
ವಿಧಾನಸೌಧ
ಬೆಂಗಳೂರು: ರಾಜ್ಯ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ₹2.03 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದು, ಒಂಬತ್ತು ತಿಂಗಳಲ್ಲಿ ₹1.38 ಲಕ್ಷ ಕೋಟಿಯಷ್ಟೇ ಸಂಗ್ರಹವಾಗಿದೆ. ವರ್ಷದ ಅಂತ್ಯಕ್ಕೆ ಒಟ್ಟು ತೆರಿಗೆ ಸಂಗ್ರಹದಲ್ಲಿ ₹9,000 ಕೋಟಿಯಿಂದ ₹13,000 ಕೋಟಿ ಖೋತಾ ಆಗುವ ಅಂದಾಜಿದೆ.
2025ರ ಮಾರ್ಚ್‌ನಲ್ಲಿ ಮಂಡಿಸಲಾಗಿದ್ದ ಬಜೆಟ್‌ನಲ್ಲಿ ಸ್ವಂತ ತೆರಿಗೆ ಮೂಲಗಳಿಂದ ಇಷ್ಟು ಮೊತ್ತದ ಆದಾಯ ಕ್ರೋಡೀಕರಣ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದರ ಆಧಾರದಲ್ಲಿ, ಖರ್ಚನ್ನು ಲೆಕ್ಕ ಹಾಕಲಾಗಿತ್ತು.
ಆಸ್ತಿ ಮತ್ತು ದಸ್ತಾವೇಜುಗಳ ನೋಂದಣಿಯಲ್ಲಿನ ಸಮಸ್ಯೆ ಮತ್ತು ಕೇಂದ್ರ ಸರ್ಕಾರವು ಜಿಎಸ್‌ಟಿಯಲ್ಲಿ ಮಾಡಿದ ಬದಲಾವಣೆಯಿಂದಾಗಿ ಗಣನೀಯ ಪ್ರಮಾಣದಲ್ಲಿ ಆದಾಯ ಖೋತಾ ಆಗಿದೆ. ಇವುಗಳ ಮಧ್ಯೆಯೇ ರಾಜ್ಯ ಸರ್ಕಾರವು ಆದಾಯ ಗಳಿಕೆಯಲ್ಲಿ ಶೇ 68ರಷ್ಟು ಗುರಿ ಸಾಧಿಸಿದೆ. ಉಳಿದ ಮೂರು ತಿಂಗಳಲ್ಲಿ ಇನ್ನೂ ₹65,000 ಕೋಟಿ ಸಂಗ್ರಹಿಸುವ ಸವಾಲು ಸರ್ಕಾರದ ಮುಂದಿದ್ದು, ಗರಿಷ್ಠ ₹56,000 ಕೋಟಿಯಷ್ಟೇ ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಆದಾಯ ಗಳಿಕೆಯಲ್ಲಿ ಸರಾಸರಿ ಶೇ 16–17ರಷ್ಟು ಪ್ರಗತಿ ಸಾಧಿಸಿತ್ತು. ಆದರೆ, ಜಿಎಸ್‌ಟಿ ಸ್ಲ್ಯಾಬ್‌ಗಳ ಬದಲಾವಣೆಯ ನಂತರ ಈ ಬೆಳವಣಿಗೆ ದರ ಕುಸಿದಿದೆ. ಆರ್ಥಿಕ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ ವಾಣಿಜ್ಯ ತೆರಿಗೆ ಸಂಗ್ರಹದಲ್ಲೇ ₹7,000 ಕೋಟಿಯಿಂದ ₹9,000 ಕೋಟಿ ನಷ್ಟ ಆಗಬಹುದು.
‘ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ, ಆಯಾ ತ್ರೈಮಾಸಿಕದ ಅಂತ್ಯಕ್ಕೆ ಸರಾಸರಿ ಶೇ 90–93ರಷ್ಟು ಗುರಿ ಸಾಧಿಸಲಾಗಿದೆ. ಇನ್ನು ಮೂರು ತಿಂಗಳಲ್ಲಿ ಒಟ್ಟು, ₹13,500 ಕೋಟಿಯಷ್ಟು ಮೋಟಾರು ವಾಹನ ತೆರಿಗೆ ಸಂಗ್ರಹವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಿದ್ದೂ ಗುರಿಯಲ್ಲಿ ಶೇ 10ರಷ್ಟು ಖೋತಾ ಆಗಬಹುದು’ ಎಂಬ ಅಂದಾಜು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರದು.
‘ಬಿಯರ್ ಮಾರಾಟದಲ್ಲಿ ಕುಸಿತದ ಮಧ್ಯೆಯೂ ಅಬಕಾರಿ ತೆರಿಗೆಯ ಸಂಗ್ರಹದಲ್ಲಿ ನಿರೀಕ್ಷಿತ ಮಟ್ಟದ ಬೆಳವಣಿಗೆ ದಾಖಲಾಗಿದೆ. ಇಲಾಖೆಯು ಪ್ರತಿ ತಿಂಗಳು ಸರಾಸರಿ ₹3,500 ಕೋಟಿ ಆದಾಯ ಗಳಿಸಿದೆ. ಒಂಬತ್ತು ತಿಂಗಳಲ್ಲಿ ಸುಮಾರು ₹30,000 ಕೋಟಿ ಸಂಗ್ರಹಿಸಲಾಗಿದೆ. ಉಳಿದ ಮೂರು ತಿಂಗಳಲ್ಲಿ ಬಜೆಟ್ ಗುರಿ ದಾಟುತ್ತೇವೆ. ಸನ್ನದುಗಳ ಹರಾಜಿನ ಮೂಲಕ ₹40,000 ಕೋಟಿಯ ಗುರಿ ಮುಟ್ಟುತ್ತೇವೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿ ಒಬ್ಬರು ವಿಶ್ವಾಸ ವ್ಯಕ್ತಪಡಿಸಿದರು.
ಈ ಒಂಬತ್ತು ತಿಂಗಳಲ್ಲಿ ಕಡಿಮೆ ಪ್ರಗತಿ ಸಾಧಿಸಿರುವುದು ನೋಂದಣಿ ಮತ್ತು ಮುದ್ರಾಂಕ ಇಲಾಖೆ. ಒಟ್ಟು ಗುರಿಯಲ್ಲಿ ಶೇ 65ರಷ್ಟು ಮಾತ್ರ ಆದಾಯ ಸಂಗ್ರಹವಾಗಿದೆ. ಕಾವೇರಿ ತಂತ್ರಾಂಶದಲ್ಲಿನ ಸಮಸ್ಯೆಗಳು, ಕಾವೇರಿ 2.0 ಮತ್ತು ಇ–ಸ್ವತ್ತು ಜಾರಿಯ ನಂತರ ನೋಂದಣಿ ಕೆಲಸ ನಿಧಾನವಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ನೋಂದಣಿಯಾಗುತ್ತಿಲ್ಲ. ಇದರಿಂದಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಆರ್ಥಿಕ ವರ್ಷಾಂತ್ಯದ ವೇಳೆಗೆ ₹24,000 ಕೋಟಿಯಷ್ಟು ಆದಾಯ ಸಂಗ್ರಹವಾಗಬಹುದು ಎಂಬುದು ಇಲಾಖೆಯ ಅಧಿಕಾರಿಯೊಬ್ಬರ ಅಂದಾಜು.
ಆರ್ಥಿಕ ಇಲಾಖೆ ಅಧಿಕಾರಿಗಳ ಪ್ರಕಾರ ಮೋಟಾರು ವಾಹನ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದಲೇ ಸುಮಾರು ₹5,000 ಕೋಟಿ ಆದಾಯ ಖೋತಾ ಆಗಲಿದೆ. ಕೇಂದ್ರ ಸರ್ಕಾರದ ಸಹಾಯಾನುದಾನವೂ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುವುದರಿಂದ, ರಾಜ್ಯವು ತುಸು ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.