊಳಿಸಿ’ ಎಂದು ಶೆಟ್ಟಿ ಕೋಪದಿಂದಲೇ ಹೇಳಿದರು.

ADVERTISEMENT

ಆಗ ಸಿಟ್ಟಾದ ಜಾರ್ಜ್‌, ‘ ರಾಜ್ಯದ ವಿದ್ಯುತ್‌ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೂ, ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ ನೀಡಲಾಗುತ್ತಿದೆ. ಈ ಎಲ್ಲ ಕಾರಣದಿಂದಾಗಷ್ಟೇ ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯಿಂದ ನಮಗೆ 2 ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ’ ಎಂದರು.

‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಜಲ ವಿದ್ಯುತ್‌ ಯೋಜನೆ ಕುರಿತಂತೆ 2021ರಲ್ಲಿ ಅಂದಿನ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಅದರ ಆಧಾರದಲ್ಲಿ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಈಗಾಗಲೇ 13 ಅನುಮೋದನೆಗಳು ದೊರೆತಿದ್ದು, ಇನ್ನೂ ಹಲವು ಅನುಮೋದನೆಗಳು ದೊರೆಯಬೇಕಿದೆ. ಯೋಜನೆಗಾಗಿ ಕೇವಲ 110ರಿಂದ 120 ಎಕರೆ ಬೇಕಾಗಲಿದ್ದು, ಪೈಪ್‌ಲೈನ್‌ ಅಳವಡಿಸಿ ನಂತರ ಅದರ ಮೇಲೆ ಮಣ್ಣು ಮುಚ್ಚಿ ಅರಣ್ಯ ಪ್ರದೇಶವನ್ನು ಯಥಾಸ್ಥಿತಿಗೆ ತರಲಾಗುವುದು. 25 ಎಕರೆ ಭೂಮಿ ಭೂಗತ ಪವರ್‌ ಸ್ಟೇಷನ್‌ ನಿರ್ಮಾಣಕ್ಕೆ ಬೇಕಾಗಲಿದೆ’ ಎಂದು ವಿವರಿಸಿದರು.

ಯೋಜನೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದ ಶೆಟ್ಟಿ ಅವರ ವಾದಕ್ಕೆ ತಕರಾರು ತೆಗೆದ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ, ‘ಶರಾವತಿ ಯೋಜನೆ ನಮ್ಮ ಕ್ಷೇತ್ರದಲ್ಲಿ ನಡೆಯುತ್ತಿದೆ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗಿದೆ. ನಾವು ಯಾರೂ ಯೋಜನೆಯನ್ನು ವಿರೋಧಿಸಿಲ್ಲ. ಕೆಲವರು ಮಾತ್ರ ಉದ್ದೇಶಪೂರ್ವಕವಾಗಿ ವಿರೋಧ ಮಾಡುತ್ತಿದ್ದಾರೆ. ಅವರು ಬೇಕಿದ್ದರೆ ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.