ADVERTISEMENT

ವಿಜಯೇಂದ್ರ ಕಟ್ಟಿ ಹಾಕಲು ಶತಯತ್ನ: ಫೆಬ್ರುವರಿಯಲ್ಲಿ ರಾಜ್ಯಕ್ಕೂ ಹೊಸ ಅಧ್ಯಕ್ಷ

ಫೆಬ್ರುವರಿಯಲ್ಲಿ ರಾಜ್ಯಕ್ಕೂ ಹೊಸ ಅಧ್ಯಕ್ಷ * ಕುಟುಂಬ ರಾಜಕಾರಣ ತಡೆಗೆ ಯತ್ನಾಳ ಬಣ ಒತ್ತಡ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 0:30 IST
Last Updated 16 ಜನವರಿ 2025, 0:30 IST
<div class="paragraphs"><p>ವಿಜಯೇಂದ್ರ</p></div>

ವಿಜಯೇಂದ್ರ

   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸದ್ಯವೇ ಘೋಷಣೆ ಆಗಲಿದ್ದು, ಇದಕ್ಕಾಗಿ ತೆರೆಮರೆಯಲ್ಲೇ ಕಸರತ್ತು ಆರಂಭವಾಗಿದೆ. ಬಿ.ವೈ.ವಿಜಯೇಂದ್ರ ಅಧ್ಯಕ್ಷರಾಗಿ ಮುಂದುವರಿಯುವುದನ್ನು ತಡೆಯಲು ವಿರೋಧಿ ಬಣ ಟೊಂಕ ಕಟ್ಟಿನಿಂತಿದೆ.

ಫೆಬ್ರುವರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಅದಕ್ಕೆ ಮುನ್ನ ರಾಜ್ಯ ಅಧ್ಯಕ್ಷರ ಸ್ಥಾನಕ್ಕೂ ಆಯ್ಕೆ ಆಗಬೇಕು. ಬಿಜೆಪಿಯಲ್ಲಿ ಹೆಸರಿಗೆ ‘ಚುನಾವಣೆ’ ಎಂದು ಕರೆದರೂ ಪಕ್ಷದ ವರಿಷ್ಠರು ಸೂಚಿಸುವ ವ್ಯಕ್ತಿಯನ್ನೇ ಅಧ್ಯಕ್ಷ ಪಟ್ಟಕ್ಕೆ ಕೂರಿಸುವ ಪದ್ಧತಿ ಇದೆ.

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಕಾರಣ ಹಿಂದಿನ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಆ ಬಳಿಕ ಬಿ.ವೈ.ವಿಜಯೇಂದ್ರ ಮತ್ತು ಇತರರನ್ನು ಪದಾಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ಅದು ತಾತ್ಕಾಲಿಕ ವ್ಯವಸ್ಥೆ ಆಗಿತ್ತು. ತಮ್ಮನ್ನು ರಾಜ್ಯ ಪ್ರಧಾನಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸಿ ಎಂದು ವಿ.ಸುನಿಲ್‌ಕುಮಾರ್ ವರಿಷ್ಠರಿಗೆ ಈಗಾಗಲೇ ಪತ್ರ ಬರೆದಿದ್ದಾರೆ.

ಇದೀಗ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಮೊದಲು ರಾಜ್ಯಗಳಲ್ಲೂ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಬೇಕು. ಅಲ್ಲದೇ, ರಾಜ್ಯದಲ್ಲಿ ಈಗಾಗಲೇ ಬೂತ್‌ ಮತ್ತು ಮಂಡಲಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಹುತೇಕ ಮುಗಿದಿದೆ. ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.

ಹೊಸ ಮುಖಕ್ಕಾಗಿ ಶತಪ್ರಯತ್ನ:

ಬಿ.ವೈ.ವಿಜಯೇಂದ್ರ ಮತ್ತೆ ಅಧ್ಯಕ್ಷರಾಗುವುದನ್ನು ತಡೆಯಲು ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಬಣ ಮತ್ತು ಇತರ ಕೆಲವು ನಾಯಕರು ತೆರೆಯ ಮರೆಯಲ್ಲೇ ಪ್ರಬಲ ಪ್ರಯತ್ನ ನಡೆಸಿದ್ದಾರೆ. ಈ ಹಂತದಲ್ಲಿಯೇ ವಿಜಯೇಂದ್ರ ಅವರನ್ನು ತಡೆಯದೇ ಹೋದರೆ 2028ರ ವಿಧಾನಸಭಾ ಚುನಾವಣೆವರೆಗೂ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಆ ವೇಳೆಗೆ ಅವರು ಪಕ್ಷವನ್ನು ಸಂಪೂರ್ಣ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ಆಗ ಅವರನ್ನು ಇಳಿಸುವುದು ಕಷ್ಟ ಎಂಬ ಲೆಕ್ಕಾಚಾರ ಈ ನಾಯಕರದು. ಹೀಗಾಗಿ ಹೊಸ ಮುಖ ಬರಲಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಗೆ ಬೆಲೆ ಕೊಡಲಿಲ್ಲ’ ಎಂದು ಕೆಲವರು, ‘ವಿಜಯೇಂದ್ರ ಪಕ್ಷದಲ್ಲಿ ತಮಗಿಂತಲೂ ಕಿರಿಯರು ಮತ್ತು ತಳ ಮಟ್ಟದಲ್ಲಿ ಕೆಲಸ ಮಾಡಿದವರಲ್ಲ’ ಎಂದು ಇನ್ನೂ ಕೆಲವರು, ‘ಹೊಂದಾಣಿಕೆ ರಾಜಕೀಯ ಮಾಡುತ್ತಾರೆ’ ಎಂದು ಮತ್ತೆ ಕೆಲವರು ವಿಜಯೇಂದ್ರ ಅವರನ್ನು ಆರಂಭದಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ. ಇದಕ್ಕಾಗಿ ಯತ್ನಾಳ ಬಹಿರಂಗವಾಗಿ ಬಂಡಾಯ ಸಾರಿದರೆ, ಇನ್ನು ಕೆಲವರು ಒಳಗಿಂದಲೇ ಯತ್ನಾಳ ಬಣವನ್ನು ಬೆಂಬಲಿಸುತ್ತಿದ್ದಾರೆ. ಇವರಲ್ಲಿ ಹಲವು ನಾಯಕರು ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯತ್ನಾಳ ಬಣ ಬಹಿರಂಗವಾಗಿಯೇ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರಿಗೆ ಸವಾಲು ಹಾಕಿದೆ. ‘ಕುಟುಂಬ ರಾಜಕಾರಣವನ್ನು ಇಲ್ಲಿಗೆ ನಿಲ್ಲಿಸಬೇಕು. ಇವರು ನಿರಂತರ ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ ಮತ್ತು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಟೀಕಿಸುತ್ತಿರುವುದೂ ಮಾತ್ರವಲ್ಲೇ, ‘ಇವರ ಹಿಡಿತದಿಂದ ಪಕ್ಷವನ್ನು ಮುಕ್ತಗೊಳಿಸಬೇಕು’ ಎಂದು ಪದೇ ಪದೇ ಆಗ್ರಹಿಸಿದೆ.

ಇದಕ್ಕಾಗಿ ದೆಹಲಿ ಮಟ್ಟದಲ್ಲಿ ಹಲವು ನಾಯಕರ ಮೂಲಕ ವಿಜಯೇಂದ್ರ ಅವರನ್ನು ತಡೆಯುವ ಪ್ರಯತ್ನವನ್ನೂ ಮುಂದುವರಿಸಿದ್ದಾರೆ. ಹಲವು ಬಾರಿ ದೆಹಲಿಗೆ ಪಾದ ಬೆಳೆಸಿ ತಮ್ಮ ಆತಂಕವನ್ನು ತೋಡಿಕೊಂಡು ಬಂದಿದ್ದಾರೆ. ಸಮಾನ ಮನಸ್ಕರ ಸಭೆಗಳನ್ನು ಮಾಡಿ ಒತ್ತಡ ಹೇರಿದ್ದಾರೆ.

ಮತ್ತೆ ವಿಜಯೇಂದ್ರ?:

‘ವರಿಷ್ಠರ ಮನಸ್ಸಿನಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ವಿಜಯೇಂದ್ರ ಅವರನ್ನು ಅಧ್ಯಕ್ಷರಾನ್ನಾಗಿ ತಂದು ಕೂರಿಸಿದಾಗಲೂ ಎಲ್ಲರಿಗೂ ಅಚ್ಚರಿ ಆಗಿತ್ತು. ಸ್ವತಃ ವಿಜಯೇಂದ್ರ ಅವರೇ ಅಧ್ಯಕ್ಷ ಹುದ್ದೆ ಒಲಿದು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಯಾವುದೋ ಲೆಕ್ಕಾಚಾರ ಇಟ್ಟುಕೊಂಡೇ ವರಿಷ್ಠರು ತಂದು ಕೂರಿಸಿದ್ದಾರೆ. ಮತ್ತೆ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಒಂದು ವೇಳೆ ಯಾರದರೂ ವಿರೋಧಿಸಿದರೆ ಅವರನ್ನು ದೆಹಲಿಗೆ ಕರೆಸಿ ಮಾತುಕತೆ ಮಾಡಿ ಒಪ್ಪಿಸಬಹುದು’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದಲ್ಲಿ ಹೊಸ ತಲೆಮಾರಿನ ನಾಯಕರನ್ನು ಕಟ್ಟಿ ಬೆಳೆಸಲು ವರಿಷ್ಠರು ಗಮನ ಹರಿಸಿದ್ದಾರೆ. ಮುಂದಿನ 25– 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ತಂಡ ಕಟ್ಟಲಿದ್ದಾರೆ. ಅಧಿಕಾರ ಅನುಭವಿಸಿದ ಸಾಕಷ್ಟು ಘಟಾನುಘಟಿ ನಾಯಕರನ್ನು ದೆಹಲಿಯಲ್ಲಿ ಇರಿಸಿಕೊಂಡಿದ್ದಾರೆ. ಇಲ್ಲಿ ಹೊಸ ಪೀಳಿಗೆ ತರಲು ಅವರ ಶಕ್ತಿ ಸಾಮರ್ಥ್ಯ, ಕೌಶಲ್ಯ, ಪಕ್ಷ ಕಟ್ಟುವ ಉತ್ಸಾಹ ಮತ್ತು ಜಾತಿ ಸಮೀಕರಣ ನೋಡಿಕೊಂಡು ಆದ್ಯತೆ ನೀಡಲಿದ್ದಾರೆ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.