ADVERTISEMENT

ಮತಾಂತರ ನಿಷೇಧ ಮಸೂದೆಗೆ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 11:07 IST
Last Updated 20 ಡಿಸೆಂಬರ್ 2021, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಳಗಾವಿ: ಒತ್ತಾಯದ, ಆಮಿಷ ಒಡ್ಡಿ ನಡೆಯುವಮತಾಂತರಗಳನ್ನು ನಿಷೇಧಿಸುವ ಪ್ರಸ್ತಾವ ಇರುವ ‘ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ– 2021’ ಮಸೂದೆಗೆ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ.

ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡನೆ ಬಗ್ಗೆ ಚರ್ಚೆ ನಡೆಯಿತು. ಈ ಮಸೂದೆಯನ್ನು ಈ ಅಧಿವೇಶನದಲ್ಲೇ ಮಂಡಿಸಲು ತೀರ್ಮಾನಿಸಲಾಯಿತು.

ಮಸೂದೆ ಪ್ರಕಾರ, ಪರಿಶಿಷ್ಟ (ಎಸ್‌ಸಿ, ಎಸ್‌ಟಿ), ಅಪ್ರಾಪ್ತರು ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವನಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು, ₹ 50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇತರ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ವರ್ಷದಿಂದ 5 ವರ್ಷದವರೆಗೆ ಜೈಲು ಮತ್ತು ₹ 25 ಸಾವಿರ ದಂಡ, ಸಾಮಾಹಿಕ ಮತಾಂತರ ಮಾಡಿದವನಿಗೆ 3 ವರ್ಷದಿಂದ 10 ವರ್ಷದವರೆಗೆ ಜೈಲು ಶಿಕ್ಷೆಮತ್ತು ₹ 1 ಲಕ್ಷ ದಂಡ ವಿಧಿಸಲು ಕೂಡಾ ಅವಕಾಶವಿದೆ.

ADVERTISEMENT

ಯಾವುದು ಕಾನೂನುಬಾಹಿರ: ಮಸೂದೆ ಪ್ರಕಾರ, ಯಾವುದೇ ರೀತಿಯ ವಸ್ತು, ಹಣದ ರೂಪದಲ್ಲಿ ಉಡುಗೊರೆ, ಯಾವುದೇ ಧರ್ಮದಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ, ಉಚಿತ ಶಿಕ್ಷಣ, ವಿವಾಹವಾಗುವುದಾಗಿ ಆಮಿಷ ಅಥವಾ ಉತ್ತಮ ಜೀವನಶೈಲಿ, ಭಾವನಾತ್ಮಕವಾಗಿ ಸೆಳೆದು ಬಲವಂತವಾಗಿ ಮತಾಂತರ ಮಾಡುವುದು ಕಾನೂನುಬಾಹಿರ.

ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಸೇರಿದಂತೆ ನಿರ್ದಿಷ್ಟ ಸಂಸ್ಥೆಗಳು ಇಬ್ಬರು ಅಥವಾ ಹೆಚ್ಚು ಮಂದಿಯ ಸಾಮೂಹಿಕ ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅಂಥ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸುವ ಬಗ್ಗೆ ಪ್ರಸ್ತಾವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.