ADVERTISEMENT

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿ ಕೆಎಂಇಆರ್‌ಸಿಗೆ ಅಧಿಕಾರ: ಸಂಪುಟ ಸಭೆ ಒಪ್ಪಿಗೆ

₹24 ಸಾವಿರ ಕೋಟಿ ನಿಧಿ* ನಾಲ್ಕು ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:30 IST
Last Updated 8 ಮಾರ್ಚ್ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಗಣಿ ಬಾಧಿತ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮತ್ತು ಅದಕ್ಕೆ ಹಣ ಬಳಕೆ ಮಾಡುವ ಅಧಿಕಾರವನ್ನು ಸುಪ್ರೀಂಕೋರ್ಟ್‌ ನೇಮಿಸಿರುವ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ನೇತೃತ್ವದ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮಕ್ಕೆ (ಕೆಎಂಇಆರ್‌ಸಿ) ನೀಡಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಂ‍‍ಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಗಣಿ ಬಾಧಿತ ಜಿಲ್ಲೆಗಳ ಸುಸ್ಥಿರ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ವಿಶೇಷ ಉದ್ದೇಶದ ನಿಧಿಯ (ಎಸ್‌ಪಿವಿ) ಬಳಕೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಬೇಕೆ ಅಥವಾ ಕೆಎಂಇಆರ್‌ಸಿಗೆ ಅಧಿಕಾರ ನೀಡಬೇಕೆ ಎಂಬ ಚರ್ಚೆ ಬಹಳ ಕಾಲದಿಂದಲೂ ನಡೆದಿತ್ತು. ಅಂತಿಮವಾಗಿ ಒಡಿಶಾ ಮಾದರಿಯಲ್ಲಿ ನಿಗಮಕ್ಕೆ ಅಧಿಕಾರ ನೀಡಲು ಒಪ್ಪಿಗೆ ನೀಡಲಾಯಿತು ಎಂದರು.

ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗಾಗಿ ಸಮಗ್ರ ಪರಿಸರ ಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. ಆ ಪ್ರಕಾರ ಬಳ್ಳಾರಿ, ಚಿತ್ರದುರ್ಗ, ತುಮಕೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ADVERTISEMENT

ಸುಮಾರು ₹24,000 ಕೋಟಿಯನ್ನು ಅಭಿವೃದ್ಧಿಗಾಗಿ ಬಳಕೆ ಮಾಡಬೇಕಾಗಿದೆ. ಕುಡಿಯುವ ನೀರು, ಶಾಲೆ, ಪರಿಸರ ಸಂರಕ್ಷಣೆ, ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆ, ನೈರ್ಮಲ್ಯ, ಗ್ರಾಮೀಣ ರಸ್ತೆಗಳು, ಆರೋಗ್ಯ, ದುರ್ಬಲ ವರ್ಗದವರ ಅಭಿವೃದ್ಧಿ, ವಸತಿ, ಕೌಶಲ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಣ ಖರ್ಚು ಮಾಡಬೇಕಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಸುಪ್ರೀಂಕೋರ್ಟ್‌ನ ಮಾರ್ಗಸೂಚಿ ಇದ್ದು, ಆ ಪ್ರಕಾರವೇ ಕಾಮಗಾರಿಗಳು ನಡೆಯಲಿವೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಚಟುವಟಿಕೆ ಆರಂಭವಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಬಳ್ಳಾರಿ ಜಿಲ್ಲೆಯೊಂದಕ್ಕೆ ಸುಮಾರು ₹17 ಸಾವಿರ ಕೋಟಿ ಖರ್ಚು ಮಾಡಬೇಕಾಗುತ್ತದೆ. ಇವೆಲ್ಲವನ್ನೂ ಕೆಎಂಇಆರ್‌ಸಿ ನೋಡಿಕೊಳ್ಳಲಿದೆ. ಒಂದು ವೇಳೆ ಅನುಷ್ಠಾನದ ಸಂದರ್ಭದಲ್ಲಿ ಸಮಸ್ಯೆ ಉಂಟಾದರೆ, ಸರ್ಕಾರ ಆ ವಿಷಯದ ಬಗ್ಗೆ ಗಮನ ಹರಿಸಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.