ADVERTISEMENT

ರಂಗೇರಿದ ವಿಧಾನಸಭೆ ಉಪಚುನಾವಣೆ: ಬಿಜೆಪಿಗೂ ಬಂಡಾಯದ ಬಿಸಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2019, 2:32 IST
Last Updated 14 ನವೆಂಬರ್ 2019, 2:32 IST
   

ಬೆಂಗಳೂರು: ಅನರ್ಹ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಬಿಜೆಪಿಯಲ್ಲಿ ಅತೃಪ್ತಿ, ಬಂಡಾಯಬಿರುಸು ಪಡೆದುಕೊಂಡಿದೆ.

ಹೊಸಕೋಟೆ ಕ್ಷೇತ್ರದಲ್ಲಿ ಮೊದಲಿಗೆ ಅತೃಪ್ತಿ ಸ್ಫೋಟಗೊಂಡಿದ್ದು, ಸಂಸದ ಬಿ.ಎನ್.ಬಚ್ಚೇಗೌಡ ಪುತ್ರ ಶರತ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೆ, ಶರತ್‌ಗೆ ಬೆಂಬಲ ವ್ಯಕ್ತಪಡಿಸಿರುವುದು ಚುನಾವಣಾ ಕಣವನ್ನು ರಂಗೇರಿಸಿದೆ. ಕಾಂಗ್ರೆಸ್ ತೊರೆದು ಅನರ್ಹರಾಗಿರುವ ಎಂ.ಟಿ.ಬಿ.ನಾಗರಾಜ್ ಬಿಜೆಪಿಯಿಂದ ಸ್ಪರ್ಧಿಸಲಿದ್ದು, ಶರತ್ ಸ್ಪರ್ಧೆಯಿಂದಾಗಿ ಅವರು ತೀವ್ರ ಪೈಪೋಟಿ ಎದುರಿಸಬೇಕಾಗಿದೆ.

ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಭರಮಗೌಡ (ರಾಜು) ಕಾಗೆ ಗುರುವಾರ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಪಕ್ಷದಿಂದ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಹೊರಬಂದಿದ್ದಾರೆ. ‘ಕಾಡಾ’ ಅಧ್ಯಕ್ಷ ಸ್ಥಾನ ನೀಡಿದ್ದರೂ ಒಪ್ಪಿಕೊಂಡಿರಲಿಲ್ಲ. ಇಂತಹ ‘ಚಾಕಲೇಟ್ ಬೇಡ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಗುಡುಗಿದ್ದರು.ವಿಧಾನಸಭೆ ಟಿಕೆಟ್‌ಗೆ ಪಟ್ಟುಹಿಡಿದಿದ್ದರು.

ADVERTISEMENT

ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಅಶೋಕ್ ಪೂಜಾರಿ ಸಹ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಕೋಪಗೊಂಡಿದ್ದಾರೆ. ಇದೇ 16ರಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದು, ಅಲ್ಲಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದು, ಬಿಜೆಪಿ ತೊರೆಯುವ ಸೂಚನೆ ನೀಡಿದ್ದಾರೆ.

ಗೋಕಾಕದಲ್ಲಿ ಸತೀಶ್ ಜಾರಕಿಹೊಳಿ ಸಹೋದರ ಲಖನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಟಿಕೆಟ್‌ಗಾಗಿ ಸತೀಶ್ ಪಟ್ಟುಹಿಡಿದಿರುವುದರಿಂದ ಅಶೋಕ್ ಪೂಜಾರಿಗೆ ಈ ಕ್ಷೇತ್ರದಿಂದ ಟಿಕೆಟ್ ಸಿಗುವುದು ಕಷ್ಟಕರ. ಆದರೆ ಗೋಕಾಕ್ ಬದಲು ಅಥಣಿಯಿಂದ ಟಿಕೆಟ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

14 ಕಡೆ ಜೆಡಿಎಸ್‌ ಸ್ಪರ್ಧೆ

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಅವರಿಗೆ ಜೆಡಿಎಸ್‌ ಬೆಂಬಲ ನೀಡಲಿದೆ. ಉಳಿದ 14 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

‘ಪಕ್ಷ ಕಳೆದುಕೊಂಡ ಮೂರು ಸ್ಥಾನಗಳ ಜತೆಗೆ ಇನ್ನೂ ಮೂರರಿಂದ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ, ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಂಡು ಚುನಾವಣೆ ಎದುರಿಸಲಾಗುವುದು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು ‘ನೀವು ನಿಮ್ಮ ಸಾಧನೆ ಮೇಲೆ ಚುನಾವಣೆ ಎದುರಿಸಿ. ಜೆಡಿಎಸ್‌ ಪಕ್ಷವು ಬಿಜೆಪಿ ‘ಬಿ‘ ಟೀಂ ಅಂದಿರಿ, ಆಗ ಕುತಂತ್ರ ರಾಜಕಾರಣ ಮಾಡಿದಿರಿ. ಅದರಿಂದ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗುವಂತೆ ಮಾಡಿದಿರಿ. ಜೆಡಿಎಸ್ ಮೇಲೆ ಅಪನಂಬಿಕೆ ಮೂಡಿಸುವ ಮೂಲಕ ಬಿಜೆಪಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೀರಿ’ ಎಂದರು.

‘ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಅವರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಲಿ. ನಾವು ಬಿಜೆಪಿ ಸರ್ಕಾರವನ್ನು ಉಳಿಸುತ್ತೇವೆ ಅಂದಿದ್ದೇವಾ. ಜೆಡಿಎಸ್‌ಗೆ ಶಕ್ತಿ ಇಲ್ಲ ಅಂತಾರೆ. ಆದರೆ ಪಕ್ಷದ ಶಾಸಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ನಮ್ಮನ್ನು ಕಡೆಗಣಿಸಿದಷ್ಟೂ ನಮ್ಮ‌ ಶಕ್ತಿ ಹೆಚ್ಚಾಗುತ್ತದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಕೊಟ್ಟ ಬಳುವಳಿ ಇನ್ನೂ 10 ವರ್ಷ ಕಳೆದರೂ ಮುಗಿಯುವುದಿಲ್ಲ. ಇದು ಸಿದ್ದರಾಮಯ್ಯ ರಾಜ್ಯಕ್ಕೆ ಕೊಟ್ಟ ಕೊಡುಗೆ. ಮತಕ್ಕಾಗಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಯಾವ ಒಳ, ಹೊರ ಒಪ್ಪಂದ ಮಾಡಿಕೊಂಡಿಲ್ಲ’ ಎಂದರು.

‘ಜೆಡಿಎಸ್‌ ಬೆಂಬಲ ಘೋಷಿಸಿರುವುದು ಹರ್ಷ ತಂದಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಶರತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.