ADVERTISEMENT

ಪೆಗಾಸಸ್‌ ವಿಚಾರದಲ್ಲಿ ಕಾಂಗ್ರೆಸ್ ನಡೆ 'ರಾಹುಲ್ ಪ್ರಾಯೋಜಿತ ಪ್ರಹಸನ': ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2021, 16:36 IST
Last Updated 30 ಜುಲೈ 2021, 16:36 IST
ದೆಹಲಿಯಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಪೆಗಾಸಸ್‌ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು–ಪಿಟಿಐ ಸಂಗ್ರಹ ಚಿತ್ರ
ದೆಹಲಿಯಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಪೆಗಾಸಸ್‌ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು–ಪಿಟಿಐ ಸಂಗ್ರಹ ಚಿತ್ರ   

ಬೆಂಗಳೂರು: ಕೋವಿಡ್‌ ನಿರ್ವಹಣೆ, ಪ್ರಕರಣಗಳ ಇಳಿಕೆ–ಏರಿಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್‌ ಮತ್ತು ಬಿಜೆಪಿ ಟ್ವಿಟರ್‌ ಖಾತೆಗಳಲ್ಲಿ ನಡೆಯುವ ಕೆಸರೆರಚಾಟವು ಕೆಲವು ಬಾರಿ ವ್ಯಕ್ತಿ ಕೇಂದ್ರಿತವಾಗುತ್ತವೆ. ಪೆಗಾಸಸ್‌, ಸಂಸತ್‌ ಕಲಾಪ ಹಾಗೂ ಬಿ.ಎಸ್‌.ಯಡಿಯೂರಪ್ಪ, ಸಿದ್ದರಾಮಯ್ಯ ಬಗೆಗಿನ ಆರೋಪ–ಪ್ರತ್ಯಾರೋಪಗಳು ಟ್ವೀಟ್‌ಗಳ ಮೂಲಕ ರಾರಾಜಿಸುತ್ತಿವೆ.

ಇದೀಗ ಬಿಜೆಪಿ ರಾಜ್ಯ ಘಟಕದ ಟ್ವಿಟರ್‌ ಖಾತೆಯಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಗುರಿಯಾಗಿಸಿ ಕಿಡಿಕಾರಲಾಗುತ್ತಿದೆ. 'ದೇಶದ ವಿರುದ್ಧ ಕಾಂಗ್ರೆಸ್‌ ಷಡ್ಯಂತ್ರ ರೂಪಿಸುತ್ತಿದೆ, ಕಾಂಗ್ರೆಸ್‌ಗೂ ಕ್ಯಾನ್ಸರ್‌ಗೂ ಸಾಮ್ಯತೆ ಇದೆ, ಕಾಂಗ್ರೆಸ್ ಪಕ್ಷವನ್ನು ದೇಶವು ಕ್ಷಮಿಸುವುದಿಲ್ಲ,..' ಎಂದೆಲ್ಲ ಆರೋಪಿಸಲಾಗಿದೆ.

ಪೆಗಾಸಸ್‌ ವಿಚಾರದಲ್ಲಿ ಕಾಂಗ್ರೆಸ್‌ ನಡೆಯನ್ನು ಟೀಕಿಸಿರುವ ಬಿಜೆಪಿ, 'ಇದು ರಾಹುಲ್‌ ಗಾಂಧಿ ಪ್ರಾಯೋಜಿತ ಅಂತರರಾಷ್ಟ್ರೀಯ ಪ್ರಹಸನದ' ರೀತಿ ಕಾಣುತ್ತಿರುವುದಾಗಿ ಪ್ರಕಟಿಸಿದೆ. ಸಂಸತ್ ಕಲಾಪವನ್ನು ಹಾಳುಗೆಡವಲೆಂದೇ ಪೆಗಾಸಸ್‌ ವಿಚಾರವನ್ನು ಅಗತ್ಯಕ್ಕೆ ಮೀರಿ ಚರ್ಚಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ.

ADVERTISEMENT

ಕೊರೊನಾ ವೈರಸ್‌ ಸೋಂಕಿನಿಂದ ಸಂಭವಿಸಿದ ಸಾವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊಣೆ ಮಾಡಲಾಗುತ್ತಿರುವುದಕ್ಕೆ ಆಕ್ಷೇಪಿಸಿರುವ ಬಿಜೆಪಿ, ರೋಗ ವ್ಯಾಪಿಸದಂತೆ ತಡೆಯಲು ಸರ್ಕಾರವು ಮಾಡಿದ ಪ್ರಯತ್ನಗಳು ಕಣ್ಣಿಗೆ ಏಕೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.