ADVERTISEMENT

ಮತ್ತೆ ಜಾತಿವಾರು ಸಮೀಕ್ಷೆ: ಸಂಪುಟ ಸಭೆಯಲ್ಲಿ ನಿರ್ಧಾರ

ಮಾನ್ಯತೆ ಕಳೆದುಕೊಂಡ ಕಾಂತರಾಜ ವರದಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 19:15 IST
Last Updated 12 ಜೂನ್ 2025, 19:15 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ಎರಡು ವರ್ಷಗಳಿಂದ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದ್ದ 10 ವರ್ಷಗಳ ಹಳೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಂತಿಮವಾಗಿ ಕೈಬಿಡಲು ತೀರ್ಮಾನಿಸಿರುವ ರಾಜ್ಯ ಸರ್ಕಾರ ಹೊಸದಾಗಿ ಜಾತಿವಾರು ಸಮೀಕ್ಷೆ ನಡೆಸಲು ನಿರ್ಧರಿಸಿದೆ.

ಈ ಸಮೀಕ್ಷೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕಳೆದ ಮೂರು– ನಾಲ್ಕು ಸಂಪುಟ ಸಭೆಗಳಲ್ಲಿ ಪ್ರಸ್ತಾವವನ್ನು ಮಂಡಿಸಲಾಗಿತ್ತು. ಒಕ್ಕಲಿಗ– ಲಿಂಗಾಯತ ಸಮುದಾಯದ ಸಚಿವರ ವಿರೋಧದ ಕಾರಣ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಕೆಲ ದಿನಗಳ ಹಿಂದೆ, ಕಾಂಗ್ರೆಸ್‌ ಹೈಕಮಾಂಡ್‌ ಹೊಸ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಚ್‌. ಕಾಂತರಾಜ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಗೆ ಅಂತಿಮ ತೆರೆ ಎಳೆಯಲಾಯಿತು.

ADVERTISEMENT

ಈ ವರದಿಗೆ ಆರಂಭದಿಂದಲೂ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. ಅವೈಜ್ಞಾನಿಕ ವರದಿ ಮತ್ತು ಸಂಖ್ಯೆಯನ್ನು ಬೇಕಾಬಿಟ್ಟಿ ಬದಲಿಸಲಾಗಿದೆ ಎಂದು ಈ ಸಮುದಾಯಗಳ ಆರೋಪಿಸಿದ್ದವು. ಆದರೆ, ಹಿಂದುಳಿದ ವರ್ಗಗಳ ಮುಖಂಡರು ಸಮೀಕ್ಷೆ ವರದಿಯನ್ನು ಸಮರ್ಥಿಸಿಕೊಂಡಿದ್ದರಲ್ಲದೇ, ಸ್ವೀಕರಿಸಲೇಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದರು.  

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, '10 ವರ್ಷದ ಹಿಂದೆ ನಡೆಸಿದ್ದ ಸಮೀಕ್ಷೆಯ ದತ್ತಾಂಶವು ಮಾನ್ಯತೆ ಕಳೆದುಕೊಂಡಿರುವುದರಿಂದ 90 ದಿನಗಳ ಕಾಲಮಿತಿಯಲ್ಲಿ ಹೊಸದಾಗಿ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.

‘ಹಿಂದುಳಿದ ವರ್ಗಗಳ ಆಯೋಗಕ್ಕೆ ಸಮೀಕ್ಷೆ ನಡೆಸುವ ಹೊಣೆ ವಹಿಸಲಾಗುವುದು. ಆಯೋಗಕ್ಕೆ ಮಧುಸೂದನ ನಾಯಕ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಸದಸ್ಯರ ನೇಮಕ ಮಾಡಲಾಗುವುದು’ ಎಂದು ಅವರು ಹೇಳಿದರು.

‘ಸಮೀಕ್ಷೆ ನಡೆಸಿ 10 ವರ್ಷ ಕಳೆದಿದ್ದರೆ, ಹೊಸ ಸಮೀಕ್ಷೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ– 1995 ಸೆಕ್ಷನ್ 11 (2) ಸ್ಪಷ್ಟವಾಗಿ ಹೇಳಿದೆ. ಈ ಕಾಯ್ದೆಯ ತಿದ್ದುಪಡಿ ಮಸೂದೆ–2014 ಸೆಕ್ಷನ್‌ 11 ಕಲಂ(1) ರಂತೆ ಸಮೀಕ್ಷೆ ನಡೆಸಿ 10 ವರ್ಷಗಳ ಅವಧಿ ಮುಗಿದರೆ, ಆ ಬಳಿಕ ಬರುವ ಪ್ರತಿ 10 ವರ್ಷಗಳು ಮುಕ್ತಾಯವಾದಾಗ ಹಿಂದುಳಿದ ವರ್ಗವಾಗಿ ಉಳಿಯದೇ ಇರುವ ಜಾತಿಯನ್ನು ಪಟ್ಟಿಯಿಂದ ತೆಗೆಯಬಹುದು ಅಥವಾ ಆ ಪಟ್ಟಿಗೆ ಸೇರಿಸಬಹುದು’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ಇತ್ತೀಚೆಗೆ ಪಕ್ಷದ ನಾಯಕರು ನನ್ನನ್ನು ಮತ್ತು ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದರು. ಸಾಮಾಜಿಕ–ಶೈಕ್ಷಣಿಕ ವರದಿಗೆ 10 ವರ್ಷ ಕಳೆದಿದೆ. ಸಾಕಷ್ಟು ಬದಲಾವಣೆ ಮತ್ತು ಬೆಳವಣಿಗೆಗಳು ಆಗಿದ್ದು, ಮರು ಪರಿಶೀಲಿಸಿ ಎಂದು ಸೂಚಿಸಿದ್ದರು. ಈ ಎಲ್ಲ ಕಾರಣಗಳಿಂದ ಹೊಸ ಸಮೀಕ್ಷೆಗೆ ತೀರ್ಮಾನಿಸಿದ್ದೇವೆ’ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

‘ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುತ್ತಿರುವಾಗ ರಾಜ್ಯದಲ್ಲಿ ಮತ್ತೊಂದು ಹೊಸ ಸಮೀಕ್ಷೆ ಅಗತ್ಯವಿದೆಯೇ’ ಎಂಬ ಪ್ರಶ್ನೆಗೆ, ‘ಕೇಂದ್ರ ಸರ್ಕಾರ ಎಲ್ಲಿಯೂ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ನಡೆಸುತ್ತದೆ ಎಂದು ಹೇಳಿಲ್ಲ. ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ನಡೆಸುತ್ತೀರಾ ಎಂದು ಕೇಳಿದಾಗಲೂ ಅವರು ಉತ್ತರ ಕೊಡಲಿಲ್ಲ. ಆದ್ದರಿಂದ ನಾವು ಸಾಮಾಜಿಕ ನ್ಯಾಯ ನೀಡಲು ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕಾನೂನು ಸಚಿವ ಎಚ್‌.ಕೆ.ಪಾಟೀಲ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಇದ್ದರು.

‘ಎಚ್‌ಡಿಕೆ ಬೆದರಿಕೆ ಹಾಕಿದ್ದರು’

‘ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಇದ್ದಾಗ ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಪಡೆಯದಂತೆ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಗಿನ ಹಿಂದುಳಿದ ವರ್ಗಗಳ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಬೆದರಿಕೆ ಹಾಕಿದ್ದರು’ ಎಂದು ಸಿದ್ದರಾಮಯ್ಯ ಆರೋಪಿಸಿದರು.

‘ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ವರದಿ ಮತ್ತು ಅದರ ಶಿಫಾರಸುಗಳು ಅಂತಿಮಗೊಂಡಿರಲಿಲ್ಲ. ಹೀಗಾಗಿ ವರದಿ ಪಡೆಯಲು ಸಾಧ್ಯವಾಗಿರಲಿಲ್ಲ. ಕುಮಾರಸ್ವಾಮಿ ಸರ್ಕಾರ ಬರುವ ವೇಳೆಗೆ ವರದಿ ಸಿದ್ಧವಾಗಿತ್ತು. ಆದರೆ, ಅವರ ಒತ್ತಡ, ಬೆದರಿಕೆಯಿಂದ ಸರ್ಕಾರಕ್ಕೆ ವರದಿ ಸ್ವೀಕರಿಸಲು
ಸಾಧ್ಯವಾಗಲಿಲ್ಲ’ ಎಂದರು.

‘ಕಾಂತರಾಜ ಅವಧಿ ಮುಗಿದ ನಂತರ ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ಸರ್ಕಾರ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಸದಸ್ಯರೂ ಬಿಜೆಪಿಯವರೇ ಆಗಿದ್ದರು. ಜಯಪ್ರಕಾಶ್ ಹೆಗ್ಡೆಯವರು ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ಶಿಫಾರಸು ಮಾಡಿ 2024ರ ಫೆಬ್ರುವರಿ 29ಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು’ ಎಂದು ಹೇಳಿದರು.

ಹಿಂದಿನ ಸಮೀಕ್ಷೆಗೆ ₹165 ಕೋಟಿ ವೆಚ್ಚ

ಎಚ್‌.ಕಾಂತರಾಜ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ 54 ಮಾನದಂಡಗಳನ್ನು ಇಟ್ಟುಕೊಂಡು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿತ್ತು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6.11 ಕೋಟಿ ಜನರಿದ್ದರು. ಈ ಜನಸಂಖ್ಯೆ 2015 ರ ವೇಳೆಗೆ 6.35 ಕೋಟಿ ಎಂದು ಅಂದಾಜಿಸಲಾಗಿತ್ತು. 5.98 ಕೋಟಿ ಜನರು ಸಮೀಕ್ಷೆಗೆ ಒಳಪಟ್ಟಿದ್ದರು. 2015 ರ ಏಪ್ರಿಲ್‌ 11ರಿಂದ 2015ರ ಮೇ 30ರವರೆಗೆ ಸಮೀಕ್ಷೆ ನಡೆದಿತ್ತು. 1.60 ಲಕ್ಷ ಸಿಬ್ಬಂದಿ ಮತ್ತು 1.33 ಲಕ್ಷ ಶಿಕ್ಷಕರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ಕೆ ₹165 ಕೋಟಿ ಖರ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.