
ಸುವರ್ಣ ವಿಧಾನಸೌಧ (ಬೆಳಗಾವಿ): ‘ಉತ್ತರಕರ್ನಾಟಕ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಸಚಿವ ಭೇಟಿ ನೀಡುತ್ತಿಲ್ಲ. ಇವರಿಗೆ ಜವಾಬ್ದಾರಿ ಇಲ್ಲವೇ? ಇವರು ರಾಜ್ಯದ ಮಂತ್ರಿಗಳಲ್ಲವೇ’ ಎಂದು ಕಾಂಗ್ರೆಸ್‌ನ ಬಿ.ಆರ್.ಪಾಟೀಲ ಅವರು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಶುಕ್ರವಾರ ಉತ್ತರ ಕರ್ನಾಟಕದ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ನಮ್ಮ ಭಾಗದ ಬಹುತೇಕ ವಿಧಾನಸಭಾ ಕ್ಷೇತ್ರಗಳು ಹಿಂದುಳಿದಿವೆ. ಯಾವುದೇ ಸಚಿವ ಈ ಭಾಗದಲ್ಲಿ ಓಡಾಡುತ್ತಿಲ್ಲ. ತಮ್ಮ ಸ್ವಂತ ಕ್ಷೇತ್ರಗಳನ್ನು ಬಿಟ್ಟರೆ ಬೆಂಗಳೂರಿಗೆ ಹೋಗುತ್ತಾರೆ. ಬೇರೆ ಎಲ್ಲೂ ಹೋಗುವುದಿಲ್ಲ’ ಎಂದು ಕಿಡಿಕಾರಿದರು.
‘ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮುಖ್ಯಮಂತ್ರಿಯಿಂದ ಹಿಡಿದು ಹಿರಿಯ ಸಚಿವರೆಲ್ಲ ಉತ್ತರ ಕರ್ನಾಟಕ ಭಾಗದ ವಿವಿಧ ತಾಲ್ಲೂಕುಗಳಿಗೆ ಪ್ರವಾಸ ಮಾಡಿ ಜನರ ಸಂಕಷ್ಟಗಳನ್ನು ಅರಿತುಕೊಳ್ಳುತ್ತಿದ್ದರು. ಈಗ ಸಚಿವರಿಗೆ ಏನಾಗಿದೆ. ಖಾನಾಪುರ, ಔರಾದ, ನಿಪ್ಪಾಣಿ, ಬಸವಕಲ್ಯಾಣ, ಆಳಂದ, ಗುರುಮಠಕಲ್ ಇಲ್ಲಿಗೆ ಎಷ್ಟು ಮಂತ್ರಿಗಳು ಭೇಟಿ ನೀಡಿದ್ದಾರೆ’ ಎಂದು ಪ್ರಶ್ನಿಸಿದರು.
‘ಬೆಳಗಾವಿ ಬರುವ ಮಂತ್ರಿಗಳು ನಮ್ಮ ಭಾಗಕ್ಕೆ ಭೇಟಿ ನೀಡಿದ್ದಾಗಿ ಹೇಳುತ್ತಾರೆ. ಬೆಳಗಾವಿ ಎಂದರೆ ಉತ್ತರ ಕರ್ನಾಟಕವೇ? ಬೆಳಗಾವಿಯಿಂದ ಕಲಬುರಗಿಗೆ 400 ಕಿ.ಮೀ ದೂರ ಇರುವುದು ಅವರಿಗೇನಾದರೂ ಗೊತ್ತಿದೆಯೆ? ಇದು ನಮ್ಮ ಕಾಲದಲ್ಲಿ ಮಾತ್ರವಲ್ಲ ಬಿಜೆಪಿ ಕಾಲದಲ್ಲೂ ಹೀಗೆ ಇತ್ತು’ ಎಂದು ದೂರಿದರು.
‘ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ನೋಡಿದರೆ ನಮ್ಮ ಭಾಗದ ಸ್ಥಿತಿ ಗೊತ್ತಾಗುತ್ತದೆ. ಕಲ್ಯಾಣ ಕರ್ನಾಟಕದ ಭಾಗದ 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ 1 ಲಕ್ಷಕ್ಕೂ ಹೆಚ್ಚು ಮಂದಿ ಅನುತ್ತೀರ್ಣರಾಗುತ್ತಾರೆ. ಇದಕ್ಕೆ ಕಾರಣವೇನು ಎಂದು ಸರ್ಕಾರ ಆತ್ಮ ವಿಮರ್ಶೆ ಮಾಡಿಕೊಂಡಿದೆಯೇ? ಈ ಭಾಗದಲ್ಲಿ ವಿದ್ಯಾರ್ಥಿಗಳ ತಂದೆ–ತಾಯಿ ಶಿಕ್ಷಣ ಪಡೆದಿರುವುದಿಲ್ಲ. ಶಾಲೆಗಳಲ್ಲಿ ಪಾಠ ಸರಿಯಾಗಿ ನಡೆಯುವುದಿಲ್ಲ, ಒಟ್ಟಾರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಸ್ಥಿತಿಯೇ ಇಲ್ಲ’ ಎಂದು ಹೇಳಿದರು.
‘ರಾಜ್ಯದಲ್ಲಿ 54 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 24 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ನಮ್ಮ ಭಾಗದಲ್ಲಿ ಆರೋಗ್ಯ ಕೇಂದ್ರಗಳ ಕೊರತೆ ಇದ್ದು 300 ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಬೇಕು’ ಎಂದು ಬಿ.ಆರ್.ಪಾಟೀಲ ಒತ್ತಾಯಿಸಿದರು.
ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು. ಗಡಿಭಾಗದ ಹಿಂದುಳಿದಿರುವ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು.– ಗಣೇಶ ಹುಕ್ಕೇರಿ, ಕಾಂಗ್ರೆಸ್
‘ಕಲಾಪಕ್ಕೆ ಹಾಜರಾಗದ ಸತೀಶ’ ಸಚಿವ ಸತೀಶ ಜಾರಕಿಹೊಳಿ ಒಂದು ದಿನವೂ ಸದನಕ್ಕೆ ಬಂದಿಲ್ಲ. ಬೆಳಗಾವಿಯವರೇ ಆಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೆಳಗಾವಿಯಲ್ಲಿ ಇದ್ದರೂ ಸದನಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಆಕಾಂಕ್ಷಿ ಆಗಿರುವ ಅವರು ಈ ರೀತಿ ನಡೆದುಕೊಳ್ಳುವುದು ಸರಿಯೇ? ಮಂತ್ರಿಗಳ ರೋಸ್ಟರ್ ಪಟ್ಟಿಯ ಪ್ರಕಾರ ಯಾವ ಸಚಿವರೂ ವಿಧಾನಸಭೆಗೆ ಬರುತ್ತಿಲ್ಲ.– ಅರವಿಂದ ಬೆಲ್ಲದ, ಬಿಜೆಪಿ
‘ಅಭಿವೃದ್ಧಿ ಕುರಿತು ಆತ್ಮವಿಮರ್ಶೆ ಆಗಲಿ’ ಸರ್ಕಾರ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಹೆಚ್ಚು ಕಡಿಮೆ ಸಮಾನವಾಗಿ ಅನುದಾನ ನೀಡುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಹಾಗಿದ್ದರೆ ಅನುದಾನ ಎಲ್ಲಿ ಸೋರಿ ಹೋಗುತ್ತಿದೆ. ಈ ಕುರಿತು ಮುಖ್ಯಮಂತ್ರಿಯವರು ಮತ್ತು ಈ ಭಾಗದ ರಾಜಕಾರಣಿಗಳು ಚಿಂತನೆ ನಡೆಸಬೇಕು.– ಸಿ.ಬಿ. ಸುರೇಶ್‌ಬಾಬು, ಜೆಡಿಎಸ್
‘ತಲಾ ಆದಾಯದಲ್ಲಿ ಹಿಂದೆ’ ತಲಾ ಆದಾಯದಲ್ಲಿ ಕಲ್ಯಾಣ ಕರ್ನಾಟಕ ತುಂಬಾ ಹಿಂದೆ. ಇಡೀ ದೇಶದಲ್ಲಿ ಕರ್ನಾಟಕದ ತಲಾ ಆದಾಯದಲ್ಲಿ ನಂಬರ್ 1 ಇದೆ. ಆದರೆ ರಾಜ್ಯದಲ್ಲಿ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳ ತಲಾ ಆದಾಯ ತುಂಬಾ ಹಿಂದಿದೆ. ಬೆಂಗಳೂರಿನ ತಲಾ ಆದಾಯ ₹6 ಲಕ್ಷ ಆದಾಯ ಇದ್ದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ₹1.30 ಲಕ್ಷ ಇದೆ.– ಡಾ.ಶೈಲೇಂದ್ರ ಬೆಲ್ದಾಳೆ, ಬಿಜೆಪಿ
ಚರ್ಚೆಗೆ ಅವಕಾಶ ಕೇಳಿದ ಎಚ್.ಕೆ.ಪಾಟೀಲ
ಉತ್ತರ ಕರ್ನಾಟಕ ಕುರಿತ ಚರ್ಚೆಯಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸಭಾಧ್ಯಕ್ಷರಿಗೆ ಕೋರಿಕೆ ಸಲ್ಲಿಸಿದ ಕುರಿತು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
‘ಉತ್ತರ ಕರ್ನಾಟಕದ ಕುರಿತು ಚರ್ಚೆಯಲ್ಲಿ ನಾನೂ ಭಾಗವಹಿಸಬೇಕಿದೆ. ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ’ ಎಂದು ಎಚ್.ಕೆ.ಪಾಟೀಲ ಹೇಳಿದರು. ಇದಕ್ಕೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಕರಾರು ಎತ್ತಿದರು.
‘ಉತ್ತರ ನೀಡಬೇಕಾದ ಸ್ಥಾನದಲ್ಲಿರುವ ಸಚಿವರೇ ಚರ್ಚೆಯಲ್ಲಿ ಭಾಗವಹಿಸುವುದು ಸರಿಯಲ್ಲ. ಉತ್ತರ ಹೇಳುವ ಸಂದರ್ಭದಲ್ಲಿ ನೀವು ಹೇಳಬೇಕಾಗಿರುವುದನ್ನು ಹೇಳಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದರು.
ಇದಕ್ಕೆ ವಿ.ಸುನಿಲ್ ಕುಮಾರ್ ಆರಗ ಜ್ಞಾನೇಂದ್ರ ಧ್ವನಿಗೂಡಿಸಿ ‘ಇದು ಸತ್‌ಸಂಪ್ರದಾಯವಲ್ಲ. ಈ ಬಗ್ಗೆ ರೂಲಿಂಗ್ ನೀಡಬೇಕು’ ಎಂದು ಸಭಾಧ್ಯಕ್ಷರನ್ನು ಒತ್ತಾಯಿಸಿದರು.
ಬಿಜೆಪಿ ಸದಸ್ಯರ ಒತ್ತಡಕ್ಕೆ ಮಣಿದ ಎಚ್.ಕೆ.ಪಾಟೀಲ ಅವರು ‘ಈಗ ಚರ್ಚೆಯಲ್ಲಿ ಭಾಗಹಿಸುವುದಿಲ್ಲ. ಉತ್ತರ ಹೇಳುವ ಸಂದರ್ಭದಲ್ಲಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.