ADVERTISEMENT

ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಕೊಡಿ: ಕೆ. ಗೋಪಾಲಯ್ಯ

ಸರ್ಕಾರಕ್ಕೆ ಗೋಪಾಲಯ್ಯ ಮನವಿ * ಮಾಜಿ ಕಾರ್ಪೊರೇಟರ್‌ ಪದ್ಮರಾಜ್‌ ಕೊಲೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 0:11 IST
Last Updated 15 ಫೆಬ್ರುವರಿ 2024, 0:11 IST
<div class="paragraphs"><p>ಕೆ. ಗೋಪಾಲಯ್ಯ</p></div>

ಕೆ. ಗೋಪಾಲಯ್ಯ

   

ಬೆಂಗಳೂರು: ‘ಬಿಬಿಎಂಪಿಯ ಮಾಜಿ ಕಾರ್ಪೊರೇಟರ್‌ (ಪದ್ಮರಾಜ್‌) ನಿನ್ನೆ ರಾತ್ರಿ ದೂರವಾಣಿ ಕರೆ ಮಾಡಿ ನನಗೆ ಮತ್ತು ನನ್ನ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿದ್ದು, ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ನೀಡಬೇಕು’ ಎಂದು ಬಿಜೆಪಿಯ ಕೆ. ಗೋಪಾಲಯ್ಯ ವಿಧಾನಸಭೆಯಲ್ಲಿ ಮನವಿ ಮಾಡಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾ‍ಪಿಸಿದ ಗೋಪಾಲಯ್ಯ, ‘ರಾತ್ರಿ ವೇಳೆಯಲ್ಲಿ ಕುಡಿದು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದೂ ಅಲ್ಲದೇ, ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಹುಡುಗರನ್ನು ಬಿಟ್ಟು ಹಲ್ಲೆ ಮಾಡಿಸುವ ಸಾಧ್ಯತೆ ಇದೆ. ಆದ್ದರಿಂದ ರಕ್ಷಣೆ ನೀಡಬೇಕು. ಈ ಸಂಬಂಧ ನಿನ್ನೆ ರಾತ್ರಿಯೇ ದೂರವಾಣಿ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದೆ’ ಎಂದು ಹೇಳಿದರು.

ADVERTISEMENT

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಬಿಜೆಪಿಯ ವಿ.ಸುನಿಲ್‌ಕುಮಾರ್‌, ಶಾಸಕ ಗೋಪಾಲಯ್ಯ ಅವರಿಗೆ ರಕ್ಷಣೆ ನೀಡಲು ಸಭಾಧ್ಯಕ್ಷರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಅಚ್ಚರಿ ಎಂದರೆ ಗೋಪಾಲಯ್ಯ ನಿನ್ನೆ ರಾತ್ರಿ ದೂರು ನೀಡಿದ್ದರೂ, ಬೆದರಿಕೆ ಹಾಕಿದ ವ್ಯಕ್ತಿಯನ್ನು ಈವರೆಗೂ ಬಂಧಿಸಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿಯ ಇತರ ಸದಸ್ಯರೂ ಧ್ವನಿಗೂಡಿಸಿದರು.

‘ಆ ವ್ಯಕ್ತಿ ನನಗೂ, ಅಶೋಕ ಅವರಿಗೂ ಬೆದರಿಕೆ ಹಾಕಿದ್ದಾನೆ. ಈ ವ್ಯಕ್ತಿ ನಡೆಸುವ ಕ್ಲಬ್‌ಗೆ ಕಡಿವಾಣವೇ ಇಲ್ಲ. ಆತ ಮನೆಯಲ್ಲಿ ಇದ್ದರೂ, ಏಕೆ ಬಂಧಿಸುತ್ತಿಲ್ಲ’ ಎಂದು ಬಿಜೆಪಿಯ ಶಾಸಕ ಎಸ್‌. ಸುರೇಶ್‌ ಕುಮಾರ್‌ ಪ್ರಶ್ನಿಸಿದರು. ‘ಪದ್ಮರಾಜ್‌ ಅನ್ನು ಗಡಿಪಾರು ಮಾಡಬೇಕು’ ಎಂಬ ಒತ್ತಾಯವೂ ಕೇಳಿ ಬಂದಿತು.

ಬಿಜೆಪಿಯ ಮತ್ತೊಬ್ಬ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ‘ಗೋಪಾಲಯ್ಯ ಅವರಂತಹ ಸಜ್ಜನ ವ್ಯಕ್ತಿಗೆ ಈ ರೀತಿ ಬೆದರಿಕೆ ಹಾಕುತ್ತಾರೆ ಎಂದರೆ ಹೇಗೆ? ನಮಗೇ ಯಾರಾದರೂ ಏನಾದರೂ ಹೇಳಿದರೆ ಕಪಾಳಕ್ಕೆ ಹೊಡೆಯುತ್ತೇವೆಯೋ ಏನೋ, ಆದರೆ ಗೋಪಾಲಯ್ಯ ತಿರುಗಿ ಮಾತನಾಡುವ ವ್ಯಕ್ತಿಯೇ ಅಲ್ಲ’ ಎಂದರು.

ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ‘ಶಾಸಕರಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಾರೆ ಎಂದರೆ, ಎಷ್ಟು ಧೈರ್ಯ? ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂಜೆ ಒಳಗೆ ಆ ವ್ಯಕ್ತಿಯನ್ನು ಬಂಧಿಸದಿದ್ದರೆ ಎಸ್‌ಐ ಅನ್ನು ಅಮಾನತು ಮಾಡಬೇಕು’ ಎಂದು ಸರ್ಕಾರಕ್ಕೆ ಸೂಚಿಸಿದರು.

ಈ ಚರ್ಚೆ ನಡೆಯುವಾಗ ಗೃಹ ಸಚಿವ ಜಿ.ಪರಮೇಶ್ವರ ಅವರು ಸದನದಲ್ಲಿ ಇರಲಿಲ್ಲ. ಕೆಲ ಸಮಯದ ಬಳಿಕ ಅಲ್ಲಿಗೆ ಬಂದ ಅವರು, ‘ಗೋಪಾಲಯ್ಯ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಲಾಗಿದೆ’ ಎಂದು ಹೇಳಿ ವಿಷಯಕ್ಕೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.